Advertisement

ವಸತಿಗೃಹ ತೆರವಿಗೆ ಹಿಂದೂಪರ ಸಂಘಟನೆ ಖಂಡನೆ

09:14 PM May 11, 2019 | Lakshmi GovindaRaj |

ಚಿಕ್ಕಬಳ್ಳಾಪುರ: ನಗರದ ಸರ್‌ ಎಂ.ವಿ. ಕ್ರೀಡಾಂಗಣ ಪಕ್ಕದಲ್ಲಿರುವ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿರುವ ಉದ್ಯಾನವನ ಹಾಗೂ ವಸತಿ ಗೃಹಗಳನ್ನು ಜಿಲ್ಲಾಡಳಿತ ಏಕಾಏಕಿ ಯಾವುದೇ ಮುನ್ಸೂಚನೆ ಕೊಡದೇ ತೆರವುಗೊಳಿಸಿದೆ ಎಂದು ಆರೋಪಿಸಿ ಶನಿವಾರ ಜಿಲ್ಲಾ ಕೇಂದ್ರದಲ್ಲಿ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಅರ್ಚಕರ ಕುಟುಂಬ ಬೀದಿಪಾಲು: ಕಳೆದ ಶುಕ್ರವಾರ ಸಂಜೆ ತಾಲೂಕು ಆಡಳಿತ ದೇವಾಲಯದ ಆವರಣದಲ್ಲಿ ನಿರ್ಮಿಸಿದ್ದ ಮಕ್ಕಳ ಉದ್ಯಾನವನವನ್ನು ಹಾಗೂ ಅರ್ಚಕರು ವಾಸ ಇದ್ದ ವಸತಿ ಗೃಹಗಳನ್ನು ತೆರವುಗೊಳಿಸಿದೆ. ಈ ಬಗ್ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದರೂ ಕೂಡ ದರ್ಪದಿಂದ ಜಿಲ್ಲಾಡಳಿತ ತೆರವುಗೊಳಿಸಿ ಅರ್ಚಕರ ಕುಟುಂಬವನ್ನು ಬೀದಿಪಾಲು ಮಾಡಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಭಕ್ತರ ಸಹಕಾರದಿಂದ ಅಭಿವೃದ್ಧಿ: ಜಿಲ್ಲಾ ಕೇಂದ್ರದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯ ಪುರಾತನವಾಗಿದ್ದು, ಸರ್ಕಾರದಿಂದ ಅಥವಾ ಸ್ಥಳೀಯ ನಗರಸಭೆಯಿಂದ ಯಾವುದೇ ಅನುದಾನ ಪಡೆಯದೇ ಭಕ್ತರ ಸಹಕಾರದಿಂದ ದೇವಾಲಯ ಟ್ರಸ್ಟ್‌ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡು ಈ ಭಾಗದ ಜನರಿಗೆ ಸೇವಾ ಕಾರ್ಯಗಳನ್ನು ಮಾಡುತ್ತಿದೆ.

ಜಿಲ್ಲಾಡಳಿತ ಒತ್ತುವರಿ ಜಾಗ ತೆರವುಗೊಳಿಸುವ ನೆಪದಲ್ಲಿ ವಸತಿ ಹಾಗೂ ಉದ್ಯಾನವನವನ್ನು ಕೆಡವಿದೆ. ಇದರಿಂದ ದೇವಾಲಯ ಟ್ರಸ್ಟ್‌ಗೆ ಲಕ್ಷಾಂತರ ರೂ. ನಷ್ಟವಾಗಿದೆ. ವಸತಿ ಗೃಹಗಳ ತೆರವಿಗೆ ಜಿಲ್ಲಾಡಳಿತ ಗಡುವು ಕೊಟ್ಟಿರಲಿಲ್ಲ. ಆದರೂ ಏಕಾಏಕಿ ಜೆಸಿಬಿ ಯಂತ್ರಗಳನ್ನು ತಂದು ತೆರವು ಮಾಡಲಾಗಿದೆ ಎಂದು ಪ್ರತಿಭಟನಾ ನಿರತ ಹಿಂದೂಪರ ಸಂಘಟನೆಗಳ ಮುಖಂಡರು ಆರೋಪಿಸಿದರು.

ಜನರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ದೇವಾಲಯ ಉಳಿಯಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಒತ್ತುವರಿಯಾಗಿರುವ ಜಮೀನನ್ನು ದೇವಾಲಯಕ್ಕೆ ಸಕ್ರಮಗೊಳಿಸಿ ಕೊಡಬೇಕೆಂದು ಆಗ್ರಹಿಸಿದರು. ಅನೇಕ ವರ್ಷಗಳಿಂದ ಪೂಜಾ ಕೈಂಕಾರ್ಯಗಳು ನಡೆದುಕೊಂಡು ಬರುತ್ತಿದ್ದು, ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಮಕ್ಕಳ ಉದ್ಯಾನವನವನ್ನು ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದರು.

Advertisement

ಅಧಿಕಾರಿಗಳ ನಾಟಕ: ದೇವಾಲಯದ ಆವರಣದಲ್ಲಿರುವ ಉದ್ಯಾನವನ ಹಾಗೂ ವಸತಿ ಗೃಹಗಳನ್ನು ತೆರವುಗೊಳಿಸದಂತೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದರೂ ಕೂಡ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ ತಡೆಯಾಜ್ಞೆ ಪ್ರತಿ ನಮ್ಮ ಕೈ ಸೇರಿಲ್ಲ ಎಂದು ಸುಳ್ಳು ಹೇಳಿ ಮನೆಗಳನ್ನು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾಡಳಿತ ಕಾನೂನು ಉಲ್ಲಂಘನೆ ಮಾಡಿದ್ದು, ನಾವು ಕೂಡ ಕಾನೂನು ಹೋರಾಟ ಮಾಡುತ್ತೇವೆ. ಬಾಧಿತರಿಗೆ ಜಿಲ್ಲಾಡಳಿತ ಮೊದಲು ಪರ್ಯಾಯ ವ್ಯವಸ್ಥೆ ಮಾಡಲಿ ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಾಕಾರಿಣಿ ಸದಸ್ಯ ಲಕ್ಷ್ಮೀನಾರಾಯಣ ಗುಪ್ತ, ಮಹಿಳಾ ಘಟಕದ ಪ್ರೇಮಲೀಲಾ ವೆಂಕಟೇಶ್‌, ಯುವ ಮೋರ್ಚಾದ ಬಾಲು, ಮಧುಚಂದ್ರ, ವಾದಿರಾಜ್‌, ಜಯದೇವ್‌ ಸೇರಿದಂತೆ ವಿಶ್ವ ಹಿಂದೂ ಪರಿಷತ್‌, ಭಜರಂಗ ದಳ, ಆರ್‌ಎಸ್‌ಎಸ್‌ ಕಾರ್ಯಕರ್ತರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ರಸ್ತೆ ತಡೆ ನಡೆಸಿ ಜಿಲ್ಲಾಡಳಿತದಿಂದ ವಿರುದ್ಧ ಆಕ್ರೋಶ: ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಗರದ ಅಂಬೇಡ್ಕರ್‌ ವೃತ್ತದಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸುವ ಮೂಲಕ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಘೋಷಣೆ ಕೂಗಿದರು.

ಜಿಲ್ಲಾ ಕೇಂದ್ರದಲ್ಲಿ ಅದರಲ್ಲೂ ನಗರಸಭೆ ವ್ಯಾಪ್ತಿಯಲ್ಲಿ ರಾಜಕಾಲುವೆ, ನಗರಸಭೆ ಆಸ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿಲ್ಲ. ಆದರೆ ದೇವಾಲಯವನ್ನು ಅಭಿವೃದ್ಧಿಪಡಿಸಿ ಆ ಮೂಲಕ ಸಮಾಜ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಜಿಲ್ಲಾಡಳಿತ ದೌರ್ಜನ್ಯದಿಂದ ಯಾವುದೇ ನೋಟಿಸ್‌ ನೀಡದೇ ಏಕಾಏಕಿ ರಾತ್ರಿ ವೇಳೆ ಜೆಸಿಬಿ ಯಂತ್ರಗಳನ್ನು ಬಳಸಿ ತೆರವುಗೊಳಿಸುವ ಉದ್ದೇಶವಾದರೂ ಏನಿತ್ತು ಎಂದು ಪ್ರತಿಭಟನಕಾರರು ಪ್ರಶ್ವಿ‌ಸಿದರು.

Advertisement

Udayavani is now on Telegram. Click here to join our channel and stay updated with the latest news.

Next