ದೇವರ ಹೆಸರಲ್ಲಿ ನಡೆಯುವ ಸುಲಿಗೆ, ಅನಿಯಮಿತ ಖರ್ಚುಗಳು ಶಿಕ್ಷಣ ಮತ್ತು ಅಸಹಾಯಕರ ಒಳಿತಿಗೆ ಬಳಕೆಯಾಗಲಿ ಎಂದು ಮಾಜಿ ಸಚಿವ ಎಸ್.ಕೆ.ಕಾಂತಾ ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
ತಾಲೂಕಿನ ಹಾಗರಗುಂಡಗಿಯ ವಿರಕ್ತ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ಚನ್ನವೀರ ಶಿವಯೋಗಿ ಶಿವಾನುಭವ ಮಂಟಪ ಲೋಕಾರ್ಪಣೆ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೈಚಾರಿಕವಾಗಿ, ವೈಜ್ಞಾನಿಕವಾಗಿ ಮುಂದುವರಿದ ಈ ದಿನಮಾನಗಳಲ್ಲಿಯೂ ಅಜ್ಞಾನ ಬೆಳೆಸಿಕೊಂಡು ಬಂದಿರುವ ನಾವು ಬುದ್ದ, ಬಸವ, ಅಂಬೇಡ್ಕರ್ ವಿಚಾರಧಾರೆಯನ್ನು ಸಮಾಜದಲ್ಲಿ ಹರಡಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಸಾರಂಗಮಠದ ಜಗದ್ಗುರು ಪೂಜ್ಯ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಅಂತರಂಗದಲ್ಲಿ ಅಡಗಿರುವ ಕೊಳೆ ಕಿತ್ತು ಹಾಕಲು ಬಸವಾದಿ ಶರಣರ ವಿಚಾರಗಳು ಅಗತ್ಯವಾಗಿದ್ದು, ಅವರ ತತ್ವಗಳನ್ನು ಆಚರಣೆಯಲ್ಲಿ ತರಬೇಕಿದೆ ಎಂದರು. ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ವಚನ ಸಾಹಿತ್ಯ ವೈಚಾರಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿಂತಿದೆ. ಅಸಮಾನತೆ, ಅಂಧಕಾರ, ಅಮಾನವೀಯತೆ ಮೆಟ್ಟಿ ಸರ್ವ ಸಮಾನತೆ ಮಾನವೀಯ ಮೌಲ್ಯಗಳನ್ನು ಕಟ್ಟಿಕೊಟ್ಟ ಪ್ರಪಂಚದ ಪ್ರಥಮ ಸಾಹಿತ್ಯವಾಗಿದೆ ಎಂದು ಹೇಳಿದರು.
ಗ್ರಾಮಸ್ಥರು ಭಾಗವಹಿಸಿದ್ದರು.