Advertisement

ಹೆದ್ದಾರಿ ಪ್ರಾಧಿಕಾರದ ಆದಾಯ ಹೆಚ್ಚಿಸುವ ಗುರಿ

12:34 AM Dec 11, 2019 | Lakshmi GovindaRaj |

ಬೆಂಗಳೂರು: ಮುಂದಿನ 5 ವರ್ಷಗಳಲ್ಲಿ ರಾಷ್ಟ್ರೀಯಾ ಹೆದ್ದಾರಿ ಪ್ರಾಧಿಕಾರದ ಆದಾಯವನ್ನು 1 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಕೇಂದ್ರ ಭೂ ಸಾರಿಗೆ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು. ಸಿಐಐ ವತಿಯಿಂದ ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ 10ನೇ ನಿರ್ಮಾಣ ಕಾಮಗಾರಿಗಳ ಸಲಕರಣೆಗಳು ಹಾಗೂ ತಂತ್ರಜ್ಞಾನ ಕುರಿತ ಅಂತಾರಾಷ್ಟ್ರೀಯ ಮೇಳವನ್ನು (ಎಕ್ಸ್‌ಕಾನ್‌ - 2019) ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

Advertisement

ಪ್ರಸಕ್ತ ವರ್ಷ ರಸ್ತೆಗಳು ಮತ್ತು ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಮುಂದಿನ ವರ್ಷದಲ್ಲಿ 3 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಿದೆ. ಇದೇ ಮಾದರಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಹೆಚ್ಚಿನ ಹೂಡಿಕೆ ಮತ್ತು ಅಭಿವೃದ್ಧಿ ಯೋಜನೆಗಳ ಮೂಲಕ ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರದ ಆದಾಯವನ್ನು ಮೂವತ್ತು ಸಾವಿರ ಕೋಟಿ ರೂ.ನಿಂದ 1 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಒಂದು ರಾಷ್ಟ್ರದ ಬೆಳವಣಿಗೆಗೆ ಎಂಜಿನ್‌ ರೀತಿ ಕಾರ್ಯನಿರ್ವಹಿಸುತ್ತವೆ. ಈ ಹಿಂದೆ ದೇಶದಲ್ಲಿ ಒಂದು ದಿನಕ್ಕೆ 2 ಕಿ.ಮೀ.ನಷ್ಟು ಮಾತ್ರ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದವು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ನಂತರ ರಸ್ತೆ ಕಾಮಗಾರಿಗಳು ಸಾಕಷ್ಟು ವೇಗ ಪಡೆದುಕೊಂಡಿದ್ದು, ದಿನಕ್ಕೆ 30 ಕಿ.ಮೀ.ಗೆ ಪೂರ್ಣಗೊಳಿಸುತ್ತಿದ್ದೇವೆ. ಆರ್‌ಬಿಐ ಮತ್ತು ಬ್ಯಾಂಕುಗಳ ಹಣಕಾಸಿನ ನೆರವಿನೊಂದಿಗೆ, ಅಭಿವೃದ್ಧಿಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ ಗುರಿ ಸರ್ಕಾರ ಹೊಂದಿದೆ.

ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಬ್ಯಾಂಕುಗಳು ನೀಡುತ್ತಿರುವ ಸಾಲದ ಮರು ಪಾವತಿ ಅವಧಿಯನ್ನು ಸದ್ಯಕ್ಕಿಂತ 10 ವರ್ಷ ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ದೇಶದಲ್ಲಿ ಒಟ್ಟಾರೆ ರಸ್ತೆ ಕಾಮಗಾರಿ ಯೋಜನೆಗಳಿಗೆ ಭೂ ಸ್ವಾಧೀನ ಮತ್ತು ಅರಣ್ಯ ಪರಿಸರ ನಿರಾಪೇಕ್ಷಣೆ ಸಮಸ್ಯೆಯಾಗುತ್ತಿದೆ. ಭೂಮಿಯ ಬೆಲೆಯು ಹೆಚ್ಚಾಗಿದ್ದು, ಹೆಚ್ಚಿನ ಭೂಸ್ವಾಧೀನ ಸಮಯದಲ್ಲಿ ಬೇಡಿಕೆ ಕೇಳಿಬರುತ್ತಿದೆ. ಕಡಿಮೆ ಖರ್ಚಿನಲ್ಲಿ ಉನ್ನತ ದರ್ಜೆಯ ರಸ್ತೆಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.

ಈ ನಿಟ್ಟಿನಲ್ಲಿ ಕನಿಷ್ಠ ನಿರ್ವಹಣಾ ವೆಚ್ಚದ ರಸ್ತೆ ಕಾಮಗಾರಿ ತಂತ್ರಜ್ಞಾನಗಳನ್ನು ಸರ್ಕಾರವು ಸ್ವಾಗತಿಸಲಿದೆ. ಜತೆಗೆ ಕಟ್ಟಡ ನಿರ್ಮಾಣ ಉಪಕರಣಗಳ ಉತ್ಪಾದನಾ ಕಂಪನಿಗಳು ತನ್ನ ಕಚ್ಚಾ ವಸ್ತು ಬಳಸಿ ಮಾಲಿನ್ಯರಹಿತ ಗುಣಮಟ್ಟದ ರಸ್ತೆ ಕಾಮಗಾರಿಗೆಂದು ಆವಿಷ್ಕರಿಸುವ ತಂತ್ರಜ್ಞಾನವನ್ನು ಕೇಂದ್ರ ಸರ್ಕಾರ ಅಳವಡಿಸಿಕೊಳ್ಳು ಚಿಂತನೆ ನಡೆಸಿದೆ. ಇನ್ನು ದ್ರವೀಕೃತ ನೈಸರ್ಗಿಕ ಅನಿಲವು (ಸಿಎನ್‌ಜಿ) ಭವಿಷ್ಯದ ಇಂಧನವಾಗಿದ್ದು, ಇದರ ಬಳಕೆಗೆ ಹೆಚ್ಚಿನ ಆದ್ಯತೆಯನ್ನು ರಾಜ್ಯ ಸರ್ಕಾರಗಳು ನೀಡಬೇಕು ಎಂದು ಹೇಳಿದರು.

Advertisement

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ವಿದೇಶಿ ಆರ್ಥಿಕ ಹೂಡಿಕೆಯಲ್ಲಿ ದೇಶದಲ್ಲೇ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 2020 ಏಪ್ರಿಲ್‌ನಲ್ಲಿ 40.68 ಮಿಲಿಯನ್‌ ಡಾಲರ್‌ ಹೂಡಿಕೆ ಹರಿದು ಬರಲಿದೆ. ನಿರ್ಮಾಣ ಕಾಮಗಾರಿಗಳ ತಂತ್ರಜ್ಞಾನದಲ್ಲಿ ಬೆಂಗಳೂರು ಈಗಾಗಲೇ ಮುಂದಿದೆ. ಸರ್ಕಾರವು ಇನ್ನಷ್ಟು ಯೋಜನೆಗಳ ಮೂಲಕ ಬೆಂಗಳೂರನ್ನು ನಿರ್ಮಾಣ ಕಾಮಗಾರಿ ಸಲಕರಣೆ ಹಾಗೂ ತಂತ್ರಜ್ಞಾನದ ರಾಜಧಾನಿ ಮಾಡಲಾಗುವುದು ಎಂದರು.

ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ ಜೀ, ಸಿಐಐ ಅಧ್ಯಕ್ಷ ವಿಕ್ರಂ ಎಸ್‌ ಕಿರ್ಲೋಸ್ಕರ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಐದು ದಿನಗಳ ಈ ಮೇಳದಲ್ಲಿ 21 ದೇಶಗಳ 390ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, 1250 ಪ್ರದರ್ಶಕರಿಂದ ಮಳಿಗೆಗಳನ್ನು ಹಾಕಲಾಗಿದೆ.

ರಾಜ್ಯದ ವಿವಿಧ ರಸ್ತೆ ಯೋಜನೆಗಳಿಗೆ ಒಪ್ಪಿಗೆ: ರಾಜ್ಯದಲ್ಲಿ ಸುಸ್ಥಿರ ಸರ್ಕಾರ ರೂಪುಗೊಂಡ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶುಭಕೋರಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಿರುವ ಕುರಿತು ಮಾಹಿತಿ ನೀಡಿದರು. ಪೂನಾ-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಗೆ ತಕ್ಷಣವೇ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪುಣೆ- ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ದೆಹಲಿವರೆಗೂ ಸುಲಭವಾಗಿ ಸಾರಿಗೆ ಸೌಲಭ್ಯ ಲಭ್ಯವಾಗಲಿದೆ. ಇದರಿಂದ ಕರ್ನಾಟಕವು ಈ ಮಾರ್ಗದಲ್ಲಿ ಕೈಗಾರಿಕೆ ಹಬ್‌, ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಿಸಿಕೊಂಡರು ಈ ಯೋಜನೆಯ ಲಾಭ ಮಾಡಿಕೊಳ್ಳಬಹುದು ಎಂದರು.

ಇನ್ನು ಬೆಂಗಳೂರಿನ ಮಹತ್ವಾಕಾಂಕ್ಷಿ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣ ಯೋಜನೆಯ ಭೂಸ್ವಾಧೀನಕ್ಕೆ ಆಗುವ ಶೇ.75 ವೆಚ್ಚವನ್ನು ಕೇಂದ್ರ ಸರ್ಕಾರದಿಂದ ಭರಿಸುತ್ತಿದೆ. 380 ಕಿ.ಮೀ. ಉದ್ದದ ಈ ರಸ್ತೆ ನಿರ್ಮಾಣಕ್ಕೆ ಅಗತ್ಯ ಭೂ ಸ್ವಾಧೀನ ಪ್ರಕ್ರಿಯೆಗೆ ಕೇಂದ್ರದಿಂದ ಶೇ.50ರಷ್ಟು ನೆರವು ನೀಡುಲು ಮುಂದಾಗಿದ್ದೆವು, ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶೇ.75ರಷ್ಟು ವೆಚ್ಚವನ್ನು ಕೇಂದ್ರದಿಂದ ಭರಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿ ಶೇ.75 ವೆಚ್ಚ ಮಾಡಲಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next