ಬೆಂಗಳೂರು: ಗ್ರಾಮಸಭೆಗಳ ಮೂಲಕ ಆಶ್ರಯ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ನಿಯಮಗಳಿಗೆ ತಿದ್ದುಪಡಿ ತಂದು, ಶಾಸಕರ ಮೇಲ್ವಿ ಚಾರಣೆಯಲ್ಲಿ ಫಲಾನುಭವಿಗಳ ಆಯ್ಕೆಗೆ ಮನವಿ ಮಾಡಲು ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ರಾಜ್ಯ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಇಲಾಖೆಯಲ್ಲಿ ತಾವು ಕೈಗೊಂಡ ಕ್ರಮಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ವಸತಿ ಇಲಾಖೆಯಲ್ಲಿ ನ್ಯೂನತೆಗಳಿರುವ ಬಗ್ಗೆ ಚಿತ್ರದುರ್ಗ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ತನಿಖೆ ಮಾಡಿದಾಗ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಕ್ರಮ ಪತ್ತೆಗೆ ಜಿಲ್ಲಾಧಿಕಾರಿ, ಸಿಇಒ ಹಾಗೂ ಪಿಡಿಒಗಳ ಮೂಲಕ ತನಿಖೆ ಮಾಡಿ ವರದಿ ಪಡೆಯಲಾಗುತ್ತಿದೆ ಎಂದು ಹೇಳಿದರು.
6 ಲಕ್ಷ ಮನೆ ನಾಪತ್ತೆ: ಒಬ್ಬರೇ ಫಲಾನುಭವಿಗಳ ಹೆಸರಿನಲ್ಲಿ 4-5 ಮನೆಗಳನ್ನು ಮಂಜೂರು ಮಾಡಲಾಗಿದೆ. ಕಳೆದ ಆರು ವರ್ಷದಲ್ಲಿ 28 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದ್ದು, 14 ಲಕ್ಷ ಮನೆ ಕಟ್ಟಲಾಗಿದೆ. ಉಳಿದ 14 ಲಕ್ಷ ಮನೆಗಳಲ್ಲಿ 2 ಲಕ್ಷ ಕೊಳಚೆ ಅಭಿವೃದ್ಧಿ ಮಂಡಳಿಗೆ ನೀಡಲಾಗಿದೆ. ಉಳಿದ 6 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಚಾಲನೆಯಲ್ಲಿದ್ದು, ಇದಕ್ಕಾಗಿ 211 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಇನ್ನುಳಿದ 6 ಲಕ್ಷ ಮನೆಗಳನ್ನು ಯಾರಿಗೆ ಹಂಚಿಕೆ ಮಾಡ ಲಾಗಿದೆ ಎನ್ನುವುದನ್ನು ಪತ್ತೆ ಹಚ್ಚಬೇಕಿದೆ ಎಂದರು.
ಮನೆಗಳ ಹಂಚಿಕೆ ವೇಳೆ ಗ್ರಾಪಂ ಸದಸ್ಯರು ಹಾಗೂ ಪಿಡಿಒಗಳ ಮಟ್ಟದಲ್ಲಿ ಅವ್ಯವಹಾರ ನಡೆಯುತ್ತದೆ ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸಭೆಯಲ್ಲಿ ಆಯ್ಕೆಯಾದ ಮನೆಗಳ ಬಗ್ಗೆ ಇಒ ಹಾಗೂ ಡಿಸಿ, ಸಿಇಒ ಹಾಗೂ ಶಾಸಕರು ಪರಿಶೀಲನೆ ನಡೆಸಲು ಅವಕಾಶ ಕಲ್ಪಿಸಲಾಗುತ್ತಿದೆ. “ಬೇಲೂರು ಘೋಷಣೆ’ ಪ್ರಕಾರ ಪಂಚಾಯಿತಿ ಹಕ್ಕು ಕಸಿಯುವ ಪ್ರಯತ್ನ ಮಾಡುತ್ತಿಲ್ಲ. ಆದರೆ, ಸುಧಾರಣೆ ತರಲು ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದರು.
ವಸತಿ ಯೋಜನೆಯಲ್ಲಿ ಬಸವ, ಅಂಬೇಡ್ಕರ್, ಪ್ರಧಾನ ಮಂತ್ರಿ ಆವಾಸ್, ದೇವರಾಜ ಅರಸು ಹಾಗೂ ವಾಜಪೇಯಿ ಹೆಸರಿನಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇದು ಫಲಾನುಭವಿಗಳಲ್ಲಿ ಗೊಂದಲ ಉಂಟು ಮಾಡುತ್ತಿದೆ. ಅಲ್ಲದೆ, ಒಬ್ಬರೇ ಫಲಾನುಭವಿಗಳು ಬೇರೆ, ಬೇರೆ ಹೆಸರಿನಲ್ಲಿ ಮನೆ ಪಡೆಯುವುದನ್ನು ತಪ್ಪಿಸಲು ಅಂಬೇಡ್ಕರ್ ವಸತಿ ಯೋಜನೆ ಹೊರತುಪಡಿಸಿ, ಉಳಿದ ಯೋಜನೆಗಳಡಿ ಮನೆಗಳನ್ನು ಒಂದೇ ಹೆಸರಿನಲ್ಲಿ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಹಿಂದೆ ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿತ್ತು. ಈಗ ಮತ್ತೆ ಗುತ್ತಿಗೆ ಆಧಾರದ ಮೇಲೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಕೊಳಚೆ ಮುಕ್ತ ರಾಜ್ಯ ಮಾಡಲು ತೀರ್ಮಾನ: ರಾಜ್ಯದಲ್ಲಿ ಸುಮಾರು 2,675 ಸ್ಲಂಗಳಿವೆ. ಸುಮಾರು 40 ಲಕ್ಷ ಜನರು ಕೊಳಚೆ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಮುಂದಿನ 3 ವರ್ಷದಲ್ಲಿ ಕೊಳಚೆ ಮುಕ್ತ ರಾಜ್ಯ ಮಾಡಲು ಶ್ರಮಿಸಲಾಗುವುದು. ಗೃಹ ಮಂಡಳಿ ಬಳಿ 3 ಸಾವಿರ ಕೋಟಿ ರೂ.ಮೌಲ್ಯದ ಆಸ್ತಿ ಇದೆ. ಹೊಸಕೋಟೆ, ತಲಘಟ್ಟಪುರ, ಮೈಸೂರು, ಹುಬ್ಬಳ್ಳಿ ಅಮರಗೋಳ, ಬೆಳಗಾವಿ ಕಣಬರಗಿ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಸಿಂಗಲ್ ಹಾಗೂ ಡಬಲ್ ಬೆಡ್ ರೂಮ್‌ಗಳ ಸುಮಾರು 3.5 ರಿಂದ 4 ಸಾವಿರ ಮನೆ ನಿರ್ಮಾಣ ಮಾಡಿ, ರಿಯಾಯ್ತಿ ದರದಲ್ಲಿ ಮನೆಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದರು.