ಎಲ್ಲರೂ ಸರಕಾರಿ ನೌಕರಿಯಿಂದ ನಿವೃತ್ತರಾದ ಮೇಲೆ ವಿಶ್ರಾಂತ ಜೀವನ ನಡೆಸುತ್ತಾರೆ. ಆದರೆ ಇವರು ಹಾಗಲ್ಲ. ಶಿಕ್ಷಕರಾಗಿ ಏಳು ವರ್ಷ ಪಾಠ ಮಾಡಿದ ಬಳಿಕ ಸರಕಾರದ ಕಂದಾಯ ಇಲಾಖೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ಖಜಾನೆಯ ಪ್ರಾಮಾಣಿಕ ಅಧಿಕಾರಿಯೆಂಬ ಬಿರುದು ಪಡೆದು ಬೆಳ್ತಂಗಡಿಯಲ್ಲಿ ನಿವೃತ್ತರಾದವರು. ಗುರುವಾಯನಕೆರೆಯಲ್ಲಿ ಐವತ್ತು ಸೆಂಟ್ಸ್ ಸ್ಥಳ ಖರೀದಿ ಮಾಡಿ ಪುಟ್ಟ ಮನೆಯೊಂದನ್ನು ಕಟ್ಟಿಸಿದ್ದಾರೆ. ಮನೆಯ ಸುತ್ತಲೂ ವಿವಿಧ ಹಣ್ಣುಗಳ ಗಿಡಗಳನ್ನು ಬೆಳೆಸುವುದರ ಜೊತೆಗೆ ಜೇನು ವ್ಯವಸಾಯ ಮತ್ತು ಕಾಳು ಮೆಣಸಿನ ಕೃಷಿ ಮಾಡಿ ನಿವೃತ್ತಿಯ ಬದುಕಿನಲ್ಲಿ ಹಸಿರು ಪ್ರೇಮವನ್ನು ಮೆರೆಯುತ್ತಿದ್ದಾರೆ.
ಅವರು ಉಂಡೆಮನೆ ಶಂಭು ಶರ್ಮರು. ಕೃಷಿಯ ಅನುಭವ ಪರಂಪರಾನುಗತವಾಗಿ ಅವರಿಗೆ ಬಂದಿತ್ತು. ಬಾಲ್ಯದಲ್ಲೇ ಆರು ವರ್ಷ ಕೃಷಿಯಲ್ಲಿ ತೊಡಗಿಸಿಕೊಂಡು ತರಕಾರಿ ಮತ್ತು ಭತ್ತ ಬೆಳೆಯುವುದರಲ್ಲಿ ಅನುಭವ ಸಂಪಾದಿಸಿಕೊಂಡಿದ್ದರು. ಜೇನು ವ್ಯವಸಾಯದಲ್ಲಿಯೂ ಪರಿಣತಿ ಸಾಧಿಸಿ ಎಷ್ಟು ದಟ್ಟವಾದ ಮರವನ್ನಾದರೂ ಏರಿ ಜೇನು ಎರಿಗಳನ್ನು ಸಲೀಸಾಗಿ ಕೆಳಗಿಳಿಸುತ್ತಿದ್ದ ದಿನಗಳನ್ನು ಅವರು ಜಾnಪಿಸಿಕೊಳ್ಳುತ್ತಾರೆ. ವೃತ್ತಿಯಿಂದ ಹೊರಬಂದ ಬಳಿಕ ದಿನದ ಬಿಡುವಿನ ವೇಳೆಯನ್ನು ಕೃಷಿಗೆ ಮೀಸಲಾಗಿಟ್ಟಿರುವುದರಿಂದ ತನ್ನ ಆರೋಗ್ಯವೂ ಉತ್ತಮವಾಗಿದೆ ಎನ್ನುತ್ತಾರೆ ಅವರು.
ಶಂಭು ಶರ್ಮರ ಶಿಷ್ಟ ಕೃಷಿ ಪದ್ಧತಿಯಲ್ಲಿ ಗಮನ ಸೆಳೆಯುವುದು ಸಿಮೆಂಟ್ ಕೊಳವೆಗಳನ್ನು ಆಧಾರವಾಗಿ ನೀಡಿ ನೆಟ್ಟಿರುವ ಕಾಳು ಮೆಣಸಿನ ಕೃಷಿ. ಯಾವುದಾದರೂ ಮರಗಳಿಗೆ ಅದರ ಬಳ್ಳಿ ಹಬ್ಬುವಂತೆ ನೆಡುವುದು ಸಾಮಾನ್ಯವಾದರೂ ಇವರು ಹೊಸತನದ ಪ್ರಯೋಗ ಮಾಡಿದ್ದಾರೆ. ಪ್ರಯಾಣದ ವೇಳೆಯಲ್ಲಿ ರೈಲಿನಲ್ಲಿ ಭೇಟಿಯಾದ ಪುಣೆಯ ರೈತರೊಬ್ಬರೊಂದಿಗೆ ಮಾತನಾಡುವಾಗ ಇದರ ಹೊಳಹು ತನಗೆ ಸಿಕ್ಕಿತು ಎನ್ನುವ ಅವರು ಮೂವತ್ತೆ„ದು ಕೊಳವೆಗಳನ್ನು ನೆಲದಲ್ಲಿ ಹೂಳಿದ್ದಾರೆ. ಅದರ ಬುಡದಲ್ಲಿ ಕಬ್ಬಿಣದ ಬಲೆಯನ್ನು ಎರಡು ಅಡಿ ಎತ್ತರದ ತನಕ ಸುತ್ತುವರೆದಿದ್ದಾರೆ. ಈ ಬಲೆಯೊಳಗೆ ಅಡಿಕೆ ಸಿಪ್ಪೆ ಮತ್ತು ಸೆಗಣಿಯಿಂದ ತಯಾರಿಸಿದ ಗೊಬ್ಬರ ತುಂಬಿಸಿ ಕಸಿ ಗಿಡಗಳ ನಾಟಿ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಬಳ್ಳಿಗೆ ದನಗಳ ಬಾಧೆ ಬರುವುದಿಲ್ಲ. ಗೊಬ್ಬರ ಅಪವ್ಯಯವಾಗುವುದಿಲ್ಲ. ಈ ಬಲೆಯೊಳಗೆ ನೀರು ಹನಿಸಿದರೆ ನೀರಿನ ಉಳಿತಾಯವೂ ಆಗುತ್ತದೆ. ಹನಿಸಿದ ನೀರು ಪೂರ್ಣವಾಗಿ ಗಿಡಗಳಿಗೆ ಲಭಿಸುತ್ತದೆ.
ಸಿಮೆಂಟ್ ಕೊಳವೆಗಳು ಸುಮಾರು ಎಂಟು ಅಡಿ ಎತ್ತರವಾಗಿವೆ. ಈಗ ತಾನೇ ಮೆಣಸು ಬೆಳೆಯಲು ಆರಂಭವಾಗಿದೆ. ಹೀಗೆ ಮೆಣಸಿನ ಬಳ್ಳಿ ಹರಡುವುದರಿಂದ ಕೂಲಿ ಕೆಲಸದವರ ಅಗತ್ಯವಿಲ್ಲದೆ ಮನೆಯವರಿಗೇ ಕೊಯ್ಯಲು ಸುಲಭ. ಮೆಣಸಿನ ಬಳ್ಳಿಗೆ ಹಾಕಿದ ಗೊಬ್ಬರವನ್ನು ಅದಕ್ಕೆ ಆಧಾರ ನೀಡಿದ ಮರ ತಿನ್ನುವ ಭಯವಿಲ್ಲ. ಹೆಚ್ಚುವರಿ ಬಳ್ಳಿಗಳನ್ನು ಕತ್ತರಿಸಿ ಹೊಸ ಕೃಷಿಗೆ ಬಳಸಬಹುದು. ನೂರಾರು ವರ್ಷಗಳ ವರೆಗೂ ಆಧಾರ ಸ್ಥಂಭ ಉಳಿಯುತ್ತದೆ. ಹೀಗೆ ಹಲವು ಅನುಕೂಲಗಳಿವೆ ಎಂಬುದು ಶರ್ಮರ ಮಾತು.
ಹನ್ನೆರಡು ಪೆಟ್ಟಿಗೆಗಳಲ್ಲಿ ಜೇನು ನೊಣದ ಸಂಸಾರ ಬೆಳೆಸಿರುವ ಶರ್ಮರು ಅದರ ಭಾಷೆಯನ್ನು ಚೆನ್ನಾಗಿ ಅರಿತಿರುವ ಕಾರಣ, ಅಕ್ಕಪಕ್ಕದಲ್ಲಿ ಪೆಟ್ಟಿಗೆಗಳನ್ನಿರಿಸಿದರೂ ಒಂದಕ್ಕೊಂದು ಕಲಹವಾಗದೆ ಅವು ನೆಮ್ಮದಿಯಿಂದ ಜೇನು ತುಂಬುವ ಕಾಯಕ ಮಾಡುತ್ತಿವೆ. ಸ್ಥಳಾಂತರ ಕೃಷಿಯ ಮೂಲಕ ಒಂದು ಪೆಟ್ಟಿಗೆಯಿಂದ ಕಡಿಮೆ ಅಂದರೂ ಐದು ಕಿಲೋ ತುಪ್ಪ ಪಡೆಯಬಹುದು. ಗರಿಷ್ಠ ಮೂವತ್ತು ಕಿಲೋ ಲಭಿಸಬಹುದು ಎನ್ನುತ್ತಾರೆ ಶರ್ಮರು. ತನ್ನ ತಂಗಿ ಮನೆಯ ಬಳಿ ಪೆಟ್ಟಿಗೆಗಳನ್ನು ಸ್ಥಳಾಂತರಿಸಿದಾಗ ಬಹು ಶೀಘ್ರವಾಗಿ ಜೇನುತುಪ್ಪದಿಂದ ಎರಿಗಳು ತುಂಬಿದವು. ಅತ್ಯುತ್ತಮ ಗುಣಮಟ್ಟದ ತುಪ್ಪ, ಶಿಷ್ಟ ರುಚಿ, ಮನ ಸೆಳೆಯುವ ಸುಗಂಧ ಕಂಡು ಅಚ್ಚರಿಯಿಂದ ಇದರ ಮೂಲವನ್ನು ಶೋಧಿಸಿದಾಗ ದೊಡ್ಡ ರೆಂಜೆ (ಬಕುಲ) ಮರವೊಂದು ಕಾಣಿಸಿತು. ಉದುರಿದ ಅದರ ಹೂಗಳಲ್ಲಿ ರಾಶಿ ರಾಶಿ ಜೇನು ನೊಣಗಳು ಮುತ್ತಿರುವುದು ಗೋಚರಿಸಿತು. ರಂಜೆ ಮರವಿರುವಲ್ಲಿ ಪೆಟ್ಟಿಗೆಗಳನ್ನಿರಿಸಿದರೆ ದಶಂಬರ ತಿಂಗಳ ವೇಳೆಗೆ ಮೊದಲ ಸಲದ ಜೇನು ಪಡೆಯಬಹುದು. ಯಾವುದೇ ಹೂಗಿಂತಲೂ ಶ್ರೇಷ್ಠವಾದ ಕೆಂಪು ವರ್ಣದ ಜೇನು ಅದರಿಂದ ಸಿಗುತ್ತದೆ ಎನ್ನುತ್ತಾರೆ ಶರ್ಮರು.
ಸ್ಥಳಾಂತರ ವ್ಯವಸಾಯದ ಪರಿಣಾಮ ಬಹು ಬೇಗನೆ ತುಪ್ಪ ಉತ್ಪಾದನೆಯಾಗುತ್ತದೆಂಬುದು ಶರ್ಮರ ಗಮನಕ್ಕೆ ಬಂದಿದೆ. ಒಂದೆರಡು ಪೆಟ್ಟಿಗೆಗಳಲ್ಲಿ ಮೇಲುಹಂತದ ಎರಿಗಳನ್ನು ತುಂಬಿಸಿದ ಬಳಿಕ ಪೆಟ್ಟಿಗೆಯ ಮುಚ್ಚಳದಲ್ಲಿಯೂ ನೊಣಗಳು ಎರಿ ಕಟ್ಟಿದ್ದವಂತೆ. ಇದರಲ್ಲಿ ಒಂದೇ ಸಲ ಮೂರು ಕಿಲೋ ತುಪ್ಪ ಸಿಕ್ಕಿತು ಎನ್ನುತ್ತಾರೆ ಅವರು.
ಪೆಟ್ಟಿಗೆಯೊಳಗೆ ಜೇನು ತುಂಬಿದ್ದರೆ ನೊಣಗಳ ಮಂದ ಚಟುವಟಿಕೆ ನೋಡಿ ತಿಳಿಯಬಹುದು ಅಥವಾ ಮುಚ್ಚಳಕ್ಕೆ ಬಾರಿಸಿದಾಗ ಬರುವ ಧ್ವನಿಯ ಮೂಲಕವೂ ಗೊತ್ತಾಗುತ್ತದೆ ಎಂದು ಜೇನು ಭಾಷೆಯ ಸುದೀರ್ಘ ಪಾಠವನ್ನೇ ಶರ್ಮರು ಒಪ್ಪಿಸುತ್ತಾರೆ. ಜನವರಿಯಿಂದ ಮೇ ತನಕ ತಿಂಗಳಿಗೆ ಎರಡಾವರ್ತಿ ಜೇನುತುಪ್ಪ ಪಡೆಯಬೇಕು ಎಂಬುದು ನಿಯಮ. ತೋಟಗಾರಿಕೆ ಇಲಾಖೆ ನೀಡುವ ಏಳು ದಿನಗಳ ತರಬೇತಿಯಿಂದ ಹೆಚ್ಚಿನ ಜಾnನ ಪಡೆಯಲು ಸಾಧ್ಯವಾಯಿತಂತೆ. ಜೇನು ವ್ಯವಸಾಯ ಕಷ್ಟವೆಂಬ ಭಾವನೆ ಹಲವರಿಗೆ ಇದೆ. ಇಂಥ ಅಧ್ಯಯನಗಳ ಮೂಲಕ ಅದು ಸುಲಭವೆನಿಸಿ ಹೆಚ್ಚು ಕೃಷಿಕರು ಅದರಲ್ಲಿ ತೊಡಗಬಹುದೆಂಬ ಕಿವಿಮಾತನ್ನೂ ಶರ್ಮರು ಉಸುರುತ್ತಾರೆ.
ಜೇನುತುಪ್ಪ ವರ್ಷಗಟ್ಟಲೆ ದಾಸ್ತಾನು ಮಾಡಲು ಅನುಕೂಲವಾಗಿದೆ. ಆದರೆ ಅದನ್ನು ಪ್ಲಾಸ್ಟಿಕ್ ಶೀಶೆಗಳಲ್ಲಿ ಖಂಡಿತ ಹಾಕಿಡಬಾರದು. ಗಾಜಿನ ಶೀಶೆ ಅಥವಾ ಪಿಂಗಾಣಿಯ ಭರಣಿ ಜೇನು ಸಂಗ್ರಹಕ್ಕೆ ಯೋಗ್ಯವಾದುದು. ಫೆಬ್ರವರಿ ತಿಂಗಳಲ್ಲಿ ಪಡೆದ ಜೇನುತುಪ್ಪವನ್ನು ಎಳೆ ಬಿಸಿಲಿಗೆ ತೆರೆದಿಟ್ಟು ಒಣಗಿಸಬೇಕು. ಇಲ್ಲವಾದರೆ ಅದರಲ್ಲಿ ಹೆಚ್ಚಿರುವ ಶೈತ್ಯಾಂಶದಿಂದಾಗಿ ಕೆಡುವ ಸಂಭವ ಅಧಿಕ. ಅನಂತರದ ತಿಂಗಳುಗಳಲ್ಲಿ ತೆಗೆಯುವ ಜೇನಿನಲ್ಲಿ ಶೈತ್ಯಾಂಶವಿರುವುದಿಲ್ಲ ಎಂದು ಅವರು ಹೇಳುತ್ತಾರೆ. ಒಂದು ಕಿಲೋ ಜೇನುತುಪ್ಪ ನಾಲ್ಕರಿಂದ ಐದುನೂರು ರೂಪಾಯಿ ಬೆಲೆ ಗಳಿಸುತ್ತದೆ. ಸಾಧಾರಣವಾಗಿ ಹತ್ತು ಕಿಲೋ ವರೆಗೂ ತುಪ್ಪ ಸಿಗುತ್ತದೆ. ದಿನದಲ್ಲಿ ಒಂದೇ ಒಂದು ತಾಸಿನ ಸಮಯ ಇದಕ್ಕಾಗಿ ವ್ಯಯಿಸಿದರೂ ಸಾಕು. ಹತ್ತು ಪೆಟ್ಟಿಗೆಗಳಿದ್ದರೆ ಒಂದು ಚಿಕ್ಕ ಕುಟುಂಬದ ಜೀವನ ನಿರ್ವಹಣೆಗೆ ಅದೇ ಆದಾಯ ತರುತ್ತದೆ ಎಂದು ಅನುಭವವನ್ನು ಹಂಚಿಕೊಳ್ಳುವ ಶರ್ಮರು ಇನ್ನಷ್ಟು ಪೆಟ್ಟಿಗೆಗಳಲ್ಲಿ ಜೇನು ಸಂಸಾರ ಬೆಳೆಸಲು ಮುಂದಾಗುತ್ತಿದ್ದಾರೆ.
ಮಾಹಿತಿಗೆ– 9449349610
– ಪ. ರಾಮಕೃಷ್ಣ ಶಾಸ್ತ್ರೀ