Advertisement

ಕೊಕ್ಕರೆ ರೋಗ ಹಾವಳಿ: ಅಪಾಯದಲ್ಲಿ ನಾಟಿ ಕೋಳಿ

10:20 AM Jul 22, 2018 | |

ಆಲಂಕಾರು: ಕರಾವಳಿಯ ಅತ್ಯಂತ ಜನಪ್ರಿಯ ಆಹಾರವಾದ ನಾಟಿ ಕೋಳಿಗಳಿಗೆ ಗ್ರಾಣಿಕೆಟ್‌ ಎನ್ನುವ ವೈರಸ್‌ ನಿಂದ ಕೊಕ್ಕರೆ ರೋಗ ದಾಳಿಯಾಗಿದ್ದು, ನಾಟಿ ಕೋಳಿ ವಂಶವೇ ವಿನಾಶದ ಅಂಚಿನಲ್ಲಿದೆ. ಇದರಿಂದ ಮನುಷ್ಯರಿಗೆ ಯಾವುದೇ ತೊಂದರೆ ಇಲ್ಲದಿದ್ದರೂ ಕೋಳಿ ಸಾಕಾಣೆದಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ರೋಗ ಮಳೆಗಾಲದ ಅಂತ್ಯಕ್ಕೆ ಹಬ್ಬುತ್ತಿತ್ತು. ಆದರೆ ಈ ವರ್ಷ ಮಳೆಗಾಲದ ಆರಂಭದಲ್ಲೇ ಕಾಣಿಸಿಕೊಂಡಿದೆ.

Advertisement

ರೋಗ ಹೇಗೆ ಹರಡುತ್ತದೆ?
ಕೋಳಿಗಳಿಗೆ ಕೊಕ್ಕರೆ ರೋಗವು ಕೊಕ್ಕರೆಗಳಿಂದಲೇ ಬರುತ್ತದೆ. ಕೊಕ್ಕರೆಗಳು ಬಯಲು ಪ್ರದೇಶಗಳಿಗೆ ನವೆಂಬರ್‌ ಮತ್ತು ಮೇ ತಿಂಗಳಲ್ಲಿ ಹೆಚ್ಚಾಗಿ ವಲಸೆ ಬರುವ ಕಾರಣ ರೋಗವು ಇದೇ ಅವಧಿಯಲ್ಲಿ ಹೆಚ್ಚಾಗಿರುತ್ತದೆ. ರೋಗಕ್ಕೆ ತುತ್ತಾದ ಕೋಳಿಯ ಒಂದು ಚಿಕ್ಕ ಗರಿಯಿಂದಲೂ ವೈರಸ್‌ ಹರಡುವುದರಿಂದ ಸತ್ತ ಕೋಳಿಯನ್ನು ಸಮರ್ಪಕವಾಗಿ ಸಂಸ್ಕಾರ ಮಾಡಬೇಕಾಗುತ್ತದೆ. ಇಲ್ಲವಾದರೆ ಗಾಳಿ‌, ನೀರಿನಿಂದ ರೋಗ ಹರಡುವುದು. ಈ ರೋಗದ ವೈರಸ್‌ ಸಾಮಾನ್ಯ ಬಿಸಿಗೆ ಸಾಯುವುದಿಲ್ಲ. ಆಳವಾದ ಗುಂಡಿಯಲ್ಲಿ ಸತ್ತ ಕೋಳಿಗಳನ್ನು ಹಾಕುವುದರ ಮೂಲಕ ರೋಗ ತಡೆಗಟ್ಟಬಹುದು.

ಸದ್ಯ ಪುತ್ತೂರು ತಾಲೂಕಿನ ಹಲವು ಕಡೆಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಕಡಬ -ಆಲಂಕಾರು ಭಾಗದಲ್ಲಿ ಹಾವಳಿ
ತೀವ್ರವಾಗಿದೆ. ಫಾರಂನ ಕೋಳಿಗಳಿಗೆ ನಿಯಮಿತವಾಗಿ ಔಷಧ ಕೊಡುವುದರಿಂದ ಈ ಬಾಧೆಯಿಂದ ಅವು ಪಾರಾಗಿವೆ.

ರೋಗ ಲಕ್ಷಣಗಳು
ಕೊಕ್ಕರೆ ರೋಗಕ್ಕೆ ತುತ್ತಾದ ಕೋಳಿ ಕೊಕ್ಕರೆಯ ರೀತಿ ಕೂಗಾಡುತ್ತದೆ. ತತ್‌ ಕ್ಷಣದಿಂದ ಆಹಾರ ಸೇವನೆಯನ್ನು ನಿಲ್ಲಿಸಿ ಹೆಚ್ಚಾಗಿ ನೀರನ್ನೇ ಸೇವಿಸುತ್ತದೆ. ತೂಕ ಇಳಿದು ನಿತ್ರಾಣಕ್ಕೊಳಗಾಗುತ್ತದೆ. ಬಿಳಿ ಬಣ್ಣದ ಮಲ ವಿಸರ್ಜಿಸುತ್ತದೆ. ನಿತ್ರಾಣಕ್ಕೊಳಗಾದ ಕೋಳಿ ನಡೆಯಲಾಗದೆ ರೆಕ್ಕೆ ಮತ್ತು ಕಾಲುಗಳನ್ನು ಅಗಲಿಸಿ ಕೊಕ್ಕರೆಯಂತೆ ಮುದುಡಿಕೊಳ್ಳುತ್ತದೆ. ಕೆಲವೊಮ್ಮೆ ಕೋಳಿಗಳ ತಲೆಯಲ್ಲಿ ಕಜ್ಜಿಯಾಗಿ ಬಾಯಲ್ಲಿ ರಕ್ತ ಬರುವ ಸಾಧ್ಯತೆಯೂ ಇರುತ್ತದೆ. ರೋಗಕ್ಕೆ ತುತ್ತಾದ ಕೋಳಿ ಒಂದೇ ವಾರದಲ್ಲಿ ಸಾಯುತ್ತದೆ.

ನಿಯಂತ್ರಣ ಹೇಗೆ ಸಾಧ್ಯ?
ಈ ರೋಗ ಒಂದು ಪ್ರದೇಶದಲ್ಲಿ ಕಾಣಿಸಿಕೊಂಡರೆ ಆ ವ್ಯಾಪ್ತಿಯ ಎಲ್ಲ ಕೋಳಿಗಳನ್ನು ನಾಶ ಮಾಡಿಬಿಡುತ್ತದೆ. ರೋಗ ಬಾರದಂತೆ ಮುಂಜಾಗ್ರತೆ ವಹಿಸಿಕೊಳ್ಳುವುದು ಉತ್ತಮ. ಪ್ರತೀ ಆರು ತಿಂಗಳಿಗೊಮ್ಮೆ ಕೋಳಿಗಳಿಗೆ ರೋಗ ನಿರೋಧಕ ಚುಚ್ಚು ಮದ್ದನ್ನು ನೀಡುವುದರಿಂದ ರೋಗ ಬಾರದಂತೆ ತಡೆಗಟ್ಟಬಹುದು. ಒಂದು ಕೋಳಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡರೆ ತತ್‌ಕ್ಷಣ ಆ ಕೋಳಿಯನ್ನು ಪ್ರತ್ಯೇಕಿಸಿ ಉಳಿದ ಕೋಳಿಗಳಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಬೇಕು. ಒಮ್ಮೆ ರೋಗಕ್ಕೆ ತುತ್ತಾದ ಕೋಳಿಗೆ ಯಾವುದೇ ಔಷಧ ಫಲಿಸುವುದಿಲ್ಲ. ಉತ್ತಮ ಜಾತಿಯ, ಸೇಲಂ, ಈರೋಡ್‌ ಅಥವಾ ಅಂಕದ ಕೋಳಿಗಳ ಸಾಕಾಣೆದಾರರು ಆರು ತಿಂಗಳಿಗೊಮ್ಮೆಯಾದರೂ ರೋಗ ನಿರೋಧಕ ಚುಚ್ಚುಮದ್ದು ನೀಡುತ್ತಾ ಬಂದಲ್ಲಿ ಯಾವುದೇ ರೋಗಗಳು ಬಾರದಂತೆ ತಡೆಗಟ್ಟಬಹುದು.

Advertisement

ಮುಂಜಾಗ್ರತೆಯೇ ಔಷಧ
ಮಳೆಗಾಲದಲ್ಲಿ ಕೊಕ್ಕರೆ ರೋಗ ಕಾಣಿಸಿಕೊಳ್ಳುತ್ತದೆ. ರೋಗ ಕಾಣಿಸಿಕೊಂಡ ಬಳಿಕ ಯಾವ ಔಷಧವೂ ಫಲಪ್ರದವಲ್ಲ.
ಕೋಳಿಗಳಿಗೆ ಆರು ತಿಂಗಳಿಗೊಮ್ಮೆ ರೋಗ ನಿರೋಧಕ ಚುಚ್ಚು ಮದ್ದು ನೀಡುವುದರಿಂದ ಶಾಶ್ವತವಾಗಿ ರೋಗ ಬಾರದಂತೆ ಕ್ರಮ ಕೈಗೊಳ್ಳಬಹುದು. ಪ್ರತೀ ಶನಿವಾರ ಕಡಬ ಪಶು ಆಸ್ಪತ್ರೆಯಲ್ಲಿ ಉಚಿತ ಚುಚ್ಚು ಮದ್ದು ನೀಡಲಾಗುವುದು. ರೋಗ ಬಾಧಿತ ಮನೆಗಳಿಗೆ ತೆರಳಿ ಉಚಿತ ವೈದ್ಯಕೀಯ ಸೇವೆ ನೀಡಲಾಗುವುದು.
– ಡಾ| ಧರ್ಮಪಾಲ್‌,
ಕಡಬ ಪಶು ವೈದ್ಯಾಧಿಕಾರಿ

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next