Advertisement

ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಮಹಾ ದೇವಾದಿದೇವ-ಮಹಾವೀರ

10:20 AM Apr 14, 2022 | Team Udayavani |

ಜೈನ ಧರ್ಮದ 24ನೇ ತೀರ್ಥಂಕರರು ಭಗವಾನ್‌ ಮಹಾವೀರ ಸ್ವಾಮಿ. ವರ್ತಮಾನ ಕಾಲದ ಅಂದರೆ 24ನೇ ತೀರ್ಥಂಕರರು ಇವರಾಗಿದ್ದಾರೆ. ಇವರನ್ನು ವರ್ಧಮಾನ, ಸನ್ಮತಿ ನಾಯಕ, ವೀರ, ಮಹಾ ವೀರಾಧಿವೀರ, ಶ್ರಮಣ…ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.

Advertisement

ಇಕ್ಷಾಕು ರಾಜವಂಶದ ಸಿದ್ಧಾರ್ಥ- ಪ್ರಿಯಕಾರಣಿಯ ಮುದ್ದಿನ ಮಗನಾಗಿ ವೈಶಾಲಿ ನಗರದ ಬಳಿಯ ಕುಂಡಲ ಗ್ರಾಮದಲ್ಲಿ ಇವರ ಜನನವಾಯಿತು. ಇವರು ಬಿಹಾರದ ನಳಂದಾ ಬಳಿಯ ಪಾವಪುರಿಯಲ್ಲಿ ನಿರ್ವಾಣ ಹೊಂದಿದರು.

ಭಗವಾನ್‌ ಶ್ರೀ ಮಹಾವೀರರ ಜನ್ಮಕಲ್ಯಾಣಕ ದಿನವನ್ನು ನಾವು ಮಹಾವೀರ ಜಯಂತಿ ಎಂಬ ಹೆಸರಿನೊಂದಿಗೆ ಎಪ್ರಿಲ್‌ 14ರಂದು ಆಚರಿಸುತ್ತೇವೆ. ವಿಶ್ವದೆಲ್ಲೆಡೆ ಅಶಾಂತಿಯ ಕಾರ್ಮೋಡ ಕವಿದಿರುವಾಗ ಜನರು ಶಾಂತಿಯನ್ನು ಅರಸುತ್ತಿರುವ ಈ ಕಾಲಘಟ್ಟದಲ್ಲಿ ಭಗವಾನ್‌ ಮಹಾವೀರರ ಶಾಂತಿ ಸಂದೇಶ ಹೆಚ್ಚು ಪ್ರಸ್ತುತತೆಯನ್ನು ಪಡೆದಿದೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ವಿಶ್ವದ ಹಲವಾರು ದೇಶಗಳಲ್ಲಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

ಭಗವಾನ್‌ ಮಹಾವೀರರು ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದರು. ಇವರ ಬೋಧನೆಗಳಲ್ಲಿ 5 ತಣ್ತೀಗಳಾದ ಸತ್ಯ, ಅಹಿಂಸೆ, ಆಚೌರ್ಯ, ಬ್ರಹ್ಮಚರ್ಯ, ಅಪರಿಗ್ರಹ ಇವು ಮಹಾವ್ರತಗಳಾಗಿವೆ.

ಇವರು ಅಹಿಂಸೆಯ ಪ್ರತಿಪಾದಕರು. ಮಹಾವೀರರ ಜಯಂತಿಯನ್ನು ಆಚರಿಸುವ ಮೂಲ ಉದ್ದೇಶ ಪ್ರತಿಯೊಬ್ಬರೂ ಕೂಡ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು ಎಂದು ಸರ್ವರಿಗೂ ತಿಳಿಸಿ ಕೊಡುವುದಾಗಿದೆ.

Advertisement

ವಿಶ್ವದ ಪ್ರತಿಯೊಬ್ಬರು ಎಲ್ಲ ಜೀವಿಗಳನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು ಹಾಗೂ ಸೂಕ್ಷ್ಮ ಜೀವಿಗಳಿಂದ ಹಿಡಿದು ದೊಡ್ಡ ಬಹುಕೋಶ ಜೀವಿಗಳವರೆಗೂ ಕೂಡ ಈ ತಣ್ತೀವನ್ನು ಆಚರಿಸಿಕೊಂಡು ಮುನ್ನಡೆಯಬೇಕು ಎಂಬುದು ಇವರ ಸಂದೇಶದ ಮೂಲ ತಾತ್ಪರ್ಯವಾಗಿದೆ. ಈ ಮೌಲ್ಯಗಳನ್ನು ಆರಂಭದಿಂದ ಪಾಲಿಸಿದವರು ಜೈನ ಧರ್ಮೀಯರು. ಆದರೆ ಇಂದು ಮಹಾವೀರರ ಸಂದೇಶಗಳು ಇಡೀ ವಿಶ್ವಕ್ಕೆ ಅತೀ ಅಗತ್ಯವಾಗಿ ಬೇಕಾಗಿದೆ.

ಮಹಾವೀರರು ವಯಸ್ಸಿಗೆ ಬಂದಾಗ ರಾಜ್ಯವನ್ನು ಆಳುವ ಜವಾಬ್ದಾರಿಯನ್ನು ವಹಿಸಿಕೊಂಡರು. ಆದರೆ ತಮ್ಮ 30 ನೇ ವಯಸ್ಸಿನಲ್ಲಿ ಸರ್ವ ರಾಜಭೋಗವನ್ನು ತ್ಯಜಿಸಿ ಆತ್ಮಕಲ್ಯಾಣದ ಹಾದಿ ತುಳಿದರು. ಈ ಮೂಲಕ ಮಹಾವೀರರು ಭೋಗ ಜೀವನಕ್ಕಿಂತ ತ್ಯಾಗ ಜೀವನ ಶ್ರೇಷ್ಠ ಎಂಬುದನ್ನು ಸಾರಿ ಹೇಳಿದರು. ವಿಶ್ವದ ಸತ್ಯವನ್ನು ಅರಿತುಕೊಳ್ಳಲು ತನ್ನ ಮನೆಯನ್ನು ತೊರೆದರು, ತಪಸ್ಸಿ ಜೀವನವನ್ನು ನಡೆಸಿದರು, ವಿವಿಧ ಸಂಸ್ಕೃತಿಯ ಜನರೊಂದಿಗೆ ಬೆರೆತರು. ಆಗ ಅವರಿಗೆ ಜ್ಞಾನೋದಯವಾಗಿ ಪ್ರಪಂಚದ ನೋವು ಏನೆಂದು ಸ್ಪಷ್ಟವಾಗಿ ತಿಳಿಯಿತು. ತಮ್ಮ ಪ್ರತಿಯೊಂದು ಪ್ರಯತ್ನವನ್ನು ಉಪವಾಸ ಮತ್ತು ಧ್ಯಾನದ ಮೇಲೆ ಕೇಂದ್ರೀಕರಿಸಿ ಮಾನವರು ದುರಾಸೆಯಿಂದ ಹೊರಬರುವುದು ಹೇಗೆಂಬ ವಿಚಾರವನ್ನು ಅರಿತುಕೊಂಡು ಪ್ರತಿಯೊಬ್ಬರಿಗೂ ತಿಳಿಹೇಳಿದರು.

ಇವರು ಜೈನ ತಣ್ತೀಶಾಸ್ತ್ರವನ್ನು ಬೋಧಿಸುತ್ತಾ ದಕ್ಷಿಣ ಏಷ್ಯಾದ ಹೆಚ್ಚಿನ ಕಡೆ ತಮ್ಮ ಪಯಣ ಬೆಳೆಸಿದರು. ಈ ದಿನದಂದು ಮುನಿ ಮಹಾರಾಜರುಗಳು, ಜೈನ ಧಾರ್ಮಿಕ ಕೇಂದ್ರದ ಪೀಠಾಧಿಪತಿಗಳು, ಬೇರೆಬೇರೆ ಬಸದಿಗಳಲ್ಲಿ ಪುರೋಹಿತ ಬಳಗ ಹಾಗೂ ಶ್ರಾವಕ – ಶ್ರಾವಕಿಯರು ಒಂದೆಡೆ ಸೇರಿ ಮಹಾವೀರ ಸ್ವಾಮಿಯ ಸದ್ಗುಣದ ಮಾರ್ಗವನ್ನು ಆಚರಿಸುವ ವಿಚಾರವಾಗಿ ಉಪನ್ಯಾಸಗಳನ್ನು, ವಿಶೇಷ ಪೂಜೆ, ಆರಾಧನೆಗಳನ್ನು ನಡೆಸುತ್ತಾರೆ.

ಇದೀಗ ಈ ದಿನವನ್ನು ಕರ್ನಾಟಕ ಸರಕಾರವು ಕೂಡ ಪ್ರತೀ ತಾಲೂಕು ಕೇಂದ್ರಗಳಲ್ಲಿ ಆಚರಿಸಲು ಆದೇಶ ಹೊರಡಿಸಿದೆ.
ಒಟ್ಟಿನಲ್ಲಿ ಪ್ರತಿಯೊಬ್ಬರೂ ಕೂಡ ಸಹೋದರ ಭಾವನೆಯಿಂದ, ದೇಶಪ್ರೇಮದಿಂದ, ವಿಶ್ವಶಾಂತಿಯ ಚಿಂತನೆಯೊಂದಿಗೆ ಬದುಕನ್ನ ಸಾಗಿಸುವುದರ ಜತೆಜತೆಗೆ ಇನ್ನೊಬ್ಬರಿಗೆ ಮಾದರಿಯಾಗುವ ರೀತಿ ಪ್ರತಿಯೊಬ್ಬರು ತಮ್ಮ ಬದುಕನ್ನು ಸಾಗಿಸಬೇಕಿದೆ. “ಬದುಕು -ಬದುಕಲು ಬಿಡು’ ಇದು ಭಗವಾನ್‌ ಮಹಾವೀರ ಸ್ವಾಮಿಯ ಸಂದೇಶವಾಗಿದ್ದು ಅದರಂತೆ ನಾವು ಬದುಕೋಣ.

ಲೇಖನ: ಧರಣೇಂದ್ರ ಕೆ ಜೈನ್‌, ಕುವೆಟ್ಟು- ಬೆಳ್ತಂಗಡಿ
ಶಿಕ್ಷಕರು, ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪುಂಜಾಲಕಟ್ಟೆ (ಪ್ರೌಢಶಾಲಾ ವಿಭಾಗ)

Advertisement

Udayavani is now on Telegram. Click here to join our channel and stay updated with the latest news.

Next