Advertisement

ನರಿ ಮತ್ತು ನಾಯಿಯ ಹಗೆತನ

06:04 PM Feb 22, 2020 | mahesh |

ಒಂದಾನೊಂದು ಕಾಲದಲ್ಲಿ ಒಬ್ಬ ಕೃಷಿಕ ಒಂದು ಊರಿನಲ್ಲಿ ಕೃಷಿ ಮಾಡುತ್ತಿದ್ದ. ತನ್ನ ಜಮೀನಿಗೆ ಬೇಕಾದಷ್ಟು ಜಾನುವಾರುಗಳನ್ನು ಸಾಕಿಕೊಂಡಿದ್ದ. ಅವನಲ್ಲಿ ಕೆಲವು ಕೋಳಿಗಳು ಇದ್ದವು. ತನಗೆ ಬೇಕಾದಷ್ಟು ಕೋಳಿಗಳನ್ನು ಇಟ್ಟುಕೊಂಡು ಹೆಚ್ಚಿನವುಗಳನ್ನು ಮಾರಾಟ ಮಾಡುತ್ತಿದ್ದ. ಅವನ ಮನೆಯಲ್ಲಿ ಒಂದು ದೊಡ್ಡದಾದ ನಾಯಿ ಕೂಡ ಇತ್ತು. ಇದು ಮನೆಯನ್ನು ಕಾಯುತ್ತ, ಮನೆಯ ಬಳಿ ಯಾರನ್ನೂ ಬರಲು ಬಿಡುತ್ತಿರಲಿಲ್ಲ. ಆದರೆ ತನ್ನ ಮನೆಯ ಜಾನುವಾರು, ಕೋಳಿಗಳಿಗೂ ಏನು ತೊಂದರೆ ಮಾಡುತ್ತಿರಲಿಲ್ಲ. ದಿನವೂ ಮುಂಜಾನೆ ಕೋಳಿ ಕೂಗಿದ ಬಳಿಕವೇ ಬೆಳಗಾಗುವುದಲ್ಲವೇ. ಕೃಷಿಕನ ಮನೆಯ ಕೋಳಿಗಳ ಕೂಗು ಹತ್ತಿರದ ಕಾಡಿನಲ್ಲಿದ್ದ ನರಿಯ ಕಿವಿಗೆ ಕೇಳಿಸುತ್ತಿತ್ತು. ಈ ಕೋಳಿಗಳನ್ನು ಹಿಡಿಯಲು ಏನು ಉಪಾಯ ಮಾಡುವುದೆಂದು ನರಿ ಯೋಚಿಸುತ್ತಿತ್ತು.

Advertisement

ಒಂದು ದಿನ ಆ ಮನೆಯಲ್ಲಿ ಎಲ್ಲರೂ ನಿದ್ದೆಗೆ ಜಾರಿದ ಮೇಲೆ ಮನೆಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಕುಳಿತು ಯಾವುದೋ ಸತ್ತ ಪ್ರಾಣಿಯ ಎಲುಬನ್ನು ಜಗಿಯುತ್ತಾ ಇತ್ತು. “ಕಟಕಟ’ಎಂದು ಜಗಿಯುವ ಶಬ್ದವು ನಾಯಿಯ ಕಿವಿಗೆ ಬಿತ್ತು. ಕುತೂಹಲದಿಂದ ನಾಯಿಯು ಶಬ್ದ ಬರುವ ಕಡೆಗೆ ಮೆಲ್ಲ, ಮೆಲ್ಲನೆ ಹೋಯಿತು. ಸ್ವಲ್ಪ ದೂರದಲ್ಲಿದ್ದ ನರಿಯನ್ನು ನೋಡಿ, “”ಓ ನರಿಯಣ್ಣಾ , ನೀನು ಹೆದರಬೇಡ. ನೀನು ಏನನ್ನು ತಿನ್ನುತ್ತಿರುವಿ. ಅದು ತುಂಬಾ ಪರಿಮಳ ಬರುವಂತಹ ವಸ್ತು” ಎಂದು ಹೇಳುತ್ತ ಹೇಳುತ್ತ, ನರಿಯ ಹತ್ತಿರ ಹೋಯಿತು. ನರಿ ತನ್ನಲ್ಲಿದ್ದ ಒಂದು ಚಿಕ್ಕ ಎಲುಬಿನ ತುಂಡನ್ನು ಅಲ್ಲೇ ಬಿಟ್ಟು ಸ್ವಲ್ಪ ದೂರ ಹೋಗಿ, ಅಲ್ಲಿ ಕುಳಿತುಕೊಂಡು ತನ್ನಲ್ಲಿದ್ದ ಇನ್ನೊಂದು ತುಂಡನ್ನು ಜಗಿಯಲಾರಂಭಿಸಿತು. ನರಿ ಬಿಟ್ಟು ಹೋದ ಎಲುಬಿನ ತುಂಡನ್ನು ನಾಯಿ ಕೂಡ ತಿನ್ನುತ್ತಾ “ಇದು ತುಂಬಾ ರುಚಿ ಆಗಿದೆ. ಇನ್ನೂ ಹೆಚ್ಚಿನ ತುಂಡುಗಳು ನರಿಯ ಬಳಿ ಇರಬಹುದು’ ಎಂದುಕೊಂಡಿತು. ನರಿಯ ಉಪಾಯವೂ ಇದೇ ಆಗಿತ್ತು ತಾನೆ.

ನರಿಯ ಗೆಳೆತನ ಮಾಡಿದರೆ ಹೆಚ್ಚು ಮೂಳೆ ಸಿಕ್ಕೀತು ಎಂದು ಯೋಚಿಸಿದ ನಾಯಿ, “”ಗೆಳೆಯ ನರಿಯಣ್ಣಾ, ನೀನು ಹೆದರಬೇಡ ನಿನಗೆ ಏನೂ ತೊಂದರೆ ಮಾಡುವುದಿಲ್ಲ” ಎಂದು ಹತ್ತಿರ ಹೋಯಿತು. ಆ ನರಿಗೂ ಈ ನಾಯಿಯ ಗೆಳೆತನ ಮಾಡಬೇಕೆಂದು ಕೆಲವು ದಿನಗಳಿಂದ ಆಸೆಯಾಗಿತ್ತು. “”ಗೆಳೆಯ, ನೀನು ತಿಂದಂತಹ ಎಲುಬಿನ ತುಂಡು ಹೇಗಿತ್ತು?” ಎಂದು ನರಿ ಕೇಳಿತು. “”ತುಂಬಾ ತುಂಬಾನೆ ರುಚಿ ಇತ್ತು. ಇನ್ನೂ ಸ್ವಲ್ಪ ಇದೆಯಾ? ಇದ್ದರೆ ನನಗೆ ಕೊಡು” ಎಂದು ಕೇಳುವಾಗ, “”ಛೇ ಛೇ ಇದು ತುಂಬಾ ಕಷ್ಟಪಟ್ಟು ತಂದಿರುವೆ” ಎಂದು ಉತ್ತರಿಸಿತು. ಅಲ್ಲದೆ ಇದೇ ಒಳ್ಳೆಯ ಸಮಯವೆಂದು ಯೋಚಿಸಿ, “”ಗೆಳೆಯಾ ನಿನ್ನ ಮನೆಯಲ್ಲಿ ದೊಡ್ಡ ದೊಡ್ಡ ಕೋಳಿ ಇದೆಯಲ್ಲವೆ” ಎಂದು ಪ್ರಶ್ನಿಸಿತು. ನಾಯಿ ತನ್ನ ಬಾಲವನ್ನು ಅಲ್ಲಾಡಿಸುತ್ತಾ, “”ಹೌದು ಇದೆ. ಈಗ ಏನಾಗಬೇಕು ನಿನಗೆ ಗೆಳೆಯ” ಎಂದು ಕೇಳಲು, “”ನಿನ್ನ ಮನೆಯ ಒಂದೆರಡು ಕೋಳಿಗಳನ್ನು ನನಗೆ ಕೊಟ್ಟರೆ ನಿನಗೆ ರಾಶಿ ರಾಶಿ ಇಂತಹ ರುಚಿಕರವಾದ ಎಲುಬನ್ನು ಕೊಡುತ್ತೇನೆ. ಅದನ್ನು ತಿಂದು ತೇಗಬಹುದು” ಎಂದು ಕೋರಿಕೆ ಸಲ್ಲಿಸಿತು. ಈ ಮಾತು ಕೇಳಿ ನಾಯಿಗೆ ಆಸೆ ಹೆಚ್ಚಾಯಿತು. “”ಈಗ ನಾನೇನು ಮಾಡಬೇಕು ಎಂದು ತಿಳಿಸು” ಎಂದಿತು. “”ನಾಳೆ ಇದೇ ಸಮಯಕ್ಕೆ ಇಲ್ಲಿಯೇ ಬರುತ್ತೇನೆ” ಎಂದು ಹೇಳಿ ನರಿ ಅಲ್ಲಿಂದ ತೆರಳಿತು. ಮರುದಿನ ಅದೇ ಸಮಯಕ್ಕೆ ಸರಿಯಾಗಿ ಮನೆಯ ಹತ್ತಿರ ಹೋಗಿ ಕೋಳಿಗಳನ್ನು ಕೊಡುವಂತೆ ಕೇಳಿತು. ನಾಯಿಯು ನರಿಯನ್ನು ಗೂಡಿನ ಕಡೆಗೆ ಕರೆದುಕೊಂಡು ಹೋಯಿತು. ಗೂಡಿನ ಮೇಲೆ ಕುಳಿತು ಗೂಡಿಗೆ ಮುಚ್ಚಿದ ಹಲಗೆಯನ್ನು ಎತ್ತಿ ಹಿಡಿಯಿತು. ನಾಯಿಯು ಕೋಳಿಯನ್ನು ಮೆಲ್ಲನೆ ಹಿಡಿದು ತಂದು ನರಿಗೆ ಕೊಟ್ಟಿತು. ಹೀಗೆ ಒಂದಾದ ಮೇಲೆ ಒಂದು ಎಂಬಂತೆ ಎಲ್ಲ ಕೋಳಿಗಳೂ ನರಿಯ ಪಾಲಾಯಿತು. “”ಗೂಡಿನ ಮೂಲೆಯಲ್ಲಿ ಕೋಳಿ ಅವಿತಿರಬಹುದು ನೋಡು” ಎಂದು ನಾಯಿಯನ್ನು ಗೂಡಿನೊಳಗೆ ಹೋಗುವಂತೆ ಒತ್ತಾಯಿಸಿತು. ನಾಯಿಯು ಗೂಡಿನ ಒಳಗೆ ಹೋದ ಕೂಡಲೇ ಹಲಗೆಯನ್ನು ಮುಚ್ಚಿಬಿಟ್ಟಿತು. ದೊಡ್ಡ ಕೋಳಿಗಳನ್ನು ಹಿಡಿದುಕೊಂಡು ಕಾಡಿಗೆ ಓಡಿತು.

ಬೆಳಿಗ್ಗೆ ಆಗುತ್ತಲೇ ಮನೆಯ ಯಜಮಾನ ಕೃಷಿಕ ಗೂಡಿನ ಬಾಗಿಲು ತೆರೆದಾಗ ಕೋಳಿಗಳು ಯಾಕೆ ಹೊರಗೆ ಬರಲಿಲ್ಲ ಎಂದು ಯೋಚಿಸುತ್ತ ಗೂಡಿನಲ್ಲಿ ಇಣುಕಿ ನೋಡಿದ. ಮನೆಯ ನಾಯಿ ಮೆಲ್ಲನೆ ಹೊರಗೆ ಬಂತು. ಗೂಡಿನಲ್ಲಿ ಎರಡು ದೊಡ್ಡ ಕೋಳಿ, ಮರಿ ಕೋಳಿ ಇಲ್ಲದ್ದನ್ನು ನೋಡಿದ ಯಜಮಾನನಿಗೆ ಕೋಪ ಬಂದು, “ಈ ನಾಯಿಯು ತಿಂದಿರಬೇಕು’ ಎಂದು ಭಾವಿಸಿದ. ಅಲ್ಲದೆ ನಾಯಿಗೆ ಚೆನ್ನಾಗಿ ಬಾರಿಸಿದ. ತನಗೆ ಮೋಸ ಮಾಡಿದ ನರಿಯನ್ನು ಬಿಡಬಾರದು ಎಂದು ಹಗೆ ಇರಿಸಿಕೊಂಡಿತು. ನಾಯಿ ಮತ್ತು ನರಿಯ ನಡುವೆ ಹಗೆತನಕ್ಕೆ ಈ ಕತೆಯೇ ಕಾರಣ.

ಗೀತಾಶ್ರೀ

Advertisement
Advertisement

Udayavani is now on Telegram. Click here to join our channel and stay updated with the latest news.

Next