Advertisement

ನಿವೇಶನಕ್ಕಾಗಿ ಪತ್ನಿಯ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದ ಪತಿರಾಯ

12:10 PM Aug 23, 2017 | Team Udayavani |

ಬೆಂಗಳೂರು: ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಂಡುವಂತೆ ನಿತ್ಯ ಪತ್ನಿಯನ್ನು ಹಿಂಸಿಸುತ್ತಿದ್ದ ವ್ಯಕ್ತಿಯೊಬ್ಬ ಕೊನೆಗೆ ಆಕೆಯನ್ನು ಪ್ಲಾಸ್ಟಿಕ್‌ ಹಗ್ಗದಿಂದ ಕುತ್ತಿಗೆ ಬಿಗಿದು ಕೊಂದಿರುವ ಘಟನೆ ಶ್ರೀರಾಂಪುರದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

Advertisement

ಜಾನಕಿ ಜ್ಯೋತಿ (35) ಕೊಲೆಯಾದ ಮಹಿಳೆ. ಆರೋಪಿ ಪತಿ ಚಂದ್ರಶೇಖರ್‌(43)ಗಾಗಿ ಹುಡುಕಾಟ ನಡೆಯುತ್ತಿದೆ. ಜ್ಯೋತಿ ಹೆಸರಿನಲ್ಲಿದ್ದ ಆಸ್ತಿಯನ್ನು ತನ್ನ ಹೆಸರಿಗೆ ಬರೆದು ಕೊಡುವಂತೆ ಪತಿ ಪೀಡಿಸುತ್ತಿದ್ದ ಎನ್ನಲಾಗಿದ್ದು, ಇದೇ ವಿಚಾರವಾಗಿ ಆಕೆಯನ್ನು ಮಂಗಳವಾರ ನಸುಕಿನಲ್ಲಿ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ಮೂಲದ ಚಂದ್ರಶೇಖರ್‌, ಬೆಂಗಳೂರಿನಲ್ಲಿ ಸಭೆ ಸಮಾರಂಭಗಳಿಗೆ ಹೂವಿನ ಅಲಂಕಾರ ಮಾಡುವ ಕೆಲಸ ಮಾಡಿಕೊಂಡಿದ್ದಾನೆ. 15 ವರ್ಷಗಳ ಹಿಂದೆ ಜಾನಕಿ ಜ್ಯೋತಿ ಎಂಬಾಕೆಯನ್ನು ವಿವಾಹವಾಗಿದ್ದು, ದಂಪತಿಗೆ ತ್ರಿವಳಿ ಗಂಡು ಮಕ್ಕಳು ಸೇರಿದಂತೆ ಐವರು ಮಕ್ಕಳಿದ್ದಾರೆ. ಈ ಮೊದಲು ಮಾಗಡಿ ರಸ್ತೆ ಮತ್ತು ಜೆ.ಜೆ ನಗರದಲ್ಲಿ ನೆಲೆಸಿದ್ದರು. 

ತಮಿಳುನಾಡಿನಲ್ಲಿರುವ ಖಾಲಿ ನಿವೇಶನವನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಪತ್ನಿಗೆ ಆಗಾಗ ಪೀಡಿಸುತ್ತಿದ್ದ.  ಇದು ದಂಪತಿ ನಡುವೆ ಗಲಾಟೆಗೆ ಕಾರಣವಾಗಿತ್ತು. ಇದರಿಂದ ಬೇಸರಗೊಂಡಿದ್ದ ಆಕೆ ನಾಲ್ಕು ವರ್ಷಗಳ ಹಿಂದೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇಧನಕ್ಕೂ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಶ್ರೀರಾಮಪುರದ ಆನಂದಪುರದಲ್ಲಿರುವ ಪೋಷಕರ ಮನೆಯ ಬಳಿ ಪ್ರತ್ಯೇಕವಾಗಿ ಮಕ್ಕಳೊಂದಿಗೆ ನೆಲೆಸಿದ್ದರು. ಜೀವನ ನಿರ್ವಹಣೆಗಾಗಿ ಖಾಸಗಿ ಕಂಪೆನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಹೋಗುತ್ತಿದ್ದರು.

 ಈ ಮಧ್ಯೆ ಪತಿ ಪತ್ನಿ ಆರು ತಿಂಗಳಿಂದ ಒಂದೇ ಮನೆಯಲ್ಲಿ ನೆಲೆಸಿದ್ದರು. ಆದರೆ ಎರಡು ತಿಂಗಳಿನಿಂದ ಹಣ ಮತ್ತು ನಿವೇಶನ ಕೊಡುವಂತೆ ಪತಿ ಮತ್ತೆ ಪೀಡಿಸುತ್ತಿದ್ದ. ಸೋಮವಾರ ರಾತ್ರಿ ಸಹ ಇದೇ ವಿಚಾರವಾಗಿ ಜಗಳವಾಗಿದೆ. ಇದು ವಿಕೋಪಕ್ಕೆ ಹೋಗಿತ್ತು ಎನ್ನಲಾಗಿದೆ. ಮಂಗಳವಾರ ನಸುಕಿನಲ್ಲಿ ಮನೆಯಲ್ಲಿದ್ದ ಪ್ಲಾಸ್ಟಿಕ್‌ ಹಗ್ಗದಿಂದ ಚಂದ್ರಶೇಖರ್‌ ತನ್ನ ಪತ್ನಿ ಜ್ಯೋತಿಯ ಕುತ್ತಿಗೆ ಬಿಗಿದು ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಅಧಿಕಾರಿಯೊಬ್ಬರು”ಉದಯವಾಣಿ’ಗೆ ವಿವರಿಸಿದರು.

Advertisement

ಕುತ್ತಿಗೆಯಲ್ಲಿದ್ದ ಹಗ್ಗ ಕಂಡು ಗಾಬರಿಯಾದ ಮಕ್ಕಳು 
ಮುಂಜಾನೆ 4 ಗಂಟೆ ಸುಮಾರಿಗೆ ಮಗುವೊಂದು ಎಚ್ಚರಗೊಂಡಿದ್ದು, ತಾಯಿಯನ್ನು ಎಬ್ಬಿಸಲು ಯತ್ನಿಸಿದೆ. ಆಕೆ ಪ್ರತಿಕ್ರಿಯೆ ನೀಡಿಲ್ಲ. ಆಗ ಅಕ್ಕನ ಬಳಿ ಹೋಗಿ ಅಳತೊಡಗಿದೆ. ಬಳಿಕ ಹಿರಿಯ ಪುತ್ರಿ ಬಂದು ತಾಯಿಯನ್ನು ಎಬ್ಬಿಸಲು ಯತ್ನಿಸಿದಾಗ, ಆಕೆಯ ಕುತ್ತಿಗೆಯಲ್ಲಿದ್ದ ಹಗ್ಗವನ್ನು ಕಂಡು ಗಾಬರಿಗೊಂಡು, ಹಗ್ಗವನ್ನು ತೆಗೆದಿದ್ದಾಳೆ. ಕೂಡಲೇ ಹತ್ತಿರದಲ್ಲಿದ್ದ ಅಜ್ಜಿಯ ಮನೆಗೆ ಹೋಗಿ ವಿಷಯ ತಿಳಿಸಿದ್ದಾಳೆ. ಅಷ್ಟರಲ್ಲಿ ಸ್ಥಳೀಯರು ಸ್ಥಳಕ್ಕೆ ಬಂದು ಜ್ಯೋತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಿಶೀಲನೆ ನಡೆಸಿದ ವೈದ್ಯರು ಜ್ಯೋತಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. 

ಅಕ್ರಮ ಸಂಬಂಧ
ಆರೋಪಿ ಚಂದ್ರಶೇಖರ್‌ ಕೆ.ಪಿ.ಅಗ್ರಹಾರದಲ್ಲಿ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡು ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇದನ್ನು ಪತ್ನಿ ಜ್ಯೋತಿ ಪ್ರಶ್ನಿಸಿದ್ದು, ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಅಲ್ಲದೇ ಜ್ಯೋತಿ ಹೆಸರಿನಲ್ಲಿ ಕೆಲ ಆಸ್ತಿಯನ್ನು ಪ್ರೇಯಸಿಯ ಹೆಸರಿಗೆ ಮಾಡಿಕೊಡಲು ಚಂದ್ರಶೇಖರ್‌ ನಿರ್ಧರಿಸಿದ್ದ. ಇದಕ್ಕಾಗಿಯೇ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಸೋದರ ಸಂಬಂಧಿಕರ ವಿಚಾರಣೆ
ಪತ್ನಿ ಜ್ಯೋತಿಯನ್ನು ಕೊಲೆಗೈದ ಆರೋಪಿ ಚಂದ್ರಶೇಖರ್‌, ನಸುಕಿನಲ್ಲೇ ತನ್ನ ಬೈಕ್‌ ಏರಿ ಬಾಪೂಜಿನಗರದಲ್ಲಿರುವ ತನ್ನ ಪೋಷಕರ ಮನೆ ಬಳಿ ನಿಲ್ಲಿಸಿ ಪರಾರಿಯಾಗಿದ್ದಾನೆ. ಈ ಸಂಬಂಧ ಆರೋಪಿಯ ಸೋದರ ಸಂಬಂಧಿಗಳನ್ನು ವಿಚಾರಣೆ ನಡೆಸಲಾಗಿದೆ. ಆರೋಪಿ ತಮಿಳುನಾಡು ಕಡೆ ತಲೆಮರೆಸಿಕೊಂಡಿರುವ ಮಾಹಿತಿಯಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next