ಮಣಿಪಾಲ: ಹಿರೇಬೆಟ್ಟು- ಮರ್ಣೆ-ಮೂಡುಬೆಳ್ಳೆ ಸಂಪರ್ಕ ರಸ್ತೆ ಅಭಿವೃದ್ಧಿ ದಶಕಗಳಿಂದ ಮರೀಚಿಕೆಯಾಗಿದೆ.
2013ರಲ್ಲಿ ಮರ್ಣೆ ಫ್ರೆಂಡ್ಸ್ ಸರ್ಕಲ್‌ನಿಂದ ಅಂಗಡಿಬೆಟ್ಟು (ಹಿರೇಬೆಟ್ಟು) ವರೆಗಿನ ರಸ್ತೆ 1.29 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಚಾಲನೆ ಸಿಕ್ಕಿತ್ತಾದರೂ, ಇನ್ನೂ 200 ಮೀ. ರಸ್ತೆ ದಶಕ ಕಳೆದರೂ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದೆ.
ಮರ್ಣೆ ಗ್ರಾಮಸ್ಥರುಗೆ ಟ್ಯಾಪ್ಮಿ, ಮಣಿಪಾಲ, ಪರ್ಕಳ, ಆತ್ರಾಡಿ ತೆರಳಲು ಹತ್ತಿರದ ಮಾರ್ಗವಾಗಿದ್ದು, ಹಿರೇಬೆಟ್ಟು-ಮಣಿಪಾಲ ಮಾರ್ಗದ ಬಸ್‌ಗಳನ್ನು ಅವಲಂಬಿಸಿದ್ದಾರೆ. ಅಂಗಡಿಬೆಟ್ಟು ಗ್ರಾಮಸ್ಥರಿಗೆ ಮರ್ಣೆ, ಪೆರ್ಣಂಕಿಲ, ಚಿತ್ರಬೈಲ್, ಮೂಡುಬೆಳ್ಳೆ, ಕಟಪಾಡಿಗೆ ತೆರಳಲು ಸಮೀಪದ ಮಾರ್ಗವಾಗಿದೆ. ಅಂಗಡಿಬೆಟ್ಟುವಿನಿಂದ ಸೇತುವೆ ವರೆಗಿನ ರಸ್ತೆ ಪೂರ್ತಿಗೊಂಡಿದೆ. ಸೇತುವೆಯಿಂದ ಮರ್ಣೆ ಸಂಪರ್ಕದ 200 ಮೀ. ರಸ್ತೆ ಪೂರ್ಣಗೊಂಡಿಲ್ಲ.
ಇದರಲ್ಲಿ ಖಾಸಗಿ ನಿವೇಶನದ ಸಮಸ್ಯೆಯೂ ಇದೆ. ರಸ್ತೆಯಾಗದ ಭಾಗದಲ್ಲಿ ಗ್ರಾಮಸ್ಥರು ಹಾಗೂ ದ್ವಿಚಕ್ರ ವಾಹನ ಸವಾರರು ಅನಿವಾರ್ಯವಾಗಿ ಖಾಸಗಿ ಜಾಗದಲ್ಲಿ ಹಾದು ಹೋಗಬೇಕಿದ್ದು, ಹದಗೆಟ್ಟ ಮಣ್ಣಿನ ರಸ್ತೆಯಲ್ಲಿ ರಿಕ್ಷಾ, ಕಾರು, ಟೆಂಪೋ ಚಾಲಕರನ್ನು ಬಾಡಿಗೆ ಕರೆ ತರಲೂ ಹಿಂದೇಟು ಹಾಕುತ್ತಿದ್ದಾರೆ. ಅದನ್ನು ಈಗ ಬಂದ್ ಮಾಡಲಾಗಿದೆ. ಈ ಹೆಚ್ಚುವರಿ ಆತ್ರಾಡಿ, ಪಟ್ಲ ರಸ್ತೆಯಿಂದ 6 ಕಿ. ಮೀ. ಸುತ್ತಿ ತೆರಳಬೇಕಾಗಿದೆ.
ಮರ್ಣೆ-ಮೂಡುಬೆಳ್ಳೆ ಸಂಪರ್ಕ ರಸ್ತೆ: ಮರ್ಣೆ-ಕನರಾಡಿ ಹಾಲಿನ ಡೇರಿಯ ಬಲಭಾಗದಿಂದ ಒಳದಾರಿಯಾಗಿ ಗುಂಡುಪಾದೆ-ಮೂಡುಬೆಳ್ಳೆ ಜಿಲ್ಲಾ ಮುಖ್ಯ ರಸ್ತೆ ಸಂಪರ್ಕಿಸುವ 1 ಕಿ. ಮೀ. ಉದ್ದದ ಮಣ್ಣಿನ ರಸ್ತೆ ದಶಕಗಳಿಂದ ಅಭಿವೃದ್ಧಿಯಾಗದೆ ತೊಂದರೆಯಾಗುತ್ತಿದೆ. ಮರ್ಣೆ ಗ್ರಾಮಸ್ಥರು,ಉದ್ಯೋಗಿಗಳು, ವಿದ್ಯಾರ್ಥಿಗಳು ಮೂಡುಬೆಳ್ಳೆಗೆ ತೆರಳಲು ಅತೀ ಸಮೀಪದ ಇದೇ ಹಾದಿ ಬಳಸುತ್ತಿದ್ದಾರೆ. ಮರ್ಣೆಯಿಂದ ಮೂಡುಬೆಳ್ಳೆಗೆ ಕೇವಲ 2.6. ಕಿ. ಮೀ ಅಂತರವಿದ್ದು, ಬೆಳ್ಳೆ ಪೇಟೆಯಿಂದ ಪಟ್ಲ, ಅಂಗಡಿಬೆಟ್ಟು, ನೆಲ್ಲಿಕಟ್ಟೆಗೆ (ಹಿರೇಬೆಟ್ಟು) ಸಾಗಲು ಅಂತರ ಕಡಿಮೆಯಾಗಲಿದೆ. ಘನ ವಾಹನಗಳು ಸಂಚರಿಸಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರು ರಿಕ್ಷಾ ಚಾಲಕರು ಈ ರಸ್ತೆಯಲ್ಲಿ ಸಂಚರಿಸಲು ಒಪ್ಪುತ್ತಿಲ್ಲ ಎಂಬುದು ಸ್ಥಳೀಯರು ತಿಳಿಸಿದ್ದಾರೆ.
ಅನುದಾನದ ನಿರೀಕ್ಷೆ
ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಈಗಾಗಲೇ ಯೋಜನೆಗಳನ್ನು ರೂಪಿಸಲಾಗಿದೆ. ಸರಕಾರದ ಅನುದಾನದ ನಿರೀಕ್ಷೆಯಲ್ಲಿದ್ದು, ಹದಗೆಟ್ಟ ರಸ್ತೆಗಳ ಅಭಿವೃದ್ಧಿ, ಹೊಸ ರಸ್ತೆಗಳ ನಿರ್ಮಾಣ ಕೆಲಸವನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುವುದು. –
ಗುರ್ಮೆ ಸುರೇಶ್ ಶೆಟ್ಟಿ, ಶಾಸಕರು
ಹಿರೇಬೆಟ್ಟು-ಮರ್ಣೆ-ಮೂಡುಬೆಳ್ಳೆ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕು, ಮಳೆಗಾಲ ದಲ್ಲಿ ಈ ಎರಡೂ ರಸ್ತೆಗಳ ಸ್ಥಿತಿ ಶೋಚನೀಯವಾಗಿರುತ್ತದೆ. ಸಾರ್ವ ಜನಿಕರು ಈಗಾಗಲೇ ಈ ರಸ್ತೆಯಲ್ಲಿ ಓಡಾಡಲು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಚುನಾವಣೆ ಬಳಿಕವಾದರೂ ದಶಕಗಳ ಸಮಸ್ಯೆ ನಿವಾರಣೆಯಾಗಲಿದೆ ಎಂಬ ಭರವಸೆಯಲ್ಲಿದ್ದೇವೆ. ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಶೀಘ್ರವೇ ಶಾಸಕರು, ಜನಪ್ರತಿನಿಧಿಗಳು, ಗ್ರಾ. ಪಂ. ಆಡಳಿತ ವ್ಯವಸ್ಥೆ ಮುಂದಾಗಬೇಕು. –
ಪವನ್ ಆಚಾರ್ಯ, ಮರ್ಣೆ, ಸದಸ್ಯರು