ಆ ಊರಿನ ಎಲ್ಲೆಡೆ ಕಾಣಸಿಗುವುದು ಕುಂಕುಮ ಬಣ್ಣದ ಮಣ್ಣು. ಕೈಯಲ್ಲಿ ಹಿಡಿದಾಗ ಕೆಂಪು ಕಲ್ಲಿನ ಹುಡಿಯಂತೆ ಭಾಸವಾಗುತ್ತದೆ. ಅದರಲ್ಲಿ ಯಾವ ಬೆಳೆಯನ್ನು ಬೆಳೆಯಲು ಸಾಧ್ಯ? ಎಂಬ ನನ್ನ ಕುತೂಹಲವನ್ನು ತಣಿಸಿದ್ದು ಶಿವಾನಂದ ಫಕೀರಪ್ಪ ತಾಳವಾರ್‌ರವರ ತೋಟ.
ಶಿವಾನಂದರವರಿಗೆ ಬಾದಾಮಿ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಾಲ್ಕು ಎಕರೆ ಜಮೀನಿದೆ. ಎರಡು ಎಕರೆಯಲ್ಲಿ ಸಜ್ಜೆ, ಒಂದು ಎಕರೆಯಲ್ಲಿ ಮೆಕ್ಕೆ ಜೋಳವನ್ನು ಬೆಳೆಯುತ್ತಾರೆ. ಇವು ಕೆಂಪು ಮಣ್ಣಿನಲ್ಲಿ ಉತ್ತಮ ಇಳುವರಿಯನ್ನು ನೀಡುತ್ತಿವೆ. ಎರಡು ವರ್ಷಗಳ ಹಿಂದೆ, ಉಳಿದ ಒಂದು ಎಕರೆಯಲ್ಲಿ ನಿತ್ಯ ಆದಾಯ ನೀಡುವ ಯಾವುದಾದರೂ ಬೆಳೆಗಳನ್ನು ಬೆಳೆಯಬೇಕೆಂದುಕೊಂಡಿದ್ದರು.
ಆ ಸಮಯದಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪರಿಣತರು ಸೀಬೆ ಬೆಳೆಯುವಂತೆ ಸಲಹೆ ನೀಡಿದ್ದರು. ಅಲ್ಲದೆ ಸೀಬೆ ಬೆಳೆಯುವ ಬಗ್ಗೆ ಅದೇ ಊರಿನ 150 ಮಂದಿಗೆ ತರಬೇತಿಯನ್ನೂ ನೀಡಿ ಉಚಿತವಾಗಿ ಸೀಬೆ ಗಿಡಗಳನ್ನು ವಿತರಿಸಿದ್ದರು. ಇದರಿಂದ ಉತ್ತೇಜಿತರಾದ ಸುಮಾರು 110 ಮಂದಿ ರೈತರು ಈಗ ಸೀಬೆ ಬೆಳೆಯುತ್ತಿದ್ದಾರೆ.
ನಾಟಿ ಹೇಗೆ ಮಾಡ್ತಾರೆ?: ಶಿವಾನಂದರವರು ಸೀಬೆ ಬೆಳೆಯಲು ಹೆಚ್ಚೇನೂ ಬಂಡವಾಳ ತೊಡಗಿಸಲಿಲ್ಲ. ಗಿಡದಿಂದ ಗಿಡಕ್ಕೆ ಹದಿನೈದು ಅಡಿ ಅಂತರ ಬಿಟ್ಟು 2 ಅಡಿ ಅಗಲ, ಒಂದೂವರೆ ಅಡಿ ಆಳದ ಗುಂಡಿ ತೆಗೆದು, ಪ್ರತಿ ಬುಡಕ್ಕೆ ಕೊಟ್ಟಿಗೆ ಗೊಬ್ಬರ ಹಾಕಿ ಅದರಲ್ಲಿ ಗಿಡಗಳನ್ನು ನೆಟ್ಟರು. ಪ್ರತಿದಿನ ಗಿಡಗಳಿಗೆ ನೀರು, ಮೂರು ತಿಂಗಳಿಗೊಂದು ಬಾರಿಯಂತೆ ಕೊಟ್ಟಿಗೆ ಗೊಬ್ಬರ ನೀಡಿದ್ದಾರೆ. ವರ್ಷದಲ್ಲಿ ಮೂರು ಬಾರಿ ಸಾವಯವ ಗೊಬ್ಬರ ನೀಡುತ್ತಿದ್ದಾರೆ.
ಗೋಮೂತ್ರ ನೀಡಿದರೆ ಇಳುವರಿ ಜಾಸ್ತಿ ಸಿಗುತ್ತದೆ. ಮೊದಲ ವರ್ಷ ಗಿಡ ಹೂವು ನೀಡಿದೆ. ಆ ಹೂವುಗಳನ್ನು ಕಟಾವು ಮಾಡಿದರೆ ಗಿಡ ಚೆನ್ನಾಗಿ ಬೆಳೆಯುತ್ತದೆ. ನೆಟ್ಟ ಎರಡನೇ ವರ್ಷ ಅಂದರೆ, ಈ ವರ್ಷ ಕಾಯಿ ಕಟಾವಿಗೆ ದೊರೆಯಲು ಆರಂಭವಾಗಿದೆ. ಬೇಸಗೆ ಕಾಲದಲ್ಲಿ ಅಧಿಕ ಪ್ರಮಾಣದಲ್ಲಿ ಕಾಯಿ ಲಭ್ಯವಾಗುತ್ತದೆ. ಕಾಯಿಬಿಟ್ಟ ಎರಡೂವರೆ ತಿಂಗಳ ನಂತರ ಕಟಾವಿಗೆ ಲಭ್ಯ. ಒಮ್ಮೆ ಕಟಾವು ಮಾಡುವಾಗ 1,500 ಕಾಯಿ ಸಿಗುತ್ತದೆ.
ಗೋಮೂತ್ರದಿಂದ ಇಳುವರಿ ಹೆಚ್ಚಳ: ಗೊಬ್ಬರ ನೀಡುವ ಮುಂಚೆ ಗುಂಡಿಯನ್ನು ಸ್ವಚ್ಚಗೊಳಿಸಬೇಕು. ಸಾವಯವ ಗೊಬ್ಬರ ನೀಡಿದರೆ ಸಾಮಾನ್ಯವಾಗಿ ಗಿಡ ಐವತ್ತು ವರ್ಷಗಳವರೆಗೆ ಬದುಕಬಲ್ಲದು. ಗೋಮೂತ್ರ ನೀಡಿದಷ್ಟು ಇಳುವರಿ ಅಧಿಕಗೊಳ್ಳುತ್ತದೆ. ಶಿವಾನಂದರವರು ಹನಿ ನೀರಾವರಿ ವಿಧಾನವನ್ನು ಮೆಚ್ಚಿಕೊಂಡಿದ್ದಾರೆ. ಸ್ಪಿಂಕ್ಲರ್ ಹಾಕಿದರೆ ಹೂವು ಉದುರುವ ಸಾಧ್ಯತೆಗಳಿರುತ್ತದೆ. ಗಿಡಗಳಿಗೆ ಬಿಸಿಲು ಅಗತ್ಯ. ಕೆಲವೊಮ್ಮೆ ಕಾಯಿಯಲ್ಲಿ ಕಪ್ಪು ಚುಕ್ಕೆ ಬೀಳುವ ರೋಗ ಕಾಣಿಸಿಕೊಳ್ಳುತ್ತದೆ. ಆಗ ಸೂಕ್ತ ಕ್ರಮ ಕೈಗೊಳ್ಳಬೇಕು.
ರೈತ: ಶಿವಾನಂದ ಫಕೀರಪ್ಪ ತಾಳವಾರ್
ಸ್ಥಳ: ಕರಡಿಗುಡ್ಡ, ಬಾದಾಮಿ
ಝೀರೋ ಬಜೆಟ್ ಪಾರ್ಮಿಂಗ್
since 2017
* ಚಂದ್ರಹಾಸ ಚಾರ್ಮಾಡಿ