Advertisement

ಹಳೆಯಂಗಡಿ ರೈಲ್ವೇ ಕ್ರಾಸಿಂಗ್‌ ಬಳಿಯ ಆರೋಗ್ಯ ಕೇಂದ್ರ ಕಾರ್ಯ ಸ್ಥಗಿತ

10:15 AM Feb 16, 2018 | Team Udayavani |

ಹಳೆಯಂಗಡಿ: ಇಲ್ಲಿನ ರೈಲ್ವೇ ಕ್ರಾಸಿಂಗ್‌ ಹಾಗೂ ಮುಖ್ಯ ಜಂಕ್ಷನ್‌ ಮಧ್ಯೆ ಸಂಚರಿಸುವಾಗ ರಸ್ತೆಯ ಪಕ್ಕದಲ್ಲೇ ಶಿಥಿಲಾವಸ್ಥೆಯಲ್ಲಿರುವ ಸರಕಾರಿ ಕಟ್ಟಡವೊಂದು ಗಮನ ಸೆಳೆದೀತು. ಇದು ಯಾವ ಇಲಾಖೆಗೆ ಸಂಬಂಧಿಸಿದ್ದೆಂದು
ಮೇಲ್ನೋಟಕ್ಕೆ ತಿಳಿಯದು. ಆದರೆ ಅದು ಆರೋಗ್ಯ ಇಲಾಖೆ ಸುಪರ್ದಿಯಲ್ಲಿದೆ.

Advertisement

ಗ್ರಾಮೀಣ ಭಾಗದವರಿಗೆ ಆರೋಗ್ಯ ಸೇವೆ ಒದಗಿಸುವ ಉಪ ಆರೋಗ್ಯ ಕೇಂದ್ರ ಇದು. ಕಿರಿಯ ಆರೋಗ್ಯ ಸಹಾಯಕಿಯರ ವಸತಿಗೂ ಅನುಕೂಲ ಆಗುವಂತೆ ನಿರ್ಮಿಸಲಾಗಿತ್ತು. ಈ ಕೇಂದ್ರವು ಕೆಮ್ರಾಲ್‌ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಪರ್ಕ ಹೊಂದಿದೆ. ಇದು ಹಳೆ ಕಟ್ಟಡವಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಕೊಠಡಿಗಳು ಶಿಥಿಲಗೊಂಡಿವೆ. ನೆಲವೂ ಅಲ್ಲಲ್ಲಿ ಗುಂಡಿ ಬಿದ್ದು, ವಾಸಿಸಲು ಯೋಗ್ಯವಿಲ್ಲ. ಹೀಗಾಗಿ ಇಲ್ಲಿದ್ದ ಕಿರಿಯ ಆರೋಗ್ಯ ಸಹಾಯಕಿಯವರು ಕೆಮ್ರಾಲ್‌ ಕೇಂದ್ರದಿಂದಲೇ ನಿರ್ವಹಿಸುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ಜಿ.ಪಂ. ಸದಸ್ಯರಾಗಿದ್ದ ಪ್ರಮೋದ್‌ಕುಮಾರ್‌ ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಕೈಗೊಂಡಿದ್ದರು. ಆದರೆ ಕಟ್ಟಡವೇ ಕುಸಿಯುವಂತಿದೆ.

ಸುರತ್ಕಲ್‌ನಿಂದ ಕೆಮ್ರಾಲ್‌ಗೆ
ಈ ಹಿಂದೆ ಹಳೆಯಂಗಡಿ ಗ್ರಾ.ಪಂ. ಸುರತ್ಕಲ್‌ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳ ಪಟ್ಟಿತ್ತು. ಅನಂತರ ನಗರ ಮತ್ತು
ಗ್ರಾಮಾಂತರ ಪ್ರದೇಶದ ಕೇಂದ್ರಗಳಾಗಿ ವಿಂಗಡಿಸಿದಾಗ ಹಳೆಯಂಗಡಿ ಪಂ. ಕೆಮ್ರಾಲ್‌ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ್ದು, ಕಟ್ಟಡವು ಅದರ ಸುಪರ್ದಿಯಲ್ಲಿದೆ. ವೈದ್ಯಾಧಿಕಾರಿಗಳೂ ಇಲಾಖೆಗೆ ಕಟ್ಟಡ ಸ್ಥಿತಿಯನ್ನು ಹಿರಿಯ ಅಧಿಕಾರಿಗಳಿಗೆ ವಿವರಿಸಿರುವ ಹಿನ್ನೆಲೆಯಲ್ಲಿ ಶೀಘ್ರವೇ ಮರು ನಿರ್ಮಾಣಗೊಳಿಸಬೇಕೆಂಬುದು ಸ್ಥಳೀಯರ ಆಗ್ರಹ. 

ಸುಸ್ಥಿತಿಯಲ್ಲಿಟ್ಟು ನಿರ್ವಹಣೆ ಮಾಡಲಿ
ಎಲ್ಲರಿಗೂ ಅನುಕೂಲವಾಗುವ ಉತ್ತಮ ಪ್ರದೇಶದಲ್ಲಿ ಲಭ್ಯವಿರುವ ಈ ಉಪ ಕೇಂದ್ರವನ್ನು ಸುಸ್ಥಿತಿಯಲ್ಲಿಟ್ಟು,
ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಬೇಕು. ಉಪ ಕೇಂದ್ರದ ನಿರ್ವಹಣೆಯ ಬಗ್ಗೆ ಗ್ರಾಮ ಸಭೆಯಲ್ಲೂ ವೈದ್ಯಾಧಿಕಾರಿಗಳು ಭರವಸೆ ನೀಡಿರುತ್ತಾರೆ. ಸರಕಾರದ ಆರೋಗ್ಯ ಯೋಜನೆಗಳು ಈ ಕೇಂದ್ರದಿಂದ ಕಾರ್ಯಗತಗೊಳ್ಳಲಿ.
– ಅಬ್ದುಲ್‌ ಖಾದರ್‌
ಸದಸ್ಯರು, ಹಳೆಯಂಗಡಿ ಗ್ರಾ.ಪಂ

ಕಟ್ಟಡ ಮರು ನಿರ್ಮಾಣ
ಪ್ರಸ್ತುತ ಇದರಲ್ಲಿರುವವರ ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸ್ಥಗಿತಗೊಂಡಿದೆ. ಸಂಪೂರ್ಣವಾಗಿ ಕಟ್ಟಡವನ್ನು ಮರು
ನಿರ್ಮಿಸಲು ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ. ಗ್ರಾಮ ಸಭೆಯಲ್ಲೂ ಪ್ರಸ್ತಾವವಾಗಿದೆ. ಕಿರಿಯ ಆರೋಗ್ಯ
ಸಹಾಯಕಿಯರು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಸಮೀಪದ ಕೆಮ್ರಾಲ್‌ನಲ್ಲೇ ಸಾಧ್ಯವಾದ ಚಿಕಿತ್ಸೆ ನೀಡುತ್ತಿದ್ದೇವೆ.
– ಡಾ| ಮಾಧವ ಪೈ,
ವೈದ್ಯಾಧಿಕಾರಿ, ಕೆಮ್ರಾಲ್‌ ಪ್ರಾ.ಆ. ಕೇಂದ್ರ 

Advertisement

ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next