Advertisement
ಪೂಜ್ಯರು ಭಾರತದಾದ್ಯಂತ ವಿಶ್ವಸಂಚಾರಿಯಾಗಿ ತಮ್ಮ ದೇಹವನ್ನು ಶ್ರೇಷ್ಠ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಅಂದರೆ, ಅವರ ಬದುಕಿನ ಸಂದೇಶವೇ ಮಾನವದೇಹ ಅನ್ನುವುದು ಒಂದು ಯಂತ್ರ, ಉಪಕರಣ ಮತ್ತು ಇಹ-ಪರಗಳ ಸಾಧನೆಗೆ ಒಂದು ಮಾಧ್ಯಮ. ಈ ದೇಹದ ಪೋಷಣೆಗಾಗಿ, ಸುಖಕ್ಕಾಗಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಎಲ್ಲಾ ಸಮಯವನ್ನು, ಸಂಪತ್ತನ್ನು ಮತ್ತು ಸಹವಾಸವನ್ನು ಉಪಯೋಗಿಸುತ್ತಾನೆ. ಅದಕ್ಕಾಗಿ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಕೊಟ್ಟು, ದೀರ್ಘಾಯುಷಿಯಾಗುವ ಬಯಕೆ ವ್ಯಕ್ತಪಡಿಸುತ್ತಾನೆ.
Related Articles
Advertisement
ನಮ್ಮ ಧರ್ಮಸ್ಥಳ ಕ್ಷೇತ್ರದ ಚಟುವಟಿಕೆಗಳಲ್ಲಿ, ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ನಾವು ಅವರಿಂದ ಪ್ರೇರಣೆ ಪಡೆದಿದ್ದೇವೆ. ಧಾರವಾಡದ ಜನತಾ ಶಿಕ್ಷಣ ಸಮಿತಿಯಂತೆ ನಮ್ಮ ರಾಜ್ಯದ ಮತ್ತು ರಾಷ್ಟ್ರದ ಅನೇಕ ಸಮಸ್ಯಾತ್ಮಕ, ಸಂಘಟನಾತ್ಮಕ ಮತ್ತು ಆರ್ಥಿಕ ಸಂಕಷ್ಟಕ್ಕೊಳಗಾದ ಸಂಸ್ಥೆಗಳಿಗೆ ಪೂಜ್ಯರು ಮಾರ್ಗದರ್ಶನ ನೀಡಿ ಕಾಯಕಲ್ಪಕೊಟ್ಟು ಪುನರುಜ್ಜೀವನಗೊಳಿಸಿದ್ದಾರೆ. ನನ್ನ ವೈಯಕ್ತಿಕ ಅಭಿಪ್ರಾಯದಂತೆ ಪೂಜ್ಯ ಶ್ರೀಗಳು ನನ್ನ ಜೊತೆ ಮತ್ತು ನಮ್ಮ ಜೊತೆ ಎಂದೂ ಇರುತ್ತಾರೆ. ಅವರ ಭೌತಿಕ ದೇಹ ನಮ್ಮ ಮುಂದೆ ಇರದಿದ್ದರೂ, ಅವರೊಂದಿಗೆ ಕಳೆದ ಪ್ರತಿ ಒಂದು ಕ್ಷಣವೂ ಅಮೂಲ್ಯವಾದದ್ದು ಮತ್ತು ಸ್ಮರಣೀಯವಾದದ್ದು ಎಂದು ಪೂಜ್ಯರಿಗೆ ನನ್ನ ನುಡಿನಮನಗಳನ್ನು ಹಾಗೂ ನಮ್ಮ ಕುಟುಂಬದ ಪರವಾಗಿ ಭಕ್ತಿಪೂರ್ವಕ ಪ್ರಣಾಮಗಳೊಂದಿಗೆ ಗೌರವವನ್ನು ಅರ್ಪಿಸುತ್ತೇನೆ.-ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ ಸಂಕಷ್ಟಗಳಿಗೆ ಎದೆಕೊಡುವ ವೀರಸೈನಿಕ ಇನ್ನೆಲ್ಲಿ?
ಉಡುಪಿ ಶ್ರೀಕೃಷ್ಣಮಠ, ಅಯೋಧ್ಯೆ ರಾಮಮಂದಿರ, ಹಿಂದೂ ಧರ್ಮ, ದೇಶವಿರೋಧಿ ಕೃತ್ಯಕ್ಕೆ ಸಂಬಂಧಿಸಿ ಏನೇ ವಿವಾದಗಳು ಬಂದರೂ ಅದನ್ನು ಎದುರಿಸುವ ಎಂಟೆದೆಯ ವೀರಸೈನಿಕನನ್ನು ಇನ್ನು ಹುಡುಕಬೇಕಾಗಿದೆ. ಇದು ಅಷ್ಟಮಠಗಳಿಗೂ ಅನ್ವಯ. ಶ್ರೀಕೃಷ್ಣ ಮಠವೆಂದರೆ ಅಷ್ಟಮಠಗಳ ಒಕ್ಕೂಟದ ವ್ಯವಸ್ಥೆ ಇದ್ದಂತೆ. ಒಬ್ಬೊಬ್ಬರದು ಒಂದು ರೀತಿಯ ಮನೋಭಾವ ಸಹಜ ವಾಗಿರುತ್ತದೆ. ಒಂದು ಒಮ್ಮತದ ತೀರ್ಮಾನ ತೆಗೆದುಕೊಳ್ಳುವಾಗ ಭೀಷ್ಮನಂತಿದ್ದ ಪೇಜಾವರ ಶ್ರೀಗಳು ಎಲ್ಲರನ್ನೂ ಕುಳ್ಳಿರಿಸಿ ಮಾತನಾಡಿಸಿ ಎಲ್ಲರ ನಿಲುವನ್ನು ತಾಳ್ಮೆಯಿಂದ ಕೇಳಿ ತಮ್ಮ ನಿಲುವನ್ನು ಹೇಳುತ್ತಿದ್ದರು. ಪೇಜಾವರ ಶ್ರೀಗಳು ಇತರರ ಮೇಲೆ ಒತ್ತಡ ತರುತ್ತಿರಲಿಲ್ಲ. ಕೊನೆಗೆ ತಮ್ಮ ನಿಲುವು ಹೀಗೆ ಎಂದು ಹೇಳುತ್ತಿದ್ದರು. ಅವರ ನಿಲುವಿಗೆ ಬದ್ಧರಾಗುತ್ತಿದ್ದರು.
“ಸಾಮಾನ್ಯವಾಗಿ ಪರ್ಯಾಯದ ಅವಧಿಯಲ್ಲಿ ಕೆಲವು ಸಮಸ್ಯೆಗಳು ಏಳುತ್ತಿದ್ದವು. ಉದಾಹರಣೆಗೆ ಪರ್ಯಾಯ ಮೆರವಣಿಗೆಯಲ್ಲಿ ಹಿಂದೆ ಮೇನೆ ಮೇಲೆ ಬರುವ ಕ್ರಮವಿತ್ತು. ಪೇಜಾವರ ಶ್ರೀಗಳು ಮೇನೆಯಲ್ಲಿ ಮಾನವರು ಹೊತ್ತುಕೊಂಡು ಬರುವುದು ಬೇಡ. ಅಲಂಕೃತ ವಾಹನದಲ್ಲಿ ಹೋಗಬಹುದು ಎಂದರು. ತಮ್ಮ ನಿರ್ಣಯವನ್ನು ತಿಳಿಸಿ ಅಂತಿಮ ನಿರ್ಣಯ ಅವರವರಿಗೆ ಬಿಡುತ್ತಿದ್ದರು
-ಪರ್ಯಾಯ ಪೀಠಸ್ಥರಾದ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ದೃಢ ಸಂಕಲ್ಪದ ಗುರುವರ್ಯ
1986ರಲ್ಲಿ ಬೆಂಗಳೂರು ಕಾಚರಕನಹಳ್ಳಿ ಕಸಾಯಿಖಾನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ನಾವೂ ಹೋಗಿದ್ದೆವು. ನಾನು ಆತ್ಮಾಹುತಿ ಘೋಷಣೆ ಮಾಡಿದ್ದೆ. 50,000 ಜನರು ಧರಣಿ ನಡೆಸುತ್ತಿದ್ದೆವು. ಬೇಡಿಕೆ ಈಡೇರುವವರೆಗೆ ಕದಲಬಾರದು ಎಂದು ಪೇಜಾವರ ಶ್ರೀಗಳು ಸೂಚನೆ ನೀಡಿದರು. ಅನಂತರ ಸಮಸ್ಯೆ ಬಗೆಹರಿಯಿತು. ಹೀಗೆ ಸಮಸ್ಯೆಗಳನ್ನು ಪರಿಹರಿಸಲು ಸಲಹೆಗಳನ್ನು ನೀಡುತ್ತಿದ್ದರು. ಆಯಾಸವಿಲ್ಲದೆ ಕೆಲಸ ಹೇಗೆ ಮಾಡಬೇಕು? ಮಾನಸಿಕ ಆಯಾಸವೇ ದೊಡ್ಡ ಆಯಾಸ. ಉಳಿದೆಲ್ಲ ಆಯಾಸಗಳು ಪರಿಗಣನೆಗೆ ಬರುವುದಿಲ್ಲ ಎಂದು ಸಲಹೆ ನೀಡಿ ಕೆಲಸ ಮಾಡಲು ಉತ್ತೇಜನ ನೀಡುತ್ತಿದ್ದರು. ಎರಡು ವೈಚಾರಿಕತೆಗಳು ಬಂದಾಗ ಒಂದು ಕಡೆ ವಾಲದೆ ಮಧ್ಯಮ ಮಾರ್ಗದಲ್ಲಿ ತೆರಳುತ್ತಿದ್ದರು. ಅವರ ಐದನೆಯ ಪರ್ಯಾಯದಲ್ಲಿ ನಮಗೆ “ವಿಶ್ವಮಾನ್ಯ’ ಪ್ರಶಸ್ತಿ ನೀಡಿ ನಮಗೆ ಪ್ರೇರಣೆ ನೀಡಿದ್ದರು.
-ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿವೃದ್ಧಿಯ ಹರಿಕಾರ
ಅಷ್ಟಮಠಗಳಿಗೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯವಿದ್ದರೂ ಪೇಜಾವರ ಶ್ರೀಗಳ ದೊಡ್ಡ ಪಾಲು ಮೊದಲಾಗಿ ಬರುತ್ತಿತ್ತು. ಉದಾಹರಣೆಗೆ ರಾಜಾಂಗಣ ಪಾರ್ಕಿಂಗ್ ಪ್ರದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ದೊಡ್ಡದು. ಇತ್ತೀಚೆಗೆ ಸಂಸ್ಕೃತ ಕಾಲೇಜಿನ ಕಟ್ಟಡ ನಿರ್ಮಾಣವಾಗುವಾಗ ತಮ್ಮ ಕೊಡುಗೆ 50 ಲ.ರೂ. ಮೊತ್ತವನ್ನು ನೀಡಿದ್ದರು. ತಮ್ಮ ದೊಡ್ಡ ಪಾಲು ಕೊಟ್ಟು ಅವರು ಮಾದರಿಯಾಗುತ್ತಿದ್ದರು. ಅವರು ಬೇರೆ ಬೇರೆ ಸಂಸ್ಥೆಗಳಿಂದ ಸಂಗ್ರಹಿಸಿ ಇಂಥ ಮಹತ್ಕಾರ್ಯಗಳಿಗೆ ನೀಡುತ್ತಿದ್ದರು.
-ರತ್ನಕುಮಾರ್, ಶ್ರೀಕೃಷ್ಣ ಮಠದ ಪರಿಸರ ಪ್ರತಿಷ್ಠಾನ ಮತ್ತು ಸಂಸ್ಕೃತ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳು