Advertisement

ಕಲುಷಿತವಾಗುತ್ತಿದೆ ಹೇಮಾವತಿ ನದಿ

09:07 PM Nov 25, 2019 | Lakshmi GovindaRaj |

ಹೊಳೆನರಸೀಪುರ: ಪಟ್ಟಣದಲ್ಲಿ ಶೇಖರಣೆಯಾಗುವ ಚರಂಡಿ ನೀರು ಹೇಮಾವತಿ ನದಿಗೆ ಸೇರುತ್ತಿದ್ದು, ನದಿ ಕಲುಷಿತವಾಗುತ್ತಿದೆ. ಕಳೆದ ಹತ್ತಾರು ವರ್ಷಗಳಿಂದ ಪಟ್ಟಣದ ಚರಂಡಿ ನೀರು ನೇರವಾಗಿ ನದಿ ಸೇರುತ್ತಿದೆ. ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಜಿಲ್ಲಾಡಳಿತದ ಗಮನ ಸೆಳೆದಿದ್ದರೂ ಚರಂಡಿ ನೀರು ನದಿಗೆ ಸೇರುವುದನ್ನು ತಡೆಗಟ್ಟುವಲ್ಲಿ ಪುರಸಭೆ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಳ್ಳದೇ ಇರುವುದು ಆತಂಕಕಾರಿ ವಿಷಯವಾಗಿದೆ.

Advertisement

ಸಂಸ್ಕರಣ ಘಟಕವಿದ್ದರೂ ಪ್ರಯೋಜನವಿಲ್ಲ: ಪ್ರಸ್ತುತ ಪಟ್ಟಣದಲ್ಲಿ ಒಳಚರಂಡಿ ಯೋಜನೆ ಕೈಗೊಂಡು ಹತ್ತಾರು ವರ್ಷಗಳೇ ಕಳೆದಿದೆ. ಈ ಒಳಚರಂಡಿ ನೀರನ್ನು ಸಂಸ್ಕರಣೆ ಮಾಡಿ ನದಿಗೆ ಬಿಡಲು ಸಂಸ್ಕರಣೆ ಮಾಡಲು ಚನ್ನರಾಯಪಟ್ಟಣದ ರಸ್ತೆಯಲ್ಲಿ ದೊಡ್ಡದಾದ ಮೂರು ಗುಂಡಿಗಳನ್ನು ತೆರದು ಮೂರು ಹಂತದಲ್ಲಿ ಸಂಸ್ಕರಣೆ ಮಾಡಲು ಪುರಸಭೆ ಮುಂದಾಗಿದೆ. ಆದರೆ ಈ ಸಂಸ್ಕರಣೆ ಗುಂಡಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಒಳಚರಂಡಿಯಲ್ಲಿ ಬರುವ ಕೊಳಚೆ ನೀರು ಹೇಮಾವತಿ ನದಿಯನ್ನು ಸೇರುತ್ತಿದೆ. ಇದರಿಂದ ಹೇಮಾವತಿ ನದಿಯ ನೀರು ಸೇವಿಸಲೂ ಸಾಧ್ಯವಾಗಷ್ಟು ಮಲಿನವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಈ ಹಿಂದೆ ಕೊಳಚೆ ನೀರು ನದಿ ಮಡಿಲು ಸೇರುತ್ತಿರುವ ಬಗ್ಗೆ ಅನೇಕ ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ ಜಿಲ್ಲಾಡಳಿತ ಮತ್ತು ಕೊಳಚೆ ನಿಮೂರ್ಲನಾ ಮಂಡಳಿ ಕಠಿಣ ಕ್ರಮ ಕೈಗೊಳ್ಳದೇ ಇದ್ದುದರಿಂದ ನದಿ ಕಲುಷಿತಗೊಂಡು ವಿಷಕಾರಿಯಾಗುತ್ತಿದೆ. ಈ ಹಿಂದೆ ಹೇಮಾವತಿ ನದಿ ನೀರು ಕುಡಿಯಲು ಪನ್ನೀರಿನ ರುಚಿ ಇತ್ತು ಆದರೆ ಇಂದು ನದಿ ನೀರನ್ನು ನೇರವಾಗಿ ಸೇವಿಸಿದರೆ ರೋಗದಿಂದ ಬಳಲುವುದು ಖಚಿತವಾಗಿದೆ.

ನದಿಯಲ್ಲಿ ಈಜಿದರೆ ರೋಗ ಖಚಿತ: ದಶಕದ ಹಿಂದೆ ಪಟ್ಟಣದ ಯುವಕರು ನದಿಗೆ ಈಜಾಡಲು ತೆರಳುತ್ತಿದ್ದರು. ಆದರೆ ಇಂದು ನದಿಯಲ್ಲಿ ಈಜಲು ಹೋದರೆ ಚರ್ಮ ರೋಗಗಗಳು ಬರುವುದು ಖಚಿತವಾಗಿದೆ.

ಪುರಸಭೆ ಮಾಜಿ ಸದಸ್ಯರಿಂದ ಲಿಖಿತ ದೂರು: ಹೇಮಾವತಿ ನದಿಗೆ ಚರಂಡಿ ಹಾಗೂ ಒಳ ಚರಂಡಿ ನೀರು ಸೇರ್ಪಡೆ ಯಾಗುತ್ತಿರುವ ಬಗ್ಗೆ ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್‌ ಮುಖಂಡ ಮುಜಾಹಿದ್‌ಪಾಷಾ ಜಿಲ್ಲಾಧಿಕಾರಿ ಹಾಗೂ ಕೊಳಚೆ ನಿಮೂರ್ಲನಾ ಮಂಡಳಿಗೆ ಲಿಖಿತ ದೂರು ನೀಡಿ ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ನದಿ ಸಂಪೂರ್ಣ ವಿಷಕಾರಿಯಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ.

Advertisement

ಅಕ್ರಮ ಮರಳು ಮಾಫಿಯಾ: ಅಕ್ರಮ ಮರಳು ತುಂಬುವ ಮಾಫಿಯಾ ನದಿಯಲ್ಲಿದ್ದ ಮರಳನ್ನೆಲ್ಲಾ ಬಗೆದು ತೆಗೆದಿದ್ದರಿಂದ ನದಿಯ ನೀರು ಕಲುಷಿತಗೊಳ್ಳಲು ಕಾರಣವಾಗಿದೆ. ಕೆಲವು ಮಂದಿ ನದಿ ದಡದಲ್ಲಿ ಅನಧಿಕೃತವಾಗಿ ದನಗಳನ್ನು ಕಡಿಯುತ್ತಿರುವುದರಿಂದ ದನಗಳ ರಕ್ತ ನದಿಯ ನೀರು ಸೇರುತ್ತಿದೆ. ಜಿಲ್ಲಾಡಳಿತ ಅಕ್ರಮ ಕಸಾಯಿ ಖಾನೆಗಳ ಮೇಲೆ ಹಲವಾರು ಬಾರಿ ದಾಳಿ ನಡೆಸಿದರೂ ಮತ್ತೆ ಕೆಲ ದಿನಗಳಲ್ಲೇ ಕಸಾಯಿ ಖಾನೆ ಆರಂಭವಾಗುತ್ತಿದೆ.

ಹೇಮಾವತಿ ನದಿಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಪುರಸಭೆಯಿಂದ ನದಿಗೆ ಕೊಳಚೆ ನೀರು ಸೇರುತ್ತಿರುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ವಸಂತ, ಪುರಸಭೆ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next