Advertisement

ಉದ್ಯೋಗ ಖಾತ್ರಿ ಕೂಲಿ 20 ರೂ. ಹೆಚ್ಚಳ; ರಾಜ್ಯಾದ್ಯಂತ ಎ.1ರಿಂದಲೇ ಜಾರಿ

03:11 AM Mar 31, 2022 | Team Udayavani |

ದಾವಣಗೆರೆ: ಕೇಂದ್ರ ಸರಕಾರವು ನೂತನ ಆರ್ಥಿಕ ವರ್ಷ ಎ.1ರಿಂದ ಜಾರಿಯಾಗುವಂತೆ ರಾಜ್ಯದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) ಕೂಲಿ ಕಾರ್ಮಿಕರ ಕೂಲಿ ದರವನ್ನು 309 ರೂ.ಗೆ ಹೆಚ್ಚಿಸಿದೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ಇದು 20 ರೂ. ಹೆಚ್ಚು. ಇದೇ ಮೊದಲ ಬಾರಿ ರಾಜ್ಯದಲ್ಲಿ ನರೇಗಾ ಕೂಲಿ ದರ 300 ರೂ. ಗಡಿ ದಾಟಿದ್ದು, ಕೂಲಿ ಕಾರ್ಮಿಕರಲ್ಲಿ ಹರ್ಷ ಮೂಡಿಸಿದೆ. ನರೇಗಾ ಯೋಜನೆಯ ಕೂಲಿ 300 ರೂ. ಗಡಿ ದಾಟಿದ ದೇಶದ 6 ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕೇರಳ, ಸಿಕ್ಕಿಂ, ಹರಿಯಾಣ, ಗೋವಾ, ಕೇಂದ್ರಾಡಳಿತ ಪ್ರದೇಶ ನಿಕೋಬಾರ್‌ನಲ್ಲೂ 300 ರೂ. ಗಡಿ ದಾಟಿದೆ.

ನರೇಗಾವು ಹಕ್ಕು ಆಧಾರಿತ ಯೋಜನೆ ಯಾಗಿದ್ದು, ಗ್ರಾಮೀಣ ಜನರಿಗೆ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವ ಮೂಲಕ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಯುವ ಪ್ರಮುಖ ಉದ್ದೇಶ ಹೊಂದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 4.45 ಲಕ್ಷ ಹೊಸ ಉದ್ಯೋಗ ಚೀಟಿಗಳನ್ನು ನೀಡಲಾಗಿದ್ದು, 10.68 ಲಕ್ಷ ಜನರನ್ನು ಹೊಸದಾಗಿ ಸೇರಿಸಲಾಗಿದೆ. ರಾಜ್ಯದಲ್ಲಿ ಒಟ್ಟು 31.45 ಲಕ್ಷ ಕುಟುಂಬಗಳು ಸಕ್ರಿಯವಾಗಿದ್ದು 58.96 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ. ಕಳೆದ 5 ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಅತಿ ಹೆಚ್ಚು ಮಾನವ ದಿನಗಳ ಸೃಜನೆಯಾಗಿದೆ.

ಇದನ್ನೂ ಓದಿ:ವಿಧಾನ ಮಂಡಲ ಅಧಿವೇಶನ ಅನಿರ್ಧಿಷ್ಠಾವಧಿಗೆ ಮುಂದೂಡಿಕೆ

ಗುರಿ ಮೀರಿ ಸಾಧನೆ
ಪ್ರಸಕ್ತ ಆರ್ಥಿಕ ವರ್ಷದಲ್ಲಿ ನರೇಗಾ ಯೋಜನೆಯಡಿ 19.99 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 13.87 ಲಕ್ಷ ಕಾಮಗಾರಿಗಳನ್ನು ಪೂರ್ಣಗೊಳಿಸಿ 3,738.95 ಕೋಟಿ ರೂ.ಗಳನ್ನು (31-12-21ರ ಅಂಕಿ-ಅಂಶದ ಪ್ರಕಾರ) ನೇರವಾಗಿ ಜಮೆ ಮಾಡಲಾಗಿದೆ.

Advertisement

ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ ಅನುಮೋದಿಸಿದ 13 ಕೋಟಿ ಮಾನವ ದಿನಗಳನ್ನು ಪೂರೈಸಿದ್ದು, ಗುರಿ ಮೀರಿ ಸಾಧನೆ ಮಾಡಿದ್ದಕ್ಕಾಗಿ ಕೇಂದ್ರ ಸರಕಾರ ರಾಜ್ಯಕ್ಕೆ ಹೆಚ್ಚುವರಿಯಾಗಿ 1.40 ಲಕ್ಷ ಮಾನವ ದಿನಗಳನ್ನು ಅನುಮೋದಿಸಿದೆ.

ಒಟ್ಟಾರೆ ನರೇಗಾ ಕೂಲಿ ದರ ಹೆಚ್ಚಳದಿಂದ ಗ್ರಾಮೀಣ ಪ್ರದೇಶದ ಜನ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ಬಿಟ್ಟು ತಮ್ಮೂರಿನಲ್ಲಿಯೇ ಉದ್ಯೋಗ ಪಡೆದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸುಗಮ ಜೀವನ ನಡೆಸಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ.

2015ರಲ್ಲಿ 200 ರೂ. ಗಡಿ ದಾಟಿತ್ತು
ರಾಜ್ಯದಲ್ಲಿ 2015ರಲ್ಲಿ ನರೇಗಾ ಕೂಲಿಯು 200 ರೂ. ಗಡಿ ದಾಟಿತ್ತು. 2014ರಲ್ಲಿ 192 ರೂ. ಆಗಿತ್ತು. 2020ರಲ್ಲಿ 275 ರೂ. ಇದ್ದ ಕೂಲಿಯನ್ನು ಕೇಂದ್ರ ಸರಕಾರ, 2021ರಲ್ಲಿ 289 ರೂ.ಗಳಿಗೆ ಏರಿಸಿತ್ತು. ಈಗ 20 ರೂ. ಹೆಚ್ಚಿಸಿದೆ.

ನರೇಗಾ ಕೂಲಿಯನ್ನು 20 ರೂ. ಹೆಚ್ಚಿಸಿರು ವುದರಿಂದ ಕಾರ್ಮಿಕರಿಗೆ ತುಂಬಾ ಅನುಕೂಲವಾಗಲಿದೆ. ಈಗಾಗಲೇ ಜಿಲ್ಲೆಯಲ್ಲಿ ಯೋಜನೆ ಯಶಸ್ವಿಯಾಗಿ ಜಾರಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ನರೇಗಾಕ್ಕೆ ಹೆಚ್ಚು ಬೇಡಿಕೆ ವ್ಯಕ್ತವಾಗುವ ನಿರೀಕ್ಷೆ ಇದೆ.
– ಡಾ| ಕುಮಾರ್‌, ಸಿಇಒ, ದ.ಕ. ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next