ನವದೆಹಲಿ: “ಕರ್ನಾಟಕದ ಇತ್ತೀಚಿನ ರಾಜಕೀಯ ವಿದ್ಯಮಾನದಲ್ಲಿ ನಿಜವಾಗಿಯೂ ಕುದುರೆ ವ್ಯಾಪಾರ ಮಾಡಿದ್ದು ಕಾಂಗ್ರೆಸ್ಸಿಗರೇ. ಕಡಿಮೆ ಸ್ಥಾನಗಳನ್ನು ಪಡೆದ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿದ್ದೇ ಅವರ ಕುದುರೆ ವ್ಯಾಪಾರಕ್ಕೆ ಸಾಕ್ಷಿ” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗುಡುಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ನಾಲ್ಕು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ “ಇಂಡಿಯಾ ಟಿವಿ’ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಇಂಡಿಯಾ ಟಿವಿಯ ಸಂಪಾದಕ ರಜತ್ ಶರ್ಮಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಬಿಜೆಪಿಯು ಬಹುಮತಕ್ಕಾಗಿ ಕುದುರೆ ವ್ಯಾಪಾರಕ್ಕಿಳಿದಿದೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಗಮನ ಸೆಳೆದ ರಜತ್‌ಗೆ ಉತ್ತರಿಸಿದ ಶಾ, “ನಾವು ಹಾಗೆ ನಾವು ಅಡ್ಡದಾರಿ ಹಿಡಿದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಹುಮತ ಸಾಬೀತುಪಡಿಸುತ್ತಿದ್ದೆವು. ಅಂಥ ಅಡ್ಡದಾರಿಯೇನಿದ್ದರೂ ಕಾಂಗ್ರೆಸ್ಸೇ ಹಿಡಿದಿದೆ”ಎಂದರು.
“ಕರ್ನಾಟಕದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತಿದ್ದ ಜನರು, ಆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿ, ಬಿಜೆಪಿ ಬೆಂಬಲಿಸಿದರು. ಆದರೆ, ಬಹುಮತ ಬರಲಿಲ್ಲವಷ್ಟೇ” ಎಂದು ವಿಷಾದಿಸಿದರು. “ರಾಜ್ಯಪಾಲರು ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದರು.
ಆ ಸಂದರ್ಭದಲ್ಲಿ, ಜನ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳಿಗೆ ತೆರಳಿ ಜನರೊಂದಿಗೆ ಬೆರೆತು ವಿಜಯೋತ್ಸವ, ವಿಚಾರ ವಿನಿಮಯ ನಡೆಸಲು ಕಾಲಾವಕಾಶ ಸಿಗುತ್ತಿತ್ತು. ಆಗ, ಅವರಿಗೂ ಜನರ ನಾಡಿಮಿಡಿತ ಅರ್ಥವಾಗಿ ಬಿಜೆಪಿ ಜತೆ ಕೈ ಜೋಡಿಸಲು ಮುಂದೆ ಬರುತ್ತಿದ್ದರು” ಎಂದರು.