ಸೊಲ್ಲಾಪುರ: ತೀರ್ಥಕ್ಷೇತ್ರ ಅಕ್ಕಲ್‌ಕೋಟೆ ನಗರದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ 34ನೇ ವಾರ್ಷಿಕೋತ್ಸವ ಹಾಗೂ ಶ್ರೀ ಗುರುಪೂರ್ಣಿಮೆ ಉತ್ಸವವು ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಜು. 23ರಂದನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸರಳವಾಗಿ ಆಚರಿಸಲಾಯಿತು.
ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯರಾಜೆ ಭೋಸ್ಲೆ ನೇತೃತ್ವ ದಲ್ಲಿ ಅನ್ನಛತ್ರದಲ್ಲಿ ಬೆಳಗ್ಗೆ 8ರಿಂದ ಶ್ರೀ ಸ್ವಾಮಿ ಸಮರ್ಥ ಸಾರಾಮೃತ ಪಾರಾಯಣ, ನಾಮಸ್ಮರಣೆ ಮತ್ತು ಗುರುಪೂಜೆ ನೇರವೇರಿತು. ಮಧ್ಯಾಹ್ನ 12ಕ್ಕೆ ಮಂಡಳದ ಪ್ರಮುಖ ಕಾರ್ಯಕಾರಿ ವಿಶ್ವಸ್ಥ ಅಮೋಲರಾಜೆ ಭೋಸ್ಲೆ ಅವರ ಹಸ್ತದಿಂದ ಸಮರ್ಥರಿಗೆ ಮಹಾನೈವೇದ್ಯ ಅರ್ಪಿಸಲಾಯಿತು.
ಸಂಜೆ 5ರಿಂದ ನಡೆಯಬೇಕಿದ್ದ ಪಲ್ಲಕ್ಕಿ ಹಾಗೂ ರಥೋತ್ಸವ ಮೆರವಣಿಗೆಯನ್ನು ರದ್ದುಗೊಳಿಸಲಾಗಿದೆ. ಅನ್ನಛತ್ರದಿಂದ ನಗರದ ಮುಖ್ಯರಸ್ತೆಗಳಲ್ಲಿ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯುತಿತ್ತು. ಆದರೆ ಕೊರೊನಾ ಹಿನ್ನೆಲೆ ಸಂಪೂರ್ಣ ಕಾರ್ಯಕ್ರಮಗಳನ್ನು ರದ್ದುಗೊಳಿಸುವ ಮೂಲಕ ಅನ್ನಛತ್ರ ಮಂಡಳದ 34ನೇ ವಾರ್ಷಿಕೋತ್ಸವ ಹಾಗೂ ಶ್ರೀ ಗುರುಪೂರ್ಣಿಮೆ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು. ಈ ಬಾರಿ ಬೆರಳೆಣಿಕೆ ಮಂದಿಯಷ್ಟೇ ದೇವಾಲಯದಲ್ಲಿ ನೆರೆದಿದ್ದು ಕಂಡುಬಂದಿದ್ದು, ಮಂದಿರ ಪರಿಸರದಲ್ಲಿ ಪೊಲೀಸ್ ಭಿಗಿ ಭದ್ರತೆ ಒದಗಿಸಲಾಗಿತ್ತು.
ಅನ್ನಛತ್ರ ಮಂಡಳದ 34ನೇ ವಾರ್ಷಿಕೋತ್ಸವ ಹಾಗೂ ಗುರುಪೂರ್ಣಿಮೆ ಉತ್ಸವಕ್ಕೆ ಪ್ರತೀವರ್ಷ ಮಹಾರಾಷ್ಟ್ರ
ಸಹಿತ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಅಕ್ಕಲ್‌ಕೋಟಕ್ಕೆ ಬರುತ್ತಿದ್ದರು. ಆದರೆ ಕಳೆದ 2 ವರ್ಷಗಳಿಂದ ಕೊರೊನಾದಿಂದ ಸಂಪೂರ್ಣ ಲಾಕಡೌನ್ ಆಗಿರುವುದರಿಂದ ಭಕ್ತರಿಲ್ಲದೆ ಅನ್ನಛತ್ರ ಬೀಕೋ ಎನ್ನುತ್ತಿದೆ.
ಕಾರ್ಯಕ್ರಮದಲ್ಲಿ ಮಂಡಳದ ಉಪಾಧ್ಯಕ್ಷ ಅಭಯ ಖೋಬರೆ, ಕಾರ್ಯ ದರ್ಶಿ ಶಾಮರಾವ ಮೋರೆ, ಸಂತೋಷ ಭೋಸ್ಲೆ, ಡಾ| ಪ್ರಶಾಂತ ಪ್ರಧಾನ, ಸುರೇಶ್ಚಂದ್ರ ಸೂರ್ಯವಂಶಿ, ಪ್ರವೀಣ್ ಮೋರೆ, ಸಿದ್ಧಾರಾಮ ಕಲ್ಯಾಣಿ, ಮಹಾಂತೇಶ ಸ್ವಾಮಿ, ದತ್ತಾ ಮಾನೆ, ಲಕ್ಷ್ಮಣ್ ಪಾಟೀಲ್, ಪ್ರವೀಣ್ ಘಾಡಗೆ, ಬಾಳಾಸಾಹೇಬ ಪೋಳ, ಅಮಿತ್ ಥೋರಟ್ ಮೊದಲಾದವರು ಉಪಸ್ಥಿತರಿದ್ದರು.