ಮುಂಬೈ: ಪ್ರಮುಖ ಕಾರ್ಯಕ್ರಮಗಳಲ್ಲಿನ ಟಿಕೆಟ್ ಮಾರಾಟದ ಬ್ಲ್ಯಾಕ್ ಮಾರ್ಕೆಟಿಂಗ್ ಅನ್ನು ತಡೆಯುವ ನಿಟ್ಟಿನಲ್ಲಿ ಮಾರ್ಗಸೂಚಿ ಅಗತ್ಯವೆಂದು ಕೋರಿ ಸಲ್ಲಿಸಿದ್ದ ಪಿಐಎಲ್( ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಅನ್ನು ಬಾಂಬೆ ಹೈಕೋರ್ಟ್ ಶುಕ್ರವಾರ (ಜ.10) ವಜಾಗೊಳಿಸಿದೆ.
ಜನವರಿ ತಿಂಗಳಾಂತ್ಯದಲ್ಲಿ ನವಿ ಮುಂಬೈನಲ್ಲಿ ನಿಗದಿಯಾಗಿರುವ ಬ್ರಿಟಿಷ್ ಬ್ಯಾಂಡ್ ಕೋಲ್ಡ್ ಪ್ಲೇ ಕಾರ್ಯಕ್ರಮದ ಆನ್ ಲೈನ್ ಟಿಕೆಟ್ ಮಾರಾಟದಲ್ಲಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ವಕೀಲರಾದ ಅಮಿತ್ ವ್ಯಾಸ್ ಪಿಐಎಲ್ ಸಲ್ಲಿಸಿದ್ದರು ಎಂದು ವರದಿ ತಿಳಿಸಿದೆ.
“ಇದು ಶಾಸಕಾಂಗದ ವ್ಯಾಪ್ತಿಗೆ ಒಳಪಟ್ಟ ವಿಷಯವಾಗಿದ್ದು, ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿರುವ ಬಾಂಬೆ ಹೈಕೋರ್ಟ್ ನ ಚೀಫ್ ಜಸ್ಟೀಸ್ ಡಿ.ಕೆ.ಉಪಾಧ್ಯಾಯ ಮತ್ತು ಜಸ್ಟೀಸ್ ಅಮಿತ್ ಬೋರ್ಕರ್ ಅವರನ್ನೊಳಗೊಂಡ ಪೀಠ ಪಿಐಎಲ್ ಅನ್ನು ವಜಾಗೊಳಿಸಿದೆ.
ಇಂತಹ ಸಾರ್ವಜನಿಕ ಕಾರ್ಯಕ್ರಮದ ಬಗ್ಗೆ ಮಾರ್ಗಸೂಚಿ ರೂಪಿಸಿ ಎಂದು ಕೋರ್ಟ್ ಶಾಸಕಾಂಗಕ್ಕೆ ನಿರ್ದೇಶನ ನೀಡುವುದಿಲ್ಲ. ಆದರೆ ಈ ಕಾರ್ಯಕ್ರಮದ ಬಗ್ಗೆ ಸರ್ಕಾರ ಅಗತ್ಯವಿದ್ದರೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.
ಲೈವ್ ಶೋ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳ ಟಿಕೆಟ್ ಮಾರಾಟದಲ್ಲಿ ನಿರಂತರವಾಗಿ ಹಲವು ಅಕ್ರಮ ಕೇಳಿಬರುತ್ತದೆ. ಜನರನ್ನು ವಂಚಿಸುವ ಕಾರ್ಯವೂ ನಡೆಯುತ್ತಿದೆ. ಹೀಗಾಗಿ ಇದನ್ನು ತಡೆಯಲು ಮಾರ್ಗಸೂಚಿಯ ಅಗತ್ಯವಿದೆ ಎಂದು ಪಿಐಎಲ್ ಅರ್ಜಿದಾರ ವ್ಯಾಸ್ ಅವರು ಪ್ರತಿಪಾದಿಸಿದ್ದರು.