Advertisement
ನಿಸ್ವಾರ್ಥದ ಪರಿಮಾಣ: ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಲ್ಲಿ ಆರೆಸ್ಸೆಸ್, ಜನಸಂಘ (ಈಗಿನ ಬಿಜೆಪಿ), ಸಿಪಿಎಂ, ಸಮಾಜವಾದಿ, ಸಮತಾ ಪಾರ್ಟಿ ಹೀಗೆ ಅನೇಕ ಸಂಘಟನೆಗಳಿವೆ. ದಾಖಲೆಗಳು ಹೇಳುವ ಪ್ರಕಾರ ಆರೆಸ್ಸೆಸ್- ಜನಸಂಘದವರ ಪ್ರಮಾಣ ಹೋರಾಟಗಾರರಲ್ಲಿ ಹೆಚ್ಚು ಇದೆ. ಯಾವಾಗ ಬಿಡುಗಡೆಯಾಗಬಹುದು ಎಂಬ ಮುನ್ಸೂಚನೆ ಇರದೆ ಮನೆಮಠ ಬಿಟ್ಟು ಜೈಲುಬಂಧಿಗಳಾದವರು ಇವರು. ಇವರು ಉಸಿರು ಗಟ್ಟಿ ಹೋರಾಟ ಮಾಡಿದ್ದರಿಂದಲೇ ಪ್ರಜಾತಂತ್ರ ಮತ್ತೆ ಸ್ಥಾಪನೆಯಾಗಲು ಸಾಧ್ಯವಾಯಿತು. ಈಗಿನ ಅಧಿಕಾರಸ್ಥರ ಜಬರ್ದಸ್ತ್ಗಿರಿಗೆ ಆಗ ನಡೆಸಿದ ಹೋರಾಟವೇ ಪಂಚಾಂಗ. ಮುಖ್ಯವಾಗಿ ಬಿಜೆಪಿ ಆಡಳಿತಾರೂಢರು ಇಂತಹ ಹೋರಾಟಗಾರರಿಗೆ ಸದಾ ಕಾಲ ಕೃತಜ್ಞರಾಗಬೇಕಿತ್ತು. 47 ವರ್ಷಗಳ ಬಳಿಕ ಕೆಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಮಾಸಾಶನ ಕೊಡುವ ವ್ಯವಸ್ಥೆ ಜಾರಿಯಲ್ಲಿದ್ದರೆ ಕರ್ನಾಟಕದಲ್ಲಿ ಮಾತ್ರ ಇನ್ನೂ ಜಾರಿಯಾಗಿಲ್ಲ. ತುರ್ತುಪರಿಸ್ಥಿತಿ ಹೋರಾಟಗಾರರಿಗೆ ಮೊದಲು ಮಾಸಾಶನ ಕೊಡಲು ಆರಂಭಿಸಿದ್ದೇ ಬಿಜೆಪಿಯ ಕಡುವಿರೋಧಿಯಾಗಿದ್ದ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಸರಕಾರ, 2002ರಲ್ಲಿ.
Related Articles
Advertisement
ಕೇರಳದ ಮಾದರಿ: ಕೇರಳದಲ್ಲಿ ಎಲ್‌ಡಿಎಫ್- ಯುಡಿಎಫ್ ಭರಾಟೆಯಲ್ಲಿ ತುರ್ತು ಪರಿಸ್ಥಿತಿ ಹೋರಾಟಗಾರರನ್ನು ಕೇಳುವವರಿಲ್ಲ. ಅಲ್ಲಿನ ಆರೆಸ್ಸೆಸ್ ಪರಿವಾರ ಸಂಘಟನೆಯವರು ತಮ್ಮದೇ ಜಾಲದಿಂದ ಸಂಗ್ರಹಿಸಿ ತಿಂಗಳಿಗೆ ನಿರ್ದಿಷ್ಟ ಮೊತ್ತವನ್ನು ಕೊಡುತ್ತಿರುವುದು ಸರಕಾರ ಮತ್ತು ಸಮಾಜಸೇವಕರಿಗೆ ಒಂದು ಮಾದರಿ.
ನಿನ್ನೆ ಮಾಡಿದುಪಕಾರ?: ಸಮಾಜದ ಒಂದು ಲಕ್ಷಣವೆಂದರೆ ವರ್ತಮಾನ ಕಾಲದಲ್ಲಿ ಪ್ರಯೋಜನವಿಲ್ಲ ಎಂದು ಕಂಡುಬಂದರೆ ಹಿಂದೆ ಆ ವ್ಯಕ್ತಿ ಮಾಡಿದ ಯಾವ ಉಪಕಾರವೂ ಸ್ಮರಣೆಗೆ ಬರುವುದಿಲ್ಲ. ಈ ಹೋರಾಟಗಾರರ ಕಥೆಯೂ ಹೀಗೆಯೇ ಆಗಿದೆ. ಇವರಿಗೆ ಲಾಬಿ ಮಾಡುವ ತಾಕತ್ತು ಇಲ್ಲದಿರಬಹುದು ಅಥವಾ ದೈಹಿಕ ಕಸುವು ಈಗ ಇಲ್ಲದಿರಬಹುದು. ಇಂತಹ ಹೋರಾಟಗಾರ ರಿಂದಲೇ ತಮಗೆ ಅಧಿಕಾರ ಸಿಕ್ಕಿದೆ ಎಂಬ ಎಚ್ಚರ ಮಾತ್ರ ಅಧಿಕಾರಾರೂಢರಿಗೆ ಇರಲೇಬೇಕಾದದ್ದು.
ಕುಂತಿ ನೀತಿ: ಕುಂತಿ ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಸಲ್ಲಿಸುವಾಗ “ನನಗೆ ಸದಾ ಕಾಲ ಕಷ್ಟವನ್ನೇ ಕೊಡು’ ಎನ್ನುವ ಒಂದು ಸನ್ನಿವೇಶ ಮಹಾಭಾರತದಲ್ಲಿ ಬರುತ್ತದೆ. ಇದೇಕೆಂದರೆ “ಕಷ್ಟದಲ್ಲಿದ್ದರೆ ಮಾತ್ರ ನಿನ್ನ ನೆನಪು ಬರುತ್ತದೆ. ನಿನ್ನ ವಿಸ್ಮರಣೆ ಸರ್ವಥಾ ಸಲ್ಲ. ನಿನ್ನ ಸ್ಮರಣೆಗಾಗಿ ಕಷ್ಟವೇ ಬೇಕು’. ಇನ್ನೂ ಒಂದು ಅಪಾಯವಿದೆ. ಕಷ್ಟದಲ್ಲಿದ್ದಾಗ ಇರುವ ಜಿದ್ದು, ಶಪಥ, ಬೆಳೆಯುವ ಧೈರ್ಯ, ಸ್ಥೈರ್ಯ ಸುಖದಲ್ಲಿರುವಾಗ ಇರುವುದಿಲ್ಲ. ಸುಖದಲ್ಲಿರುವಾಗ ಮೈಮರೆಯುವಿಕೆ ಒಳಗೆ ನುಸುಳಿಕೊಳ್ಳುತ್ತದೆ. ಪ್ರಪಂಚ ಕಂಡ ಎಲ್ಲ ಯುದ್ಧಗಳಲ್ಲಿ ಸೋಲು, ಗೆಲುವು ಕಾಣುವುದು ಇದೇ ನೀತಿಯಂತೆ. ಯಾವುದೇ ಪಕ್ಷಗಳು ಈಗಿನ ಪ್ರಜಾಪ್ರಭುತ್ವ ಎಂಬ ಯುದ್ಧದಲ್ಲಿ ಗೆಲ್ಲುವುದು, ಸೋಲುವುದು ಇದೇ ಕಾರಣಕ್ಕಾಗಿಯಲ್ಲವೆ?
ಪ್ರಕೃತಿಯ ಗುಟ್ಟು: ಹಲವು ಸ್ಥಾನಪಲ್ಲಟಗಳನ್ನು ಕಂಡ ಮೇಲೂ ಜನರು ಮತೆೆ¤ ಮತೆೆ¤ ಮೈಮರೆ ಯುವುದು ಮಾತ್ರ ಪ್ರಕೃತಿ ತನ್ನೊಳಗಿರಿಸಿಕೊಂಡ “ಗುಟ್ಟು’, ಇದನ್ನೇ ಪ್ರಾಚೀನರು “ಮಾಯೆ’ ಎಂದು ಕರೆದಿರಬಹುದೆ ಎಂದು ಜಿಜ್ಞಾಸೆ ಮೂಡುತ್ತದೆ.
ಋಣಸಂದಾಯ ಅಗತ್ಯ: ಭಾರತದ ಧರ್ಮಶಾಸ್ತ್ರಕಾರರು ದೇವ-ಋಷಿ-ಪಿತೃ ಎಂದು ಋಣತ್ರಯ ವಿಭಾಗವನ್ನು ಮಾಡಿದ್ದಾರೆ. ಋಣಗಳನ್ನು ತೀರಿಸಬೇಕೆಂಬ ನೀತಿಯೂ ಭಾರತೀಯ ಧರ್ಮದಲ್ಲಿ ಹಾಸುಹೊಕ್ಕಾಗಿದೆ. ಪಿತೃ ಋಣ ವಿಭಾಗದಲ್ಲಿ ತಂದೆ, ತಾಯಿ, ಪೂರ್ವಜರೆಲ್ಲ ಸೇರುತ್ತಾರೆ. ಜೀವ ಉದ್ಧಾರಕ ಶಕ್ತಿಗಳು ಋಷಿಗಳು. ದೇವರು ಅಂದರೆ ಈಗಿನ ಸಮಾಜವೇ ಎಂದೂ ಅರ್ಥ ಮಾಡಬಹುದು. ಏಕೆಂದರೆ ನಾವೇ ದೇವರೆನ್ನುವವರೂ ದೇವರ ಸೇವಕರೆನ್ನುವವರೂ ಇರುವುದರಿಂದ ದೇವರಿಗೆ ನಾವು (ಸಮಾಜ) ಬಹಳ ಹತ್ತಿರ. ತುರ್ತು ಪರಿಸ್ಥಿತಿ ಹೋರಾಟಗಾರರ ಋಣ ಅಧಿಕಾರಾರೂಢರ ಮೇಲೆ ಬಹಳಷ್ಟಿದೆ. ಇರುವ ಅವಕಾಶದಲ್ಲಿ ಋಣಸಂದಾಯ ಮಾಡುವುದು ಅಧಿಕಾರಸ್ಥರ ಪ್ರಥಮ ಕರ್ತವ್ಯ. “ಕೃತಜ್ಞತೆ ಮನುಷ್ಯನಿಗೆ ಇರಬೇಕಾದ ಮುಖ್ಯ ಗುಣ’ ಎನ್ನುವುದನ್ನು ಹೆಸರಾಂತ ವೈದ್ಯ ಡಾ| ಬಿ.ಎಂ.ಹೆಗ್ಡೆ ಬೆಟ್ಟು ಮಾಡುತ್ತಾರೆ. ಇದು ಸರಕಾರಕ್ಕೆ ಮಾತ್ರವಲ್ಲ, ಎಲ್ಲರ ಒಳಿತಿಗೂ ಮುಖ್ಯ.
-ಮಟಪಾಡಿ ಕುಮಾರಸ್ವಾಮಿ