ಚನ್ನಗಿರಿ: ಖಾಸಗಿ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ತಡೆಗಟ್ಟಿ ಗ್ರಾಮಸ್ಥರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ಗುರುವಾರ ನಡೆದಿದೆ. ನಲ್ಲೂರಿನಿಂದ ಓಮ್ನಿನಿಯೊಂದರಲ್ಲಿ ಸುಮಾರು 15 ಬಾಕ್ಸ್‌ಗಳ ಮದ್ಯವನ್ನು ಮಂಟರಘಟ್ಟ ಗ್ರಾಮಕ್ಕೆ ತಂದಾಗ ಗ್ರಾಮಸ್ಥರು ವಾಹನ ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಅಬಕಾರಿ ಡಿಸಿ ಬರಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಯಾವುದೇ ಕಾರಣಕ್ಕೂ ಅಕ್ರಮ ಮದ್ಯ ತುಂಬಿರುವ ವಾಹನವನ್ನು ಗ್ರಾಮದಿಂದ ಮುಂದೆ ಹೋಗಲು ಬಿಡುವುದಿಲ್ಲ. ತಕ್ಷಣ ಇದಕ್ಕೆ ಸಂಬಂಧಪಟ್ಟ ಅಧಿಧಿಕಾರಿಗಳು ಸ್ಥಳಕ್ಕೆ ಬರಬೇಕು. ಈ ಮದ್ಯ ಮಾರಾಟದಿಂದ ಗ್ರಾಮದಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.
ಈ ಸಮಸ್ಯೆಗೆ ಮುಕ್ತಿ ನೀಡಬೇಕು ಎಂದು ಪ್ರತಿಭಟನಾ ಗ್ರಾಮಸ್ಥರು ಆಗ್ರಹಿಸಿದರು. ಬಿಜೆಪಿ ಮುಖಂಡ ಬಸವರಾಜಪ್ಪ ಮಾತನಾಡಿ, ಗ್ರಾಮದಲ್ಲಿ ಎಗಿಲ್ಲದೆ ಅಕ್ರಮ ಮದ್ಯವನ್ನು ಹಲವು ವರ್ಷಗಳಿಂದ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಅಬಕಾರಿ ಇಲಾಖೆಗೆ ದೂರೂ ನೀಡಿದರೂ ಏನು ಪ್ರಯೋಜನವಾಗಿಲ್ಲ.
ಅಧಿಧಿಕಾರಿಗಳು ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಗ್ರಾಮದ ಮುಖಂಡ ಶ್ರೀಧರ್ ಮಾತನಾಡಿ, ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ಯುವಕರು ದುಶ್ಚಟಗಳ ದಾಸರಾಗಿದ್ದಾರೆ. ಗ್ರಾಮದಲ್ಲಿ ಕೂಲಿ ಕಾರ್ಮಿಕರ ಪರಿಸ್ಥಿಯಂತೂ ಏಳತೀರದು.
ಕೂಲಿ-ನಾಲಿ ಮಾಡಿ ದುಡಿದ ಹಣವನ್ನು ಪೂರ್ತಿ ಹೆಂಡಕ್ಕೆ ಹಾಕುತ್ತಿದ್ದಾರೆ. ಆದರಿಂದ ಗ್ರಾಮದಲ್ಲಿಯೇ ಈ ಅಕ್ರಮ ಮದ್ಯವನ್ನು ಸ್ಥಳದಲ್ಲಿಯೇ ಗ್ರಾಮಸ್ಥರು ಹಿಡಿದಿದ್ದಾರೆ. ಅಬಕಾರಿ ಡಿಸಿ ಮತ್ತು ಸಂಬಂಧಪಟ್ಟ ಅಧಿಧಿಕಾರಿಗಳು ಬರುವವರೆಗೂ ಸ್ಥಳದಿಂದ ವಾಹನವನ್ನು ಬೀಡುವುದಿಲ್ಲ ಎಂದರು.
ಪಿಎಸ್‌ಐ ವೀರಬಸಪ ಕುಸಲಾಪುರ ಮಾತನಾಡಿ, ತಪಿತಸ್ಥರ ವಿರುದ್ಧ ಕೇಸ್‌ನ್ನು ದಾಖಲು ಮಾಡಲಾಗುವುದು ಹಾಗೂ ಗ್ರಾಮದಲ್ಲಿ ಇನ್ನೂ ಮುಂದೆ ಮದ್ಯಮಾರಾಟ ಮಾಡದಂತೆ ಶಿಸ್ತು ಕ್ರಮವನ್ನು ಜರುಗಿಸಲಾಗುವುದು ಎಂದು ಗ್ರಾಮಸ್ಥರ ಮನವೋಲಿಸಿ ವಾಹನವನ್ನು ಚನ್ನಗಿರಿ ಪೊಲೀಸ್ ಠಾಣೆಗೆ ತರಲು ಯಶಸ್ವಿಯಾದರು. ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು. ಗ್ರಾಮದ ಮುಖಂಡರಾದ ರವಿಕುಮಾರ್, ನಾಗಪ್ಪ, ಕುಮಾರ್ ಸ್ವಾಮಿ ಇತರರಿದ್ದರು.