Advertisement

Holalkere: ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಗರಿಮೆ ಪುರಸಭೆಯ ಪೌರಕಾರ್ಮಿಕರಿಗೆ ಸಲ್ಲಬೇಕು

03:50 PM Sep 23, 2023 | Team Udayavani |

ಹೊಳಲ್ಕೆರೆ: ಪುರಸಭೆಯ ವ್ಯಾಪ್ತಿಯ ಸ್ವಚ್ಛತೆ ಕಾಪಾಡುವ ಸರ್ಕಾರದ ಸೈನಿಕರೇ ಪೌರಕಾರ್ಮಿಕರು. ಸ್ವಚ್ಛತೆ ಮೂಲಕ ಪುರಸಭೆಗೆ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ ಗರಿಮೆ ಇಲ್ಲಿನ ಪುರಸಭೆಯ ಪೌರಕಾರ್ಮಿಕರಿಗೆ ಸಲ್ಲಿಸಬೇಕೆಂದು ಪುರಸಭೆಯ ಮುಖ್ಯಾಧಿಕಾರಿ ಎ ವಾಸಿಂ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಅವರು ಪಟ್ಟಣದ ಸಂವಿಧಾನ ಸೌದ ಆವರಣದಲ್ಲಿ ಸೆ.23ರ ಶನಿವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪುರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಛತೆ, ನೈರ್ಮಲ್ಯತೆ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬೇಕಾದ ಎಲ್ಲಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ಪುರಸಭೆಯ ಪೌರಕಾರ್ಮಿಕರು, ಸಿಬ್ಬಂದಿಗಳ ಪರಸ್ಪರ ಪ್ರೋತ್ಸಾಹ ಹಾಗೂ ಅವಿರತ ಪರಿಶ್ರಮದ ಪರಿಣಾಮವಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಪುರಸಭೆಯಲ್ಲಿರುವ ಪೌರಕಾರ್ಮಿಕರ, ಪ್ರಾಮಾಣಿಕತೆ, ದಕ್ಷತೆ, ನಿಸ್ವಾರ್ಥ ಸೇವಾ-ಮನೋಭಾವನೆಯಿಂದ ಸಮಾಜದ ಸ್ವಚ್ಛತೆಯನ್ನು ಕೈಗೊಳ್ಳುವ ಮೂಲಕ ಆರೋಗ್ಯವಂತ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಹಾಗಾಗಿ ಪೌರಕಾರ್ಮಿಕರ ದಿನಾಚರಣೆಯ ಹಿನ್ನೆಲೆ ಸಮಾಜದ ಪ್ರತಿಯೊಬ್ಬರು ಗೌರವ ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುವ ಅಗತ್ಯವಿದೆ ಎಂದು ತಿಳಿಸಿದರು.

ಪುರಸಭೆಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ಬಿ.ಎಸ್. ರುದ್ರಪ್ಪ ಮಾತನಾಡಿ, ಪೌರಕಾರ್ಮಿಕರು ಸಮಾಜದ ಕಣ್ಣುಗಳಿದ್ದಂತೆ. ಅವರ ಪರಿಶ್ರಮದಿಂದ ಪಟ್ಟಣ ಸ್ವಚ್ಛ ಸುಂದರವಾಗಿ ಕಾಣಲು ಸಾಧ್ಯ. ಹಾಗಾಗಿ ಪಟ್ಟಣದಲ್ಲಿರುವ ಪ್ರತಿಯೊಬ್ಬರು ಪೌರಕಾರ್ಮಿಕರನ್ನು ಸ್ಮರಿಸುವ ಮೂಲಕ ಆಭಿನಂದಿಸಬೇಕು. ಈ ನಿಟ್ಟಿನಲ್ಲಿ ಪೌರಕಾರ್ಮಿಕರ ದಿನಾಚರಣೆ ಮಹತ್ವ ಪಡೆದುಕೊಂಡಿದ್ದು, ನಾವೆಲ್ಲರೂ ಅವರಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ ಎಂದು ತಿಳಿಸಿದರು.

Advertisement

ಹಿರಿಯ ಸದಸ್ಯರು ಮಾಜಿ ಉಪಾಧ್ಯಕ್ಷ ಕೆ.ಸಿ. ರಮೇಶ್ ಮಾತನಾಡಿ, ಪೌರಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಅವರಿಗೆ ಪೂರಕವಾದ ಸೌಲಭ್ಯವನ್ನು ಕಲ್ಪಿಸಿ ಕೊಡಬೇಕು. ಪೌರಕಾರ್ಮಿಕರಿಗೆ ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೆಚ್ಚಿನ ನೆರವು ನೀಡಲು ಮುಂದಾಗಬೇಕೆಂದರು.

ಪುರಸಭೆ ಸದಸ್ಯ ವಿಜಯಸಿಂಹ ಮಾತನಾಡಿ, ಪೌರಕಾರ್ಮಿಕರು ಪುರಸಭೆಯ ಸ್ವಚ್ಛತೆ ಕಾಪಾಡುವ ಸೈನಿಕರು. ಅವರ ಆರೋಗ್ಯ ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ನಮ್ಮ ಸಮಾಜದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಾರೆ. ಹಾಗಾಗಿ ಪೌರಕಾರ್ಮಿಕರ ಹೊಣೆಗಾರಿಕೆಯನ್ನು ಸರ್ಕಾರದ ಜೊತೆ ಸಮಾಜದಲ್ಲಿರುವ ಪ್ರತಿಯೊಬ್ಬರು ಹೊಂದಬೇಕಾಗಿದೆ. ಪೌರಕಾರ್ಮಿಕರಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕಾಗಿದೆ. ಪೌರಕಾರ್ಮಿಕರು ಶಿಸ್ತಿನ ಸಿಪಾಯಿ ರೀತಿಯಲ್ಲಿ ಸಮಾಜವನ್ನು ಆರೋಗ್ಯವಂತವಾಗಿರಲು ಶ್ರಮಿಸುತ್ತಾರೆ ಎಂದು ಹೇಳಿದರು.

ಪುರಸಭೆಯ ಸದಸ್ಯ ಎಚ್.ಆರ್. ನಾಗರತ್ನ ವೇದಮೂರ್ತಿ ಮಾತನಾಡಿ, ಪುರಸಭೆಯ ಪೌರಕಾರ್ಮಿಕರು ಹಬ್ಬದ ರೀತಿಯಲ್ಲಿ ದಿನಾಚರಣೆಯನ್ನು ಹಮ್ಮಿಕೊಳ್ಳಬೇಕು. ಸಾಹಿತ್ಯ ಮತ್ತಿತರರ ಅನನ್ಯ ಪ್ರತಿಭೆಗಳನ್ನು ಹೊರತರಲು ದಿನಾಚರಣೆಗಳು ಅವಕಾಶ ನೀಡಬೇಕು ಎಂದು ತಿಳಿಸಿದರು.

ಹಿರಿಯ ಪೌರಕಾರ್ಮಿಕರಾದ ಕಮಲಮ್ಮ, ಆರೋಗ್ಯ ಅಧಿಕಾರಿ ಪ್ರಶಾಂತ್, ಪುರಸಭೆಯ ಸಿಬ್ಬಂದಿಗಳಾದ ನಾಗಭೂಷಣ್, ನೌಶಾದ್, ಕಿಶೋರ್, ಶೌಕತ್,  ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಪೌರಕಾರ್ಮಿಕರನ್ನು ಪುರಸಭೆ ವತಿಯಿಂದ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next