Advertisement

ನೀರಿಲ್ಲದ ದಿಗಿಲು, ಅನ್ನದಾತರು ನೋಡುತ್ತಿದ್ದಾರೆ ಮುಗಿಲು!

03:53 PM May 28, 2023 | Team Udayavani |

ಕಾರ್ಕಳ: ಬರದ ಕೆನ್ನಾಲಿಗೆಗೆ ಸಿಲುಕಿರುವ ಅಡಿಕೆ ತೋಟಗಳನ್ನು ಉಳಿಸಿ ಕೊಳ್ಳುವುದೇ ಬೆಳೆಗಾರರಿಗೆ ದುಸ್ಸಾಹಸವಾಗಿದ್ದು, ಇನ್ನು ಸಹ ಮಳೆ ಬರದಿದ್ದರೆ ತಾಲೂಕಿನಲ್ಲಿ ಜಲಕ್ಷಾಮ ಭೀತಿ ಎದುರಾಗಿದೆ.

Advertisement

ನೀರಿಲ್ಲದೆ ತೋಟಗಾರಿಕೆ ಬೆಳೆಗಳು ಬಿಸಿಲ ತಾಪಮಾನಕ್ಕೆ ಕರಟಿ ಹೋಗಿವೆ. ಕೃಷಿಯನ್ನೇ ಜೀವನಾಧಾರವಾಗಿರಿಸಿಕೊಂಡ ರೈತರು ಮಳೆಗಾಗಿ ಮುಗಿಲಿನೆಡೆಗೆ ಮುಖ ಮಾಡಿದ್ದಾರೆ. ಅಂತಹ ಪರಿಸ್ಥಿತಿಗೆ ಈ ಬಾರಿಯ ಹವಾಮಾನ ವೈಪರೀತ್ಯ ಕಾರಣವಾಗಿದೆ.

ಶೇ.15ರಿಂದ 20ರಷ್ಟು ಹಾನಿ
ಮಲೆನಾಡು ಸೇರಿದಂತೆ ಕರಾವಳಿ ತೀರದ ಜನ ಹೆಚ್ಚಾಗಿ ಬೆಳೆಯುವ ಅಡಿಕೆ ಕೃಷಿಗೆ ಬೇಸಗೆ ಭಾರೀ ಹೊಡೆತ ನೀಡಿದ್ದು, ನೀರಿನ ಅಭಾವದಿಂದ ಕೃಷಿ ಸಂಪೂರ್ಣ ನೆಲಕಚ್ಚಿದೆ. ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಬಾಳೆ ಕೃಷಿಗಳು ನೀರಿಲ್ಲದೆ ಸುಟ್ಟುಹೋಗಿವೆ. ಹಸುರಿನಿಂದ ಕಂಗೊಳಿಸುತ್ತಿದ್ದ ಕೃಷಿ ತೋಟಗಳು ಕೆಂಬಣ್ಣಕ್ಕೆ ಪರಿವರ್ತನೆಗೊಂಡಿವೆ. ಅಡಿಕೆ, ತೆಂಗು, ಬಾಳೆ ಕೃಷಿಗೆ ಶೇ 15ರಿಂದ 20ರಷ್ಟು ಹಾನಿಯಾಗಿದೆ. ನೀರಿಲ್ಲದೆ ಅಡಿಕೆ ಗಿಡಗಳು ಸಾಯುತ್ತಿವೆ.

ಎಲ್ಲಿ , ಎಷ್ಟು ಕೃಷಿ ಬೆಳೆಯುತ್ತಾರೆ?
ಕಾರ್ಕಳ ಹಾಗೂ ಹೆಬ್ರಿ ತಾ|ನಲ್ಲಿ ಒಟ್ಟು 29,044 ಹೆಕ್ಟೇರ್‌ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದು ಅದರಲ್ಲಿ ಭತ್ತ 7,020 ಹೆಕ್ಟೇರ್‌, ಅಡಿಕೆ 9,097 ಹೆಕ್ಟೇರ್‌, ತೆಂಗು 8,294 ಹೆಕ್ಟೇರ್‌, ಬಾಳೆ 896 ಹೆಕ್ಟೇರ್‌, ಗೇರು 1,576 ಹೆಕ್ಟೇರ್‌, ಕಾಳುಮೆಣಸು 1,034 ಹೆಕ್ಟೇರ್‌ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಅದರಲ್ಲಿ ತೋಟಗಾರಿಕಾ ಬೆಳೆಗಳು 24,480 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ಆದಾಯಕ್ಕೆ ಭಾರೀ ಹೊಡೆತ
ಕೃಷಿ ಬಳಕೆಗೆ ಉಪಯೋಗಿಸುತ್ತಿದ್ದ ಬೋರ್‌ ವೆಲ್‌, ನದಿ ನೀರು ಎಲ್ಲವೂ ಬರಡಾಗಿದ್ದು ಕೃಷಿ ಕಾರ್ಯಕ್ಕೆ ತಡೆಯಾಗಿದೆ. ಕೃಷಿಕರ ಆದಾಯ ಮೂಲಕ್ಕೂ ಹೊಡೆತ ಬಿದ್ದಿದೆ. ಅಡಿಕೆಗೆ ಬೇಡಿಕೆ, ದರ ಜಾಸ್ತಿಯಿದ್ದರೂ ಕೃಷಿ ಮಾಡುವುದಕ್ಕೆ ಸಾಧ್ಯವಾಗುತಿಲ್ಲ.

Advertisement

ಹರಿವ ಜಲಮೂಲಗಳೇ ಕೃಷಿಗೆ ಆಧಾರ
ಕಾರ್ಕಳ ತಾ|ನ ಜನತೆ ಕೃಷಿ ಚಟುವಟಿಕೆಗೆ ನದಿ ಮೂಲದ ನೀರನ್ನೇ ಹೆಚ್ಚು ಆಶ್ರಯಿಸಿಕೊಂಡಿದ್ದಾರೆ. ಇಲ್ಲಿ ಹರಿಯುವ ಸೀತಾನದಿ ಹಾಗೂ ಎಣ್ಣೆಹೊಳೆಯ ನದಿ ಹಾಗೂ ಶಾಂಭವಿ ನದಿಯ ನೀರನ್ನು ಅವಲಂಬಿಸಿ ಕೃಷಿ ಮಾಡುತ್ತಾರೆ. ಅವುಗಳು ಬತ್ತಿದ ಕಾರಣದಿಂದ ಕೆರ್ವಾಶೆೆೆ, ಹೊಸ್ಮಾರು, ಈದು, ಶಿರ್ಲಾಲು, ಅಜೆಕಾರು, ಎಣ್ಣೆಹೊಳೆ ಹೆರ್ಮುಂಡೆ, ಹಿರ್ಗಾನ ಇನ್ನಾ, ಕುಕ್ಕುಂದೂರು, ಬೈಲೂರು, ಕೌಡೂರು, ಬೆಳ್ಮಣ್‌, ನಂದಳಿಕೆ, ಸೂಡಾ, ಬೋಳ ಹಾಗೂ ಮುಂಡ್ಕೂರು ಗ್ರಾಮಗಳಲ್ಲಿ ಹಾಗೂ ಹೆಬ್ರಿಯ ಚಾರ, ಶಿವಪುರ, ಬೆಳ್ವೆ, ಹಂದಿಕಲ್ಲು, ನಾಡಾ³ಲು, ಮುನಿಯಾಲು, ಕುಚ್ಚಾರು, ಭಾಗದಲ್ಲಿ ತೋಟಗಾರಿಕಾ ಬೆಳೆಗೆ ಸಮಸ್ಯೆಯಾಗಿದೆ.

ಉಭಯ ತಾಲೂಕುಗಳಲ್ಲಿ ನೀರಿಲ್ಲದೆ, ಸುಡು ಬಿಸಿಲಿನಿಂದ‌ ಹಾನಿಗೀಡಾದ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ದೊರಕಿಸಿಕೊಡಿ ಎಂದು ಕೃಷಿಕರು ಅಧಿಕಾರಿಗಳ ಬಳಿ ಮೊರೆಯಿಡುತ್ತಿದ್ದು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಸರಕಾರ ಕೃಷಿಕರ ನೋವಿಗೆ ಸ್ಪಂದಿಸಬೇಕು. ಕರಾವಳಿ ಶಾಸಕರು ಧ್ವನಿ ಎತ್ತಬೇಕು, ಕೃಷಿಕರ ನೋವಿಗೆ ಸ್ಪಂದನೆ ಸಿಗುವಂತೆ ಆಗಬೇಕು ಎಂಬುದು ಕೃಷಿಕರ ಒತ್ತಾಸೆಯಾಗಿದೆ.

ನಿತ್ಯ ಬಳಕೆಗೆ ನೀರಿಲ್ಲ
ಇನ್ನು ಕೃಷಿಯ ಮಾತೇ ಇಲ್ಲ!
ನಿತ್ಯ ಬಳಕೆಗೆ ನೀರಿಲ್ಲ. ಇನ್ನು ಕೃಷಿಯ ಮಾತೇ ಇಲ್ಲ. ಆದರೂ ನೀರಿಗಾಗಿ ಬವಣೆ ಪಡುವುದು ನಿಂತಿಲ್ಲ. ಕೊಳವೆ ಬಾವಿ ನಿರ್ಮಾಣ ಕೆಲಸ ನಡೆಯುತ್ತಿದೆ. ಸುಮಾರು 600ರಿಂದ 700 ಅಡಿ ಕೊಳವೆಬಾವಿಯನ್ನು ಕೊರೆದರೂ ನೀರು ಸಿಗುತ್ತಿಲ್ಲ. ಮರ್ಣೆ, ಶಿರ್ಲಾಲು, ಕೆರ್ವಾಶೆ, ಹಾಗೂ ಗ್ರಾಮೀಣ ಭಾಗದಲ್ಲಿ ಕೊಳವೆ ಬಾವಿಯ ಮೊರೆ ಹೋದರೂ ನೀರು ಸಿಗುತ್ತಿಲ್ಲ. ವಾರಕ್ಕೆ 20ರಿಂದ 30ಕ್ಕೂ ಹೆಚ್ಚು ಕೊಳವೆ ಬಾವಿಯನ್ನು ತೋಡಲಾಗುತ್ತಿದ್ದರೂ ಅದರಲ್ಲಿ 10 ರಿಂದ 12 ಕೊಳವೆ ಬಾವಿಗಳಲ್ಲಿ ಮಾತ್ರ ನೀರು ಲಭ್ಯವಾಗುತ್ತಿದೆ.

ಮೇಲಧಿಕಾರಿಗಳ ಗಮನಕ್ಕೆ
ಕಾರ್ಕಳ, ಹೆಬ್ರಿ ಹಾಗೂ ಕಾರ್ಕಳ ತಾ|ಗಳಲ್ಲಿ ಶೇ. 15ರಿಂದ 20ರಷ್ಟು ತೋಟಗಾರಿಕಾ ಬೆಳೆಗೆ ಹಾನಿಯಾಗಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಹಾನಿ, ನಷ್ಟದ ಕುರಿತು ಮಾಹಿತಿಯನ್ನು ಜಿಲ್ಲಾಧಿಕಾರಿ ಸೇರಿದಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ.
-ಶ್ರೀನಿವಾಸ್‌, ನಿರ್ದೇಶಕರು
ಕಾರ್ಕಳ ತೋಟಗಾರಿಕಾ ಇಲಾಖೆ

ಮಳೆಗಾಗಿ ಕಾತರ
ಮಳೆ ಬರುವುದನ್ನೇ ಎದುರು ನೋಡುತ್ತಿದ್ದೇವೆ.ಅಡಿಕೆ ಕೃಷಿಯೇ ನಮ್ಮ ಜೀವನಾಧಾರ. ಒಳ್ಳೆಯ ಕ್ರಯ ಇದ್ದಾಗ ನೀರಿನ ಕೊರತೆಯಿಂದ ಕೃಷಿ ಚಟುವಟಿಕೆ ಸಾಧ್ಯವಾಗದೆ ಬೆಳೆ ಕೈಕೊಟ್ಟಾಗ ಏನು ಮಾಡಲು ಸಾಧ್ಯ. ಮಳೆ ಬರುವುದನ್ನೇ ಕಾಯುತ್ತಿದ್ದೇವೆ.
-ನರಸಿಂಹ, ಅಡಿಕೆ ಬೆಳೆಗಾರ, ಕಾರ್ಕಳ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next