Advertisement

ಇತಿಹಾಸ ಪುಟ ಸೇರಲಿದೆ ಸಮಾವೇಶ

11:55 AM Nov 05, 2017 | |

ಹುಬ್ಬಳ್ಳಿ: ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಐತಿಹಾಸಿಕ ಸಮಾವೇಶದ ಕ್ಷಣಗಣನೆಗೆ ಹುಬ್ಬಳ್ಳಿ ಸಾಕ್ಷಿಯಾಗಲಿದ್ದು, ಇತಿಹಾಸ ಪುಟ ಸೇರಲಿದೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಲಿಂಗಾಯತ ಸ್ವತಂತ್ರ ಧರ್ಮ ಕುರಿತ ಬೃಹತ್‌ ಸಮಾವೇಶದ ಅಂಗವಾಗಿ ಶನಿವಾರ ಇಲ್ಲಿನ ನೆಹರು ಮೈದಾನದಲ್ಲಿ ನಡೆಯುತ್ತಿರುವ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

Advertisement

ನಗರದಲ್ಲಿ ರವಿವಾರ ನಡೆಯುವ ಲಿಂಗಾಯತ ಬೃಹತ್‌ ಸಮಾವೇಶವು ಜಾಗತಿಕ ಇತಿಹಾಸ ಸೇರಲಿದೆ. ರ್ಯಾಲಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಅಷ್ಟೇ ಅಲ್ಲ. ಅಕ್ಕಪಕ್ಕದ ರಾಜ್ಯಗಳಿಂದ ಅಂದಾಜು 5 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಹಾರಾಷ್ಟ್ರದಿಂದ ಸುಮಾರು 40 ಸಾವಿರ ಜನ, ಆಂಧ್ರ ಪ್ರದೇಶ, ತಮಿಳುನಾಡುಗಳಿಂದಲೂ ಜನ ಬರಲಿದ್ದಾರೆ ಎಂದರು. 

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ಈಗಾಗಲೇ ಬೆಳಗಾವಿ, ಲಾತೂರ್‌, ಕಲಬುರಗಿ ಸೇರಿದಂತೆ ಹಲವು ಭಾಗಗಳಲ್ಲಿ  ಯಶಸ್ವಿಯಾಗಿ ಸಮಾವೇಶ ಪೂರ್ಣಗೊಳಿಸಲಾಗಿದೆ.ಈಗ ಹುಬ್ಬಳ್ಳಿಯಲ್ಲಿಯೂ ಅಭೂತಪೂರ್ವವಾಗಿ ಯಶಗೊಳಿಸುವ ನಿಟ್ಟಿನಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಸಮಾವೇಶ ನಡೆಸಿ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು. 

ಸ್ವತಂತ್ರ ಧರ್ಮದ ಹೋರಾಟಕ್ಕೆ ವಿವಿಧ ಮಠಾಧೀಶರು, ರಾಜಕೀಯ ನೇತಾರರು ನೈತಿಕ ಬೆಂಬಲ ನೀಡಿದ್ದಾರೆ. ವಿಶೇಷವೆಂದರೆ ಜೈನರು, ಇಸ್ಲಾಂ ಮತ್ತು ಪಟ್ಟೇದಾರ್‌ ಸಮಾಜದವರೂ ಬೆಂಬಲ ಕೊಟ್ಟಿರುವುದು ಮತ್ತಷ್ಟು ಬಲ ಹೆಚ್ಚಿಸಿದೆ ಎಂದರು. ಬೆಳಗಾವಿ ನಾಗನೂರು ಮಠದ ಡಾ| ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಜನಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಆಗಿದೆ.

ಹರಿದು ಹಂಚಿ ಹೋಗಿರುವ ಲಿಂಗಾಯತ ಒಳ ಪಂಗಡಗಳನ್ನು ಒಂದುಗೂಡಿಸುವುದು ನಮ್ಮ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಸಮಾವೇಶಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುತ್ತಿದೆ ಎಂದರು. ಸಚಿವ ವಿನಯ ಕುಲಕರ್ಣಿ ಮಾತನಾಡಿ, ಎಲ್ಲ ಪಕ್ಷಗಳಲ್ಲಿರುವ ಲಿಂಗಾಯತ ಮುಖಂಡರಿಗೆ ಆಹ್ವಾನ ನೀಡಲಾಗಿದೆ.

Advertisement

ಬಸವರಾಜ ಹೊರಟ್ಟಿ ಅವರು ಸಮಕ್ಷಮ ತೆರಳಿ ಆಹ್ವಾನಿಸಿದ್ದಾರೆ. ಸಮಾಜದ ಕಾರ್ಯಕ್ರಮವಾದ್ದರಿಂದ ಅವರಾಗೇ ಬರಬೇಕು ಎಂದರು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ರ್ಯಾಲಿಗೆ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಹ್ವಾನಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಲು ಮನವಿ ಮಾಡಿದ್ದೆವು.

ಆದರೆ ಅವರು ತಾವು ಗೊಂದಲದಲ್ಲಿರುವುದಾಗಿ ಹೇಳಿದ್ದಾರೆ. ಪ್ರತ್ಯೇಕ ಧರ್ಮದ ಬಗ್ಗೆ ಬಿಜೆಪಿಯಲ್ಲಿನ ಸಮಾಜದ ಮುಖಂಡರು ಮಾತನಾಡಲಿ, ಅನಂತಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಲಾರೆ ಎಂದರು. ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಜನರನ್ನು ಸಂಘಟಿಸಿ ರ್ಯಾಲಿ ನಡೆಸಲಾಗುತ್ತಿದೆ. ಇದಕ್ಕೆ ಬಿಜೆಪಿಯವರೂ ಬರಲಿ.

ಮೈದಾನ ಅಂದಾಜು 1.20 ಲಕ್ಷ ಜನರನ್ನು ಹಿಡಿಯಲಿದೆ. ರ್ಯಾಲಿಗೆ ಬರುವ ಜನರಿಗೆ ಸಮಾವೇಶ ನಡೆಯುವ ಕಾರ್ಯಕ್ರಮ ವೀಕ್ಷಿಸಲೆಂದು ರೈಲ್ವೆ ಸ್ಟೇಶನ್‌ ರಸ್ತೆಯಿಂದ ಕಿತ್ತೂರು ಚನ್ನಮ್ಮ ವೃತ್ತ ವರೆಗೆ ಬೃಹತ್‌ ಪರದೆಗಳನ್ನು ಅಳವಡಿಸಲಾಗುತ್ತಿದೆ. ಸಮಾವೇಶಕ್ಕೆ 200ಕ್ಕೂ ಅಧಿಕ ಮಠಾಧೀಶರು ಆಗಮಿಸಲಿದ್ದಾರೆ. ಮೈದಾನದಲ್ಲಿ ಎಲ್ಲರೂ ನೆಲದ ಮೇಲೆಯೇ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಡಿಸೆಂಬರ್‌ ನಲ್ಲಿ ಬೆಂಗಳೂರಿನಲ್ಲಿ ರ್ಯಾಲಿ ನಡೆಸಲಾಗುವುದು. ನಂತರ ಚುನಾವಣೆ ಬರುವುದರಿಂದ ರ್ಯಾಲಿ ಸ್ಥಗಿತಗೊಳಿಸಿ ಚುನಾವಣೆ ನಂತರ ಮತ್ತೆ ಆರಂಭಿಸಲಾಗುವುದು ಎಂದರು. ಬಿಜೆಪಿಯವರು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಗೊತ್ತಾಗುತ್ತಿಲ್ಲ. 2014ರಲ್ಲಿ ಜೈನ ಸಮುದಾಯ ಪ್ರತ್ಯೇಕ ಧರ್ಮವಾಗಿ ಘೋಷಣೆಯಾಗಿದೆ.

ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೂಡ ಜೈನ ಧರ್ಮದವರಾಗಿದ್ದಾರೆ. ಜೈನ ಪ್ರತ್ಯೇಕ ಧರ್ಮವಾದ ಮೇಲೆ ಹಿಂದೂ ಧರ್ಮಕ್ಕೆ ಹೊಡೆತ ಬಿದ್ದಿದೆಯೇ? ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅವರು ಏಕೆ ವಿರೋಧ ವ್ಯಕ್ತಪಡಿಸಬೇಕು ಎಂದರು. ಮುಂಡರಗಿ ಸಂಸ್ಥಾನ ಮಠದ ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ, ಅಥಣಿ ಮೋಟಗಿ ಮಠದ ಸ್ವಾಮೀಜಿ, ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ ಮೊದಲಾದವರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next