Advertisement
ನಮ್ಮ ಗುರುಗುಂಟಿರಾಯರು ಇತ್ತೀಚೆಗೆ ಬಹಳ ಉಮೇದಿನಲ್ಲಿ ಇರುವುದನ್ನು ಕಾಕು ವಾರ್ತೆಯನ್ನು ರೆಗ್ಯುಲರ್ ಆಗಿ ಓದುವ ಚಟವನ್ನು ಅಂಟಿಸಿಕೊಂಡ ನೀವೆಲ್ಲಾ ಗಮನಿಸಿದವರೇ ಆಗಿರುತ್ತೀರಿ. ಅವರು ಹಾಗೇನೇ. ಒಮ್ಮೊಮ್ಮೆ ಯಾವುದರಲ್ಲೂ ಆಸಕ್ತಿ ವಹಿಸದೆ ಶಕ್ತಿಹೀನರಂತೆ ನಿಮ್ಮನ್ನು ನೋಡಿದರೂ ನೋಡದವರಂತೆ ಅಲಕ್ಷ ಮಾಡಿಯಾರು; ಇನ್ನು ಒಮ್ಮೊಮ್ಮೆ ಸಕತ್ ಸ್ಪಿ³ರಿಟ್ ಹತ್ತಿದವರಂತೆ ಅತ್ಯುತ್ಸಾಹದಿಂದ ಯಾವುದಾರೊಂದು ಅಧ್ವಾನಕ್ಕೆ ಕೈಹಚ್ಚಿಯಾರು.
Related Articles
Advertisement
ಜಿಎಸ್ಟಿ ಅನ್ವಯ: ರಾಯರು ಬಿಲ್ಲಿನಲ್ಲಿ ಕಂಡು ಹೌಹಾರಿದ ಈ ಜಿಎಸ್ಟಿ ಎಂಬ ಪ್ರಾಣಿ ಎಲ್ಲಿ ಯಾವ ರೀತಿಯಲ್ಲಿ ಅನ್ವಯವಾಗುತ್ತದೆ ಎನ್ನುವುದು ಮೂಲಭೂತ ಪ್ರಶ್ನೆ. ಅದಕ್ಕೆ ಉತ್ತರವೇನೆಂದರೆ, ಒಂದು ರೆಸ್ಟಾರಂಟಿನಲ್ಲಿ ಊಟ/ತಿಂಡಿ ಮಾಡಿದರೆ ಅದರ ಸಂಪೂರ್ಣ ಬಿಲ್ ಮೇಲೆ ಜಿಎಸ್ಟಿ ಲಾಗೂ ಆಗುತ್ತದೆ. ಆ ರೆಸ್ಟಾರಂಟಿನಲ್ಲಿ ಸರ್ವಿಸ್ ಚಾರ್ಜ್ (ಟಿಪ್ಸ್) ಪ್ರತ್ಯೇಕವಾಗಿ ಬಿಲ್ಲಿನಲ್ಲಿಯೇ ಹಾಕುವುದಿದ್ದರೆ ಅದನ್ನೂ ಒಳಗೊಂಡಂತೆ ಒಟ್ಟು ಬಿಲ್ ಮೌಲ್ಯದ ಮೇಲೆ ಜಿಎಸ್ಟಿ ಲಾಗೂ ಆಗುತ್ತದೆ. ಆಹಾರ ಪದಾರ್ಥಗಳ ಪೈಕಿ ಆಲ್ಕೋಹಾಲ್ ಮಾತ್ರ ಜಿಎಸ್ಟಿ ಅಡಿಯಲ್ಲಿ ಬರುವುದಿಲ್ಲ. ಅದು ಮೊದಲಿನಂತೆಯೇ ವ್ಯಾಟ್ ಅಡಿಯಲ್ಲೇ ಇರುವ ಕಾರಣ ಆಲ್ಕೋಹಾಲ್ ಮೇಲೆ ವ್ಯಾಟ್ ಹಾಗೂ ಉಳಿದ ಆಹಾರ ಅದಾರ್ಥಗಳ ಮೇಲೆ ಜಿಎಸ್ಟಿ ಅನ್ವಯಿಸುತ್ತದೆ. ಈಗಿನ ಕಾನೂನು ಪ್ರಕಾರ ಜಿಎಸ್ಟಿ ಬಿಟ್ಟು ಬೇರಾವ ಕರವನ್ನೂ ಹೇರುವಂತಿಲ್ಲ. (ಉದಾ: ಸರ್ವಿಸ್ ಟ್ಯಾಕ್ಸ್ ಸೆಸ್‌ಗಳು, ವ್ಯಾಟ್ ಇತ್ಯಾದಿ) ಎರಡು ಟ್ಯಾಕ್ಸ್?:
ಜಿಎಸ್ಟಿ ಎಂಬುದು ಒಂದೇ ಕರವೇ ಆಗಿದ್ದರೂ ಅದನ್ನು ಹಾಕುವಾಗ ಘೋಷಿತ ದರವನ್ನು ಅರ್ಧ ಮಾಡಿ ಎರಡು ಸಮಭಾಗಗಳಲ್ಲಿ ಹಾಕಲಾಗುತ್ತದೆ. ಒಂದು ಸೆಂಟ್ರಲ್ ಜಿಎಸ್ಟಿ (CGST) ಆದರೆ ಇನ್ನೊಂದು ಕರ್ನಾಟಕ ಜಿಎಸ್ಟಿ (KGST). ಇವು ಎರಡೆರಡು ಕರಗಳಲ್ಲ, ಬದಲಾಗಿ ಒಂದೇ ಕರದ ಎರಡು ಸಮಭಾಗಗಳು. ಇವೆರಡು ಬೇರೆ ಬೇರೆ ಖಾತೆಗೆ ಹೋಗುವ ಕಾರಣ ಮೂಲದಿಂದಲೇ ಪ್ರತ್ಯೇಕ ಲೆಕ್ಕ ಇಡಲಾಗುತ್ತದೆ. ಉದಾ: 18% ಜಿಎಸ್ಟಿಯನ್ನು 9% ಸಿಜಿಎಸ್ಟಿ ಎಂದೂ 9% ಕೆಜಿಎಸ್ಟಿ ಎಂದೂ ಬಿಲ್ಲುಗಳಲ್ಲಿ ತೋರಿಸಲಾಗುತ್ತದೆ. ಎರಡೆರಡು ಬಾರಿ ಯಾಕೆ ಜಿಎಸ್ಟಿ ಹಾಕುತ್ತಾರೆ ಎನ್ನುವುದರ ಬಗ್ಗೆ ಗೊಂದಲ ಬೇಡ. ಇಂಟರ್ವಲ್ಲಿನ ಮೊದಲು ಮತ್ತು ನಂತರ ಅಂತ ಎರಡು ಭಾಗಗಳಿದ್ದರೂ ಸಿನೆಮಾ ಒಂದೇ ಅಲ್ವೇ? ಜಿಎಸ್ಟಿ ದರಗಳು:
ರೆಸ್ಟಾರಂಟ್ ವಲಯದಲ್ಲಿ ಜಿಎಸ್ಟಿ ದರವು ಮುಖ್ಯವಾಗಿ ಆ ರೆಸ್ಟಾರಂಟ್ ಯಾವ ತರಗತಿಗೆ ಸೇರಿದ್ದು ಎನ್ನುವುದನ್ನು ಅವಲಂಬಿಸಿದೆ.
1. ಚಿಕ್ಕಪುಟ್ಟ ರೆಸ್ಟಾರಂಟ್:
ಅತಿಸಣ್ಣ ಉದ್ಯಮಗಳಿಗೆ ಈ ಜಿಎಸ್ಟಿ ರಗಳೆ ಬೇಡವೇ ಬೇಡಪ್ಪಾ ಎನ್ನುವ ಸದ್ಭಾವನೆಯಿಂದ ವಾರ್ಷಿಕ ರೂ 75 ಲಕ್ಷಕ್ಕೂ ಕಡಿಮೆ ವ್ಯಾಪಾರ ಇರುವ ರೆಸ್ಟಾರಂಟುಗಳನ್ನು (ದೈನಿಕ ಸುಮಾರು ರೂ 20,000) ಕಾಂಪೋಸಿಷನ್ ಸ್ಕೀಮಿನಡಿಯಲ್ಲಿ ತಂದಿದ್ದಾರೆ. ಇವರಿಗೆ ಜಿಎಸ್ಟಿಯ ಕಾಗದಪತ್ರಗಳ ಗೊಡವೆ ಇರುವುದಿಲ್ಲ. ಇದು ಬಹುತೇಕ ಹಿಂದಿನ ವ್ಯಾಟ್ ಮಾದರಿಯನ್ನೇ ಹೋಲುತ್ತದೆ ಮತ್ತು ಇಲ್ಲಿ ಅವರಿಗೆ ಇನ್ಪುಟ್ ಕ್ರೆಡಿಟ್ ಇರುವುದಿಲ್ಲ. ಕಾಂಪೊಸಿಶನ್ ಅಥವಾ ನಮ್ಮ ಸರಕಾರಿ ಕನ್ನಡದಲ್ಲಿ “ಸಂಯೋಜನೆ ಯೋಜನೆ’ ಎಂಬ ಹೆಸರಿನಲ್ಲಿ ಅಸ್ತಿತ್ವ ಪಡೆದ ಈ ಯೋಜನೆಯಲ್ಲಿ ರೆಸ್ಟಾರಂಟು ಮಾಲೀಕರು ಗ್ರಾಹಕರಿಂದ ಕೇವಲ 5% ಜಿಎಸ್ಟಿ ಮಾತ್ರವೇ ಸಂಗ್ರಹಿಸಿ ಸರಕಾರಕ್ಕೆ ಕಟ್ಟಿದರೆ ಸಾಕು. ಹಾಗಾಗಿ ನೀವು ಬೀದಿ ಬದಿಯಲ್ಲಿ ಕಾಣಿಸುವ ಚಿಕ್ಕಪುಟ್ಟ ರೆಸ್ಟಾರಂಟುಗಳಲ್ಲಿ ಕಾಪಿ-ಗೀಪಿ ಕುಡಿದರೆ ಅವರು ಕೇವಲ 5% ಜಿಎಸ್ಟಿ ಮೇರೆಗೆ ಬಿಲ್ ಮಾಡಬಹುದು. ವಾರ್ಷಿಕ ವಹಿವಾಟು ರೂ 75 ಲಕ್ಷ ಮೀರಿದ ಇತರ ದೊಡ್ಡ ರೆಸ್ಟಾರಂಟುಗಳಂತೆ 12%, 18%, 28%, ಅಥವಾ ಇನ್ಯಾವುದೇ ಬಾಯಿಗೆ ಬಂದ ಜಿಎಸ್ಟಿ ದರ ವಿಧಿಸಲು ಸಾಧ್ಯವಿಲ್ಲ. ಆದರೆ ಯಾವುದೇ ಒಂದು ರೆಸ್ಟಾರಂಟಿನ ಟರ್ನೋವರ್ ಅಥವಾ ವಹಿವಾಟು ಎಷ್ಟಿದೆ ಅಥವಾ ಅದು ರೂ 75 ಲಕ್ಷ ಮೀರಿಲ್ಲ ಎಂಬುದು ನಿಮಗೆ ತಿಳಿಯುವುದಾದರೂ ಹೇಗೆ? ಅದು ನಿಮಗೆ ತಿಳಿಯುವುದು ದುಸ್ತರವೇ ಸರಿ! ನಿಮ್ಮ ಕಣ್ಣಿಗೆ 75 ಲಕ್ಷ ಮೀರಿದವರಂತೆ 12% ಜಿಎಸ್ಟಿ ಹಾಕಿ ಸರಕಾರದ ಕಣ್ಣಿಗೆ 75 ಲಕ್ಷ ಮೀರದವರಂತೆ ಕೇವಲ 5% ಮಾತ್ರ ಅತ್ಲಾಗಿ ಕಟ್ಟಿ ಉಳಿದ 7% ಕಿಸೆಗೇರಿಸಿದರೆ ನಮಗೆ ತಿಳಿಯುವುದು ಹೇಗೆ ಎಂದು ಹಲವರು ಕೇಳುತ್ತಾರೆ. ಈ ಬಗ್ಗೆ ಕಟ್ಟುನಿಟ್ಟಾದ ಕಾನೂನಿದೆ ಮತ್ತು ಅದನ್ನು ಅನುಷ್ಠಾನಕ್ಕೆ ತರುವುದು ಸರಕಾರದ ಜವಾಬ್ದಾರಿ. ಗ್ರಾಹಕರಾಗಿ ಈ ನಿಟ್ಟಿನಲ್ಲಿ ಅವ್ಯವಹಾರಗಳು ಕಂಡು ಬಂದಲ್ಲಿ ಕರ ಇಲಾಖೆಗೆ ಪುರಾವೆ ಸಹಿತವಾದ ದೂರು ಕೊಡಬಹುದು. 2. ನಾನ್-ಎಸಿ ರೆಸ್ಟಾರಂಟ್:
ಚಿಕ್ಕಪುಟ್ಟ ರೆಸ್ಟಾರಂಟುಗಳನ್ನು ಬಿಟ್ಟು ತುಸು ದೊಡ್ಡ ದರ್ಜೆಯ ರೆಸ್ಟಾರಂಟುಗಳ ಬಗ್ಗೆ ಮಾತನಾಡೋಣ. ಬಹುತೇಕ ಜನಸಾಮಾನ್ಯರು ಇಂತಹ ರೆಸ್ಟಾರಂಟುಗಳಿಗೆ ಹೋಗುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಇಲ್ಲಿ ನಾನ್-ಎಸಿ ತರಗತಿಯ ರೆಸ್ಟಾರಂಟುಗಳಲ್ಲಿ 12% ಜಿಎಸ್ಟಿ ಅನ್ವಯವಾಗುತ್ತದೆ. ಇಲ್ಲಿ ನಾನ್-ಎಸಿ ಅಂದರೆ ಇಡೀ ರೆಸ್ಟಾರಂಟು ನೂರಕ್ಕೆ ನೂರು ಶತಮಾನ ನಾನ್-ಎಸಿ ಆಗಿರಬೇಕು. ರೆಸ್ಟಾರಂಟಿನ ಯಾವುದೇ ಒಂದು ಭಾಗ/ಕೋಣೆ/ಅಂತಸ್ತಿನಲ್ಲಿ ಎಸಿ ಇದ್ದರೂ ಕೂಡಾ ಆ ಇಡೀ ರೆಸ್ಟಾರಂಟನ್ನು ಜಿಎಸ್ಟಿ ಮಟ್ಟಿಗೆ ಎಸಿ ಎಂದೇ ಪರಿಗಣಿಸಲಾಗುತ್ತದೆ. 3. ಎಸಿ ರೆಸ್ಟಾರಂಟು:
ಯಾವುದೇ ರೆಸ್ಟಾರಂಟು ಭಾಗಶಃ ಅಥವಾ ಸಂಪೂರ್ಣ ಹವಾ ನಿಯಂತ್ರಣಕ್ಕೆ ಒಳಪಟ್ಟಿದ್ದರೆ ಅಂತಹ ರೆಸ್ಟಾರಂಟುಗಳ ಮೇಲೆ 18% ಜಿಎಸ್ಟಿ ಅನ್ವಯವಾಗುತ್ತದೆ. ಇಲ್ಲಿ ಭಾಗಶಃ ಅಥವಾ ಸಂಪೂರ್ಣ ಎನ್ನುವ ವಿಚಾರ ಬಹಳ ಮುಖ್ಯವಾದದ್ದು. ರೆಸ್ಟಾರಂಟಿನ ಯಾವುದೇ ಭಾಗ/ಕೋಣೆ ಅಥವಾ ಮಾಳಿಗೆಯಲ್ಲೂ ಎಸಿ ಸೌಲಭ್ಯ ಇದ್ದಲ್ಲಿ ಅದಿಡೀ ರೆಸ್ಟಾರಂಟ್ 18% ಜಿಎಸ್ಟಿ ಅಡಿಯಲ್ಲಿ ಬರುತ್ತದೆ. ನೀವು ನಾನ್-ಎಸಿ ಭಾಗದಲ್ಲಿ ಕುಳಿತಿದ್ದರೂ ಸಹ ಎಸಿ ರೆಸ್ಟಾರಂಟಿಗೆ ಅನ್ವಯವಾಗುವ 18% ನೀಡಲೇಬೇಕು ಎಂಬುದಾಗಿ ಸರಕಾರದ ಸ್ಪಷ್ಟೀಕರಣ ಇದೀಗ ಬಂದಿರುತ್ತದೆ. 4. ಬಾರ್:
ನಾನ್-ಎಸಿಯಾಗಲಿ, ಎಸಿಯಾಗಲಿ; ಯಾವುದೇ ತರಗತಿಯ ರೆಸ್ಟಾರಂಟು ಆದರೂ ಅದು ಬಾರ್ ಎಂದಾಕ್ಷಣ ಅಲ್ಲಿ ನೀಡುವ ಆಹಾರ ಪದಾರ್ಥಗಳಿಗೆ 18% ಜಿಎಸ್ಟಿ ಲಾಗೂ ಆಗುತ್ತದೆ. ಅಲ್ಲಿನ ಆಹಾರ ಪದಾರ್ಥಗಳ ಮೇಲೆ 18% ಜಿಎಸ್ಟಿ ತೆರಲೇಬೇಕು. ಆದರೆ ಬಾರ್‌ಗಳಲ್ಲಿ ನೀಡುವ ಆಲ್ಕೋಹಾಲ್ ಪದಾರ್ಥಗಳಿಗೆ ಪ್ರತ್ಯೇಕವಾಗಿ ವ್ಯಾಟ್ ತೆರಿಗೆ ಮಾತ್ರವೇ ಲಾಗೂ ಆಗುತ್ತದೆ. ಯಾಕೆಂದರೆ, ಆಲ್ಕೋಹಾಲ್ ಪದಾರ್ಥವು ಜಿಎಸ್ಟಿ ಪರಿಧಿಯೊಳಗೆ ಬರುವುದಿಲ್ಲ. ಆಲ್ಕೋಹಾಲ್ ಹಿಂದಿನಂತೆಯೇ ಈಗಲೂ ರಾಜ್ಯ ಸರಕಾರದ ಸುಪರ್ದಿಯಲ್ಲಿ ಬರುವ ವ್ಯಾಟ್ ತೆರಿಗೆಯ ಅಡಿಯಲ್ಲಿಯೇ ಇದೆ. ಹಾಗಾಗಿ ನೀವು ಒಂದು ಬಾರಿಗೆ ಹೋಗಿದ್ದರೆ ಅಲ್ಲಿ ಆಲ್ಕೋಹಾಲ್ ಪದಾರ್ಥಗಳಿಗೆ ಆಯಾ ರಾಜ್ಯ ಸರಕಾರ ನಿಗದಿತ ವ್ಯಾಟ್ ತೆರಿಗೆ ತೆತ್ತು ಉಳಿದ ಪದಾರ್ಥಗಳಿಗೆ ಆಯಾ ರೆಸ್ಟಾರಂಟ್ ತರಗತಿಗೆ ಅನುಸಾರವಾದ ಜಿಎಸ್ಟಿ ತೆರಬೇಕು. (ಕರ್ನಾಟಕದಲ್ಲಿ ಸದ್ಯ ಆಲ್ಕೋಹಾಲ್ ಮೇಲೆ ವ್ಯಾಟ್ ದರ ಶೂನ್ಯ) ನಿಮ್ಮ ಬಿಲ್ಲಿನಲ್ಲಿ ಈ ಎರಡೂ ವಿಭಾಗಗಳಿರಬಹುದು ಅಥವಾ ಎರಡು ಪ್ರತ್ಯೇಕ ಬಿಲ್ಲುಗಳನ್ನೂ ನೀಡಬಹುದು. ಅದರೆ ಆಲ್ಕೋಹಾಲ್ ಮೇಲೆ ಜಿಎಸ್ಟಿ ಮತ್ತು ವ್ಯಾಟ್ ಎರಡನ್ನೂ ಹಾಕುವಂತಿಲ್ಲ. ಬಾರಿನಲ್ಲಿ ಕುಳಿತುಕೊಂಡು; ಅದೂ ಕೂಡಾ ಬಿಲ್ ಬರುವ ಹೊತ್ತಿಗೆ, ಇದೆಲ್ಲಾ ರಗಳೆ ಲೆಕ್ಕ ನೋಡುವುದು ತುಸು ಕಷ್ಟವೇ ಆದರೂ ಮರು ದಿನ ಮಧ್ಯಾನ್ನ ಎದ್ದ ಮೇಲಾದರೂ ಪರಿಶೀಲಿಸಬಹುದಲ್ಲವೇ? 5. 5-ಸ್ಟಾರ್ ಹೋಟೆಲ್:
ಯಾವುದೇ 5-ಸ್ಟಾರ್ ಹೋಟೆಲಿನ ಯಾವುದೇ ರೆಸ್ಟಾರಂಟಿನಲ್ಲೂ ಸೇವಿಸಿದ ಆಹಾರಕ್ಕೆ ನೇರವಾಗಿ 28% ಜಿಎಸ್ಟಿ ಅನ್ವಯವಾಗುತ್ತದೆ. ಒಮ್ಮೆ 5-ಸ್ಟಾರ್ ಅಂದ ಮೇಲೆ ಬೇರಾವುದೇ ಇತಿಮಿತಿಗಳು ಇಲ್ಲಿ ಬರುವುದಿಲ್ಲ. 6. ಆರ್ಡರ್ ಅನುಸಾರ ಪಾರ್ಸೆಲ್:
ನಮ್ಮಲ್ಲಿ ಬಹಳಷ್ಟು ಜನ ರೆಸ್ಟಾರಂಟಿಗೆ ಹೋಗಿ ಆರ್ಡರ್ ನೀಡಿ “ಫುಡ್ ಪಾರ್ಸೆಲ್‘ ತೆಗೆದುಕೊಂಡು ಬರುತ್ತೇವೆ ಅಥವಾ ಫೋನ್ ಮಾಡಿ ಅವರಿಗೇನೇ ಬೈಕಿನಲ್ಲಿ ಹೋಮ್ ಡೆಲಿವರಿ ತಂದು ಕೊಡಲು ಕೋರುತ್ತೇವೆ. ಅಂತಹ “ಟೇಕ್ ಅವೇ’ ಅಹಾರ ಪದಾರ್ಥಗಳಿಗೆ ಜಿಎಸ್ಟಿಯನ್ನು ಯಾವ ರೀತಿ ಅನ್ವಯಿಸುವುದು ಎನ್ನುವುದರ ಬಗ್ಗೆ ಸಾಕಷ್ಟು ಗೊಂದಲವಿತ್ತು. ಆದರೀಗ ಸರಕಾರವು ಈ ಬಗ್ಗೆ ಸ್ಪಷ್ಟವಾದ ಹೇಳಿಕೆಯನ್ನು ನೀಡಿ ಗೊಂದಲ ಪರಿಹರಿಸಿದೆ. ಅಂತಹ ಪಾರ್ಸೆಲ್‌ಗಳಿಗೆ ಅವುಗಳ ಮೂಲ ಅನ್ವಯವಾಗುತ್ತದೆ ಎನ್ನುತ್ತದೆ ಸರಕಾರ. ಅಂದರೆ ಮೇಲ್ಕಾಣಿಸಿದ ಯಾವ ತರಗತಿ ರೆಸ್ಟಾರಂಟಿನಿಂದ ಆ ಪಾರ್ಸೆಲ್‌ಗಳು ಬರುತ್ತವೆಯೋ ಅವೇ ತರಗತಿಯ ಜಿಎಸ್ಟಿ ದರ ಅನ್ವಯವಾಗುತ್ತವೆ. 7. ಪ್ರಿ-ಪ್ಯಾಕ್ಡ್ ಮತ್ತು ಪ್ರಿ-ಕುಕ್ಡ್ ನಮ್ಕಿನ್ಸ್ನ ಪಾರ್ಸೆಲ್:
ಯಾವುದೇ ತರಗತಿಯ ರೆಸ್ಟಾರಂಟುಗಳಲ್ಲಾದರೂ ರೆಡಿ-ಮೇಡ್ ನಮ್ಕಿನ್ಸ್ ಖರೀದಿ ಮಾಡಿ ಪಾರ್ಸೆಲ್ ಕೊಂಡೊಯ್ಯುವುದಾದರೆ ಅದರ ಮೇಲೆ ಕೇವಲ 12% ಜಿಎಸ್ಟಿ ಬೀಳುತ್ತದೆ ಎನ್ನುವುದನ್ನು ಸರಕಾರವು ಖಚಿತಪಡಿಸಿದೆ. ಜಯದೇವ ಪ್ರಸಾದ ಮೊಳೆಯಾರ