ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ಸೇವೆ ಒಪ್ಪಂದ ಉಲ್ಲಂ ಸಿದ ಆರೋಪದಲ್ಲಿ ಮೂರರಿಂದ ಐದು ಲಕ್ಷ ರೂ. ದಂಡ ಪಾವತಿಸುವಂತೆ ರಾಜ್ಯ ಆರೋಗ್ಯ ಇಲಾಖೆ ನೀಡಿದ್ದ ನೋಟಿಸ್ ಪ್ರಶ್ನಿಸಿ 200 ಮಂದಿ ವೈದ್ಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಸಂಬಂಧ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸಿದ, ನ್ಯಾಯಮೂರ್ತಿ ಜಿ. ನರೇಂದರ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರ ವೈದ್ಯರಿಗೆ ಆರೋಗ್ಯ ಇಲಾಖೆ ಜಾರಿಗೊಳಿಸಿದ್ದ ದಂಡ ಪಾವತಿ ನೋಟಿಸ್, ರಾಜ್ಯ ವೈದ್ಯಕೀಯ ಪರಿಷತ್ ಜಾರಿಗೊಳಿಸಿದ್ದ ಕಾನೂನು ಕ್ರಮ ಜರುಗಿಸುವ ಸಂಬಂಧದ ನೋಟಿಸ್‌ಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಸಂಬಂಧ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಪೀಠ ಜೂನ್ 19ಕ್ಕೆ ವಿಚಾರಣೆ ಮುಂದೂಡಿದೆ.
ಏನಿದು ವಿವಾದ?: ಒಂದು ವರ್ಷ ಗ್ರಾಮೀಣ ಆಸ್ಪತ್ರೆಗಳಲ್ಲಿ ಕಡ್ಡಾಯ ಸೇವೆ ಒಪ್ಪಂದ ಉಲ್ಲಂ ಸಿದ ಆರೋಪದ ಅನ್ವಯ ರಾಜ್ಯ ಸೇರಿದಂತೆ ಹೊರರಾಜ್ಯಗಳಲ್ಲಿಯೂ ಸೇವೆ ಸಲ್ಲಿಸುತ್ತಿರುವ 200 ವೈದ್ಯರಿಗೆ ಮೇ 20ರಂದು ನೋಟಿಸ್ ನೀಡಿದ್ದ ಆರೋಗ್ಯ ಇಲಾಖೆ, ಮೂರರಿಂದ ಐದು ಲಕ್ಷ ರೂ. ದಂಡ ಪಾವತಿಸುವಂತೆ ಸೂಚಿಸಿತ್ತು.
ಅದೇ ರೀತಿ ರಾಜ್ಯ ವೈದ್ಯಕೀಯ ಪರಿಷತ್ ಮೇ 19ರಂದು ವೈದ್ಯಕೀಯ ಪರವಾನಗಿ ರದ್ದುಗೊಳಿಸುವ ಸಂಬಂಧ ಹಾಗೂ ಮೇ 29ರಂದು ಕರ್ನಾಟಕ ಮೆಡಿಕಲ್ ರೆಗ್ಯುಲೆಟಿಂಗ್ ಆಕ್ಟ್ 16ರ ಅನ್ವಯ ಏಕೆ ಕ್ರಮ ಜರುಗಿಸಬಾರದು ಎಂದು ಪ್ರಶ್ನಿಸಿ ನೋಟಿಸ್ ಕಳುಹಿಸಿತ್ತು. ಈ ನೋಟೀಸ್‌ಗಳ ರದ್ದತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಡಾ. ದಿವ್ಯ, ಮಂಡ್ಯದ ಡಾ. ರವಿ ಕೆ.ಎಸ್. ಡಾ. ಚೈತ್ರಾ ಎನ್.ಡಿ ಸೇರಿದಂತೆ 200 ವೈದ್ಯರು ಕೋರ್ಟ್ ಮೊರೆಹೋಗಿದ್ದಾರೆ.
ಅರ್ಜಿದಾರರ ವಾದವೇನು?: ರಾಜ್ಯ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ವೈದ್ಯಕೀಯ ಪರಿಷತ್ತು ಕಿರುಕುಳ ನೀಡುವ ಉದ್ದೇಶದಿಂದ ಆಯ್ದ ಕೆಲವರಿಗೆ ಮಾತ್ರ ನೋಟೀಸ್ ನೀಡಿದೆ. ನಾವು ವೈದ್ಯಕೀಯ ಶಿಕ್ಷಣ ತರಬೇತಿ ಮುಗಿಸಿದಾಗ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ಸೇವೆ ಸಲ್ಲಿಸುವ ಸಂಬಂಧ ಯಾವುದೇ ನೋಟೀಸ್ ನೀಡಿರಲಿಲ್ಲ. ಈಗಾಗಲೇ ಹಲವು ವರ್ಷ ಸೇವೆ ಪೂರೈಸಿದ್ದು, ಈಗ ಒಪ್ಪಂದ ಉಲ್ಲಂಘನೆಯಾಗಿದೆ ಎಂದು ದಂಡ ಪಾವತಿಸುಂತೆ ತಾಕೀತು ಮಾಡುತ್ತಿರುವುದು ಸರಿಯಲ್ಲ,
ಕಾನೂನು ಕ್ರಮ ಜರುಗಿಸುವಂತೆ ಹೇಳಲು ವೈದ್ಯಕೀಯ ಪರಿಷತ್ತು ಅಧಿಕಾರ ಹೊಂದಿಲ್ಲ. ಜೊತೆಗೆ ಕರ್ನಾಟಕ ವೈದ್ಯಕೀಯ ಕೋರ್ಸ್ ಪೂರೈಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ಕಾಯ್ದೆ (2012) ಪ್ರಶ್ನಿಸಿರುವ ಅರ್ಜಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಿದ್ದಾಗಲೇ ವಿನಾಕಾರಣ ಜಾರಿಗೊಳಿಸಿರು ನೋಟೀಸ್ ರದ್ದುಪಡಿಸಬೇಕು ಎಂಬುದು ಅರ್ಜಿದಾರರ ವಾದ.