Advertisement

ಬಿಸಿಲ ಝಳಕ್ಕೆ ಕೋಟೆ ನಾಡ ಜನ ತತ್ತರ

11:36 AM Feb 27, 2023 | Team Udayavani |

ಡಿ.ಜಿ. ಮೋಮಿನ್‌
ಗಜೇಂದ್ರಗಡ: ಏನ್‌ ಬಿಸಿಲ್ರೀ.. ಮೈ ಮ್ಯಾಲೆ ಕೆಂಡಾ ಸುರಿದಂಗಾಗ್ತೈತಿ. ಇದೇನ್‌ ಬ್ಯಾಸಿಗ್ಯೋ.. ಇಲ್ಲಾ ಬೆಂಕಿ ಹವಾನಾ… ಈಗ ಹಿಂಗಾದ್ರ ಮುಂದ ಹ್ಯಾಂಗ್ರೀ… ಇವು ಆಕಾಶದಲ್ಲಿ ಸೂರ್ಯದೇವ ಪ್ರತ್ಯಕ್ಷವಾಗುತ್ತಿದ್ದಂತೆ ಕೋಟೆ ನಾಡಿನ ಜನತೆಯ ಪಿಸು ಮಾತುಗಳು.

Advertisement

ತಾಲೂಕಿನಲ್ಲಿ ಕಳೆದೆರಡು ವಾರಗಳಿಂದ ಸೂರ್ಯದೇವನ ನರ್ತನ ಶುರುವಾಗಿದ್ದು, ಇದರಿಂದ ಜನತೆ ತತ್ತರಿಸಿ ಹೋಗಿದ್ದಾರೆ. ರಣ ಬಿಸಿಲಿನ ಪ್ರಖರತೆಗೆ ಭೂಮಿ ಬಿಸಿ ಉಷ್ಣತೆಯನ್ನು ಹೊರ ಸೂಸುತ್ತಿದೆ. ಸೂರ್ಯನ ಹೊಡೆತದಿಂದ ತಪ್ಪಿಸಿಕೊಳ್ಳಲು ಜನರು ಎಳನೀರು, ಕಲ್ಲಂಗಡಿ, ಕಬ್ಬಿನ ಹಾಲು, ಹಣ್ಣಿನ ರಸದಂತಹ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ಜನ, ಜಾನುವಾರುಗಳು ನೀರು-ನೆರಳಿಗಾಗಿ ಪರಿತಪಿಸುವಂತಾಗಿದೆ. ಬೆಳಗ್ಗೆ 8 ಗಂಟೆಯ ಬಿಸಿಲು ಸಹ ಅಸಹನೀಯವಾಗಿದೆ. ಈಗಾಗಲೇ ಪಟ್ಟಣದಲ್ಲಿ ಬಿಸಿಲಿನ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಸುಡು ಬಿಸಿಲಿನಿಂದ ಜನರು ರಕ್ಷಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಬೇಸಿಗೆ ಆರಂಭದಲ್ಲೇ ಬಿಸಿಲಿನ ತಾಪ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ಬಿಸಿಲ ಕಾವು ಹೆಚ್ಚಾಗುತ್ತಿರುವುದು ಜನರನ್ನು ಚಿಂತೆಗೀಡು ಮಾಡಿದೆ. ಮುಂಬರುವ ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಮತ್ತಷ್ಟು ಬಿಸಿಲಿನ ತಾಪ ಹೆಚ್ಚಾಗಬಹುದು ಎನ್ನುವ ಹವಾಮಾನ ಇಲಾಖೆಯ ಮುನ್ಸೂಚನೆಯಿಂದಾಗಿ ನಾಗರಿಕರಲ್ಲಿ ಆತಂಕ ಮನೆ ಮಾಡಿದೆ.

ಜಾನುವಾರು ತತ್ತರ:

ಬಿಸಿಲಿನ ತೀವ್ರತೆಗೆ ಜಾನುವಾರುಗಳು ತತ್ತರಿಸಿದ್ದು, ನೀರಿಗಾಗಿ ಪರಿತಪಿಸುವ ದೃಶ್ಯ ಅಲ್ಲಲ್ಲ ಕಂಡು ಬರುತ್ತಿದೆ. ಜಾನುವಾರುಗಳ ಕಷ್ಟ ನೋಡಿದ ಕೆಲವು ಸಾರ್ವಜನಿಕರು ಮನೆಯ ಹೊರಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

Advertisement

ಜ್ಯೂಸ್‌, ಹಣ್ಣಿಗೆ ಡಿಮ್ಯಾಂಡ್‌:

ಬಿಸಿಲಿನ ಭಾದೆಯಿಂದ ಪಾರಾಗಲು ಜನರು ಹಣ್ಣಿನ ಜ್ಯೂಸ್‌, ಮಜ್ಜಿಗೆ, ಐಸ್‌ಕ್ರೀಂ, ಹಣ್ಣು, ಎಳನೀರು, ಕಲ್ಲಂಗಡಿಗೆ ಮೊರೆ ಹೋಗುತ್ತಿದ್ದಾರೆ. ಪರಿಣಾಮ ಪಟ್ಟಣದ ಬಸ್‌ ನಿಲ್ದಾಣ ರಸ್ತೆ, ರೋಣ ರಸ್ತೆ ಹಾಗೂ ನಗರ ರಸ್ತೆಗಳ ಉದ್ದಕ್ಕೂ ಕಲ್ಲಂಗಡಿ, ಕಬ್ಬಿನ ಹಾಲು, ಹಣ್ಣುಗಳ ಜ್ಯೂಸ್‌ ಮಾರಾಟ ಮಾಡುವವರಿಗೆ ಡಿಮ್ಯಾಂಡ್‌ ಬಂದಿದೆ.

ರೋಡ್‌ ನ್ಯಾಗ್‌ ಕಾಲಿಡಾಕೂ ಆಗವಲ್ದರ್ರೀ. ಅಷ್ಟ ಬಿಸಿಲೈತಿ. ಈಗ ಹಿಂಗಾದ್ರ ಮುಂದ್‌ ಹ್ಯಾಂಗ್‌ ಇರಬಹುದು ಬಿಸಿಲ್‌ ಅನ್ನೋದ ಊಹಿಸಕಾಗ್ತಿಲ್ಲ. ಬಿಸಿಲಿನ ಛಳಕ್ಕ ಕೆಲಸಾನೂ ಮಾಡಾಕ್‌ ಆಗವಲ್ದಾಗೇತ್ರಿ.
ಬಾಷಾ ಮುದಗಲ್ಲ, ಸ್ಥಳೀಯ

ಕೋಟೆ ನಾಡಿಗೆ ಡಬಲ್‌ ಧಮಾಕಾ:

ಐತಿಹಾಸಿಕ ನಗರಿ ಎಂದೇ ಖ್ಯಾತಿ ಪಡೆದ ಗಜೇಂದ್ರಗಡದ ಸುತ್ತಲು ಗುಡ್ಡ ಆವರಿಸಿದೆ. ಜೊತೆಗೆ ಪಟ್ಟಣಕ್ಕೆ ರಕ್ಷಾ ಕವಚದಂತಿರುವ ಗುಡ್ಡದ ಬಂಡೆ ಕಲ್ಲುಗಳು ಹಗಲೆಲ್ಲಾ ಬಿಸಿಲಿನ ತಾಪಕ್ಕೆ ಕಾಯ್ದು ರಾತ್ರಿ ಹೊತ್ತು ಹೊರಸೂಸುವ ಬಿಸಿ ಗಾಳಿಗೆ ಹುಷ್‌… ಎನ್ನುವ ಸ್ಥಿತಿ ಎದುರಾಗಿದೆ. ಇದರಿಂದಾಗಿ ಕೋಟೆ ನಾಡಿನ ಜನತೆ ಬಿಸಿಲಿನ ಡಬಲ್‌ ಧಮಾಕಾ ಅನುಭವಿಸುವಂತಾಗಿದೆ.

ಇದನ್ನೂ ಓದಿ: ಬೀದಿ ವ್ಯಾಪಾರಿಗಳ ಸೆಳೆಯಲು ಮೈ ಭಿ ಡಿಜಿಟಲ್‌

Advertisement

Udayavani is now on Telegram. Click here to join our channel and stay updated with the latest news.

Next