ಕಾಡು ಕಡಿದು ರೆಸಾರ್ಟ್ ಮಾಡೋದನ್ನು ವಿರೋಧಿಸಿ, ಮಾತಿಗೆ ಮಾತು ಬೆಳೆದು ಒಂದು ಕೊಲೆ ನಡೆದೇ ಹೋಗುತ್ತದೆ. ಅಲ್ಲಿಂದ ಕೊಲೆಗಳ ಸರಣಿ ಮುಂದುವರೆಯುತ್ತದೆ. ಒಂದು ಕೊಲೆ ಮುಂದೆ ಏಳೆಂಟು ಕೊಲೆಗಳಿಗೆ ದಾರಿ ಮಾಡಿಕೊಡುತ್ತದೆ. ಕೊಲೆಯಿಂದ ಆರಂಭವಾಗಿ ಕೊಲೆಯಲ್ಲೇ ಅಂತ್ಯವಾಗುತ್ತದೆ. ಅಷ್ಟೂ ಕೊಲೆಗಳಿಗೆ ಕಾರಣ ತಂಡವೊಂದರ ಕಿಚ್ಚು. ನಿರ್ದೇಶಕ ಪ್ರದೀಪ್ ರಾಜ್ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿಕೊಂಡು ಬಂದವರಿಗೆ “ಕಿಚ್ಚು’ ಹೊಸದಾಗಿ ಕಾಣುತ್ತದೆ.
ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಗಳನ್ನು, ರೀಮೇಕ್ ಸಿನಿಮಾಗಳನ್ನು ಮಾಡಿರುವ ಪ್ರದೀಪ್ ರಾಜ್ ಈ ಬಾರಿ ಆ ಎಲ್ಲಾ ಅಂಶಗಳಿಂದ ಮುಕ್ತವಾದ ಕಥೆ ಮಾಡಿಕೊಂಡು “ಕಿಚ್ಚು’ ಮಾಡಿದ್ದಾರೆ. ಮಲೆನಾಡು ಭಾಗದಲ್ಲಿನ ಕಾಡು ಉಳಿಸುವ ಹೋರಾಟ, ಅದನ್ನು ಹತ್ತಿಕ್ಕುವ ಪ್ರಯತ್ನ ಹಾಗೂ ಆ ಭಾಗದ ನಕ್ಸಲ್ ಚಟುವಟಿಕೆಗಳನ್ನಿಟ್ಟುಕೊಂಡು ಈಗಾಗಲೇ ಕೆಲವು ಸಿನಿಮಾಗಳು ಬಂದಿವೆ. “ಕಿಚ್ಚು’ ಕೂಡಾ ಇದೇ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಇಡೀ ಸಿನಿಮಾದ ಮುಖ್ಯ ಉದ್ದೇಶ ಕಾಡು ಉಳಿಸೋದು.
ಈ ಹೋರಾಟದ ಸ್ವರೂಪವನ್ನೇ ಬೆಳೆಸುತ್ತಾ ಇಡೀ ಸಿನಿಮಾ ಕಟ್ಟಿಕೊಡಲಾಗಿದೆ. ತಂದೆಯಿಂದ ಪ್ರೇರಿತನಾದ ಒಬ್ಬ ಮಾತು ಬಾರದ, ಕಿವಿ ಕೇಳದ ಯುವಕನೊಬ್ಬ ಮುಂದೆ ಹೇಗೆ ಹೋರಾಟಗಾರನಾಗುತ್ತಾನೆ, ಆ ಹೋರಾಟದಲ್ಲಿ ತನಗೆ ಗೊತ್ತಿಲ್ಲದಂತೆ ನಕ್ಸಲ್ ಸಂಘಟನೆಗೆ ಹೇಗೆ ಸೇರಿಕೊಳ್ಳುತ್ತಾನೆ ಎಂಬ ಅಂಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ನಿರ್ದೇಶಕ ಪ್ರದೀಪ್ ರಾಜ್, ಈ ಬಾರಿ ಕಥೆಗೆ ಹೆಚ್ಚು ಒತ್ತುಕೊಟ್ಟಿದ್ದಾರೆ.
ಹೋರಾಟದ ಕಥೆಯ ಜೊತೆಗೆ ನಾಯಕನ ಪ್ರೀತಿಯ ಕಥೆ, ಕಾಫಿ ತೋಟದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಅನುಭವಿಸುವ ಶೋಷಣೆ, ಧಣಿಗಳ ದರ್ಪವನ್ನು ಕೂಡಾ ಹೋರಾಟದ ಜೊತೆ ಜೊತೆಗೆ ಹೇಳುತ್ತಾ ಹೋಗುತ್ತಾರೆ. ಇದು ಗಂಭೀರ ಅಂಶವಿರುವ ಕಥೆ. ಅದನ್ನು ಗಂಭೀರವಾಗಿಯೇ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಆದರೆ, ಚಿತ್ರದಲ್ಲಿ ಏಕತಾನತೆ ಕಾಡುತ್ತದೆ. ಅದೇ ಕಾಡು, ಪೊಲೀಸ್ ಬೇಟೆ, ನಕ್ಸಲ್ ಸಂಘಟನೆಯ ಸುತ್ತವೇ ಬಹುತೇಕ ದೃಶ್ಯಗಳು ಸುತ್ತುತ್ತವೆ.
ಅದರಾಚೆ ಹೊಸದಾಗಿ ಏನೂ ಕಾಣುವುದಿಲ್ಲ. ಅದೇ ಕಾರಣದಿಂದ ಚಿತ್ರ ಹೆಚ್ಚು ಏರಿಳಿತಗಳಿಲ್ಲದೇ ತಣ್ಣಗೆ ಸಾಗುತ್ತದೆ. ಅದೇ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮತ್ತು ಮನಮುಟ್ಟುವಂತೆ ತೋರಿಸುವ ಅವಕಾಶ ನಿರ್ದೇಶಕರಿಗಿತ್ತು. ಅದರ ಹೊರತಾಗಿ ಚಿತ್ರದಲ್ಲಿನ ಟ್ವಿಸ್ಟ್‌ಗಳು ಇಷ್ಟವಾಗುತ್ತವೆ. ಪಟ್ಟಣದಿಂದ ಮುಕ್ತವಾಗಿ ಇಡೀ ಚಿತ್ರವನ್ನು ಕಾಡು ಹಾಗೂ ಹಳ್ಳಿಯ ಮಧ್ಯೆಯೇ ಕಟ್ಟಿಕೊಟ್ಟಿದ್ದಾರೆ. ಕಾಡಿನ ಪರಿಸರವನ್ನು ಸುಂದರವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ ಕೂಡಾ.
ಚಿತ್ರದಲ್ಲಿ ನಾಯಕ ಅನ್ನುವುದಕ್ಕಿಂತ ಒಂದು ತಂಡವೇ ಇಡೀ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗುತ್ತದೆ. ಅದರಲ್ಲಿ ಧ್ರುವ ಶರ್ಮಾ ಅವರದು ಪ್ರಮುಖ ಪಾತ್ರ. ಇಲ್ಲೂ ಅವರು ಮಾತು ಬಾರದ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ನಾಯಕಿ ಅಭಿನಯ ಅವರದು ನಾಯಕನಿಗೆ ಸಾಥ್ ಕೊಡುವ ಪಾತ್ರ. ನಾಯಕ-ನಾಯಕಿ ಇಬ್ಬರದು ಮಾತು ಬಾರದ, ಕಿವಿ ಕೇಳದ ಪಾತ್ರ. ರಾಗಿಣಿ ಇಲ್ಲಿ ಕಾಫಿ ತೋಟದ ಕೆಲಸಗಾರ್ತಿ.
ಹಾಗೆ ನೋಡಿದರೆ ರಾಗಿಣಿಯವರ ಪಾತ್ರ ಪ್ರಮುಖವಾದುದು. ಪಾತ್ರಕ್ಕೆ ಇನ್ನಷ್ಟು ಹೊಂದಿಕೊಳ್ಳುವ ಅವಕಾಶ ರಾಗಿಣಿಯವರಿಗಿತ್ತು. ಉಳಿದಂತೆ ಸಾಯಿಕುಮಾರ್ ಖಡಕ್ ಪೊಲೀಸ್ ಆದರೆ, ಸುಚೇಂದ್ರ ಪ್ರಸಾದ್ ನಕ್ಸಲ್ ಮುಖಂಡ. ಅವರೆಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು, ಸುದೀಪ್ ಇಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ವೈದ್ಯರಾಗಿ ಕಾಣಿಸಿಕೊಂಡಿರುವ ಸುದೀಪ್, ಸಿನಿಮಾದಲ್ಲೊಂದು ಸಂದೇಶ ಕೂಡಾ ಕೊಟ್ಟಿದ್ದಾರೆ. ಚಿತ್ರದ ಒಂದು ಹಾಡು ಚೆನ್ನಾಗಿದ್ದು, ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
ಚಿತ್ರ: ಕಿಚ್ಚು
ನಿರ್ಮಾಣ: ರೂಬಿ ಶರ್ಮಾ, ಪ್ರದೀಪ್ ರಾಜ್
ನಿರ್ದೇಶನ: ಪ್ರದೀಪ್‌ರಾಜ್
ತಾರಾಗಣ: ಧ್ರುವ ಶರ್ಮಾ, ಅಭಿನಯ, ರಾಗಿಣಿ, ಸಾಯಿಕುಮಾರ್, ಸುದೀಪ್ ಮತ್ತಿತರರು.
* ರವಿಪ್ರಕಾಶ್ ರೈ