ಹುಬ್ಬಳ್ಳಿ: ನಾಲಾವೊಂದಕ್ಕೆ ಮಾದರಿ ರೂಪ ನೀಡಿದ ದೇಶದ ಮೊದಲ ಹಸಿರು ಪಥ (ಗ್ರೀನ್ ಮೊಬಿಲಿಟಿ ಕಾರಿಡಾರ್) ಲೋಕಾರ್ಪಣೆಗೆ ಸಿದ್ಧಗೊಂಡಿದ್ದು, ಹಿಂದೆ ಕೊಳಚೆ ನೀರು ಹರಿಯುವ ನಾಲೆ ಇದೀಗ ಪ್ರಾಯೋಗಿಕವಾಗಿ ಅನುಷ್ಠಾನಗೊಂಡಿರುವ ಹಸಿರು ಪಥ ಯೋಜನೆಯಿಂದಾಗಿ ಜನಾಕರ್ಷಣೆಯ ತಾಣವಾಗಿ ಬದಲಾಗುತ್ತಿದೆ. ಮಹಾನಗರದ ಜನತೆಯ ಆಕರ್ಷಣೀಯ ಹಾಗೂ ಪಿಕ್ನಿಕ್ ಸ್ಥಳವಾಗಿ ಪರಿವರ್ತನೆಯಾಗಿರುವ ಈ ನಾಲಾ ಒಟ್ಟು ಉದ್ದ ಸುಮಾರು 9.25 ಕಿಮೀ. ಆದರೆ ಪ್ರಾಯೋಗಿಕವಾಗಿ 640 ಮೀಟರ್ ಪೂರ್ಣಗೊಂಡಿದೆ.
ಮೂರು ಹಂತದಲ್ಲಿ ಇದನ್ನು ಪೂರ್ಣಗೊಳಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಪ್ರಾಯೋಗಿಕ ಹಂತ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ದೇಶದ ಮೊದಲ ಯೋಜನೆ ಎನ್ನುವುದಕ್ಕೆ ಮಾದರಿಯಾಗಿದೆ. ಥೀಮ್ ಗಾರ್ಡನ್‌ಗಳು, ಫುಡ್ ಸ್ಟ್ರೀಟ್, ಸಾರ್ವಜನಿಕ ಬೈಸಿಕಲ್ ಹಂಚಿಕೆ ವ್ಯವಸ್ಥೆ, ಮಕ್ಕಳ ಆಟದ ಪ್ರದೇಶ, ಸಾರ್ವಜನಿಕ ಉದ್ಯಾನವನಗಳು, ಹೊರಾಂಗಣ ಜಿಮ್‌ಗಳು ಮತ್ತು ಕ್ರೀಡಾ ರಂಗ ಇತ್ಯಾದಿಗಳನ್ನು ಈ ಹಸಿರು ಪಥ ಹೊಂದಿದೆ.
ಸ್ಮಾರ್ಟ್ ಸೈಕಲ್‌ಗಳ ಸವಾರಿ ಈ ಪಥದ ಆಕರ್ಷಣೆಯಾಗಿದೆ. ವಾಕಿಂಗ್ ಪಾಥ್‌ಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಈ ಸೈಕಲ್ ಗಳು ಬಿಆರ್‌ಟಿಎಸ್ ಕಾರಿಡಾರ್ ಸಂಪರ್ಕ ಸೇರಿದಂತೆ ಇನ್ನಿತರೆಡೆ ಸಂಪರ್ಕ ಹೊಂದಿದೆ. ಈ ಯೋಜನೆ ಯಶಸ್ವಿಯಾಗಿ ಸಾಕಾರಗೊಳಿಸಲು ಖಾಸಗಿ ಕಂಪನಿಯೊಂದಕ್ಕೆ ನೀಡಲಾಗಿದೆ. ಬೆಳಗ್ಗೆ ಹಾಗೂ ಸಂಜೆ ಇದೊಂದು ವಾಯುವಿಹಾರಿಗಳಿಗೆ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಈ ನೋಟ ವಿದೇಶದ ಅನುಭವವನ್ನು ನೀಡುತ್ತದೆ ಎನ್ನುವುದು ಸಾರ್ವಜನಿಕರ ಸಂತಸದ ನುಡಿಯಾಗಿದೆ.
ಅಂತರ್ಜಲ ಮಟ್ಟ ಹೆಚ್ಚಳ:
100 ಸ್ಮಾರ್ಟ್‌ಸಿಟಿ ನಗರಗಳ ಪೈಕಿ ಇದು ಮೊದಲ ಯೋಜನೆ. 8 ಕೋಟಿ ವೆಚ್ಚದಲ್ಲಿ 640 ಮೀಟರ್ ಉದ್ದದ ನಾಲಾ ಅಭಿವೃದ್ಧಿ ಹಾಗೂ ಸೈಕಲ್ ಪಾಥ್ ನಿರ್ಮಾಣ ಮಾಡಲಾಗಿದೆ. ಎರಡನೇ ಹಂತದಲ್ಲಿ 122 ಕೋಟಿ ರೂ. ವೆಚ್ಚದಲ್ಲಿ 5.6 ಕಿಮೀ ಕಾಮಗಾರಿ ಆರಂಭಗೊಳ್ಳಬೇಕಿದೆ. ಇನ್ನುಳಿದಂತೆ 80 ಕೋಟಿ ರೂ.ಗಳ ಕಾಮಗಾರಿ ಡಿಪಿಆರ್ ಸಿದ್ಧಪಡಿಸಲಾಗಿದೆ. ಮಳೆಗಾಲದಲ್ಲಿ ನಾಲಾ ತುಂಬಿ ಹರಿದು, ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿತ್ತು. ನಾಲಾ ಗೋಡೆ ಎತ್ತರವಾಗಿರುವುದರಿಂದ ಅಂತಹ ಸಮಸ್ಯೆ ಉಂಟಾಗುವುದಿಲ್ಲ. ಕಲ್ಲುಗಳನ್ನು ಹಾಕಿ ನೀರು ಇಂಗುವಂತೆ ಮಾಡಲಾಗಿದೆ. ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ.
28 ಎಂಎಲ್‌ಡಿ ನೀರು ಶುದ್ಧೀಕರಣ:
ನಾಲಾದಲ್ಲಿ ನಿತ್ಯ ಶುದ್ಧ ನೀರು ಹರಿಸುವ ಯೋಜನೆಯಿದೆ.ಉಣಕಲ್ಲ ಸೇರಿದಂತೆ ಸುತ್ತಲಿನ ಪ್ರದೇಶಗಳಿಂದ ಉಣಕಲ್ಲ ಕೆರೆಗೆ ಸಂಗ್ರಹವಾಗುವ ಚರಂಡಿ ನೀರನ್ನು ಶುದ್ಧೀಕರಿಸಿ ಈ ನಾಲಾಗೆ ಹರಿಸುವ ಯೋಜನೆಯಿದೆ. ಹೀಗಾಗಿ ವರ್ಷದ ಪೂರ್ತಿ ನಾಲಾದಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಇದರಿಂದ ಸುತ್ತಲಿನ ಅಂತರ್ಜಲ ಮಟ್ಟ ಸುಧಾರಿಸಲಿದೆ. ಕೆರೆಗೆ ಸಂಗ್ರಹವಾಗುವ ಕಲ್ಮಶ ನೀರು ಕೂಡ ಶುದ್ಧೀಕರಣವಾಗಲಿದೆ. ಸುಮಾರು 28 ಎಂಎಲ್‌ಡಿ ನೀರು ಶುದ್ಧೀಕರಿಸುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ದೂರವಾಗಲಿದೆ.
ಈಗಾಗಲೇ ಪ್ರಾಯೋಗಿಕ ಯೋಜನೆಯಾಗಿ 640 ಮೀಟರ್ ಉದ್ದದ ಕಾಮಗಾರಿ ಮುಕ್ತಾಯಗೊಂಡಿದ್ದು, ಎರಡನೇ ಹಂತದಲ್ಲಿ 5.6 ಕಿಮೀ ಕಾಮಗಾರಿ ಆರಂಭಗೊಳ್ಳಬೇಕಿದೆ. ಈ ಯೋಜನೆಯಿಂದ ದೇಶದಲ್ಲಿ ಪ್ರಥಮ ಗ್ರೀನ್ ಮೊಬಿಲಿಟಿ ಕಾರಿಡಾರ್ ಯೋಜನೆ ಹೊಂದಿದ ನಗರ ನಮ್ಮದಾಗಲಿದೆ. ಅತೀ ಶೀಘ್ರದಲ್ಲಿ ಇದನ್ನು ಲೋಕಾರ್ಪಣೆಗೊಳಿಸಲಾಗುವುದು. ಇತ್ತೀಚೆಗೆ ಭೇಟಿ ನೀಡಿದ ಫ್ರಾನ್ಸ್ ನಿಯೋಗ ಯೋಜನೆ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದೆ.
–ಶಕೀಲ ಅಹ್ಮದ್, ವ್ಯವಸ್ಥಾಪಕ ನಿರ್ದೇಶಕ ಸ್ಮಾರ್ಟ್‌ಸಿಟಿ
-ಬಸವರಾಜ ಹೂಗಾರ