ಬೆಂಗಳೂರು: ಪ್ರತ್ಯೇಕ ನಾಡಧ್ವಜ ರಚನೆ ಕುರಿತು ರಾಜ್ಯ ಸರ್ಕಾರ ಕೈಗೊಂಡ ಕ್ರಮ ಶ್ಲಾಘನೀಯವಾದದ್ದು ಎಂದು ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.
ಯು.ಡಿ.ನರಸಿಂಹಯ್ಯ ಅಭಿನಂದನಾ ಸಮಿತಿ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯು.ಡಿ.ನರಸಿಂಹಯ್ಯ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತ್ಯೇಕ ನಾಡಗೀತೆ ಇರುವಂತೆ ಪ್ರತ್ಯೇಕ ನಾಡಧ್ವಜ ಇದ್ದರೆ ತಪ್ಪೇನು? ಎಂದು ಪ್ರಶ್ನಿಸಿದರು.
ಕನ್ನಡ ಧ್ವಜಕ್ಕೆ ಮಾನ್ಯತೆ ಸಿಗುವುದರಿಂದ ರಾಷ್ಟ್ರಧ್ವಜಕ್ಕೆ ಯಾವುದೇ ಅಪಮಾನವಿಲ್ಲ. ಕನ್ನಡ ಧ್ವಜದೊಂದಿಗೆ ಕನ್ನಡಿಗರಿಗೆ ಅವಿನಾಭಾವ ಸಂಬಂಧವಿದೆ. ಕನ್ನಡಿಗರ ಒಟ್ಟು ಅಭಿಪ್ರಾಯಕ್ಕೆ ಸರ್ಕಾರಗಳು ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಕ್ಕೆ ನನ್ನ ಬೆಂಬಲವಿದೆ ಎಂದರು.
ರಾಜ್ಯದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಹೊರ ರಾಜ್ಯಗಳಿಂದ ಬಂದಂಥ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರು ಕನ್ನಡ ಕಲಿತು ವ್ಯವಹರಿಸಲೇಬೇಕು. ಈ ನಾಡಿನ ಪ್ರತಿಯೊಂದನ್ನು ಬಳಸಿಕೊಂಡು ಬದುಕು ನಡೆಸುವ ಅವರು ಕನ್ನಡವನ್ನು ನಿರ್ಲಕ್ಷಿéಸುವುದು ಸರಿಯಲ್ಲ ಎಂದು ಹೇಳಿದರು.
ಸರ್ಕಾರಿ ಹುದ್ದೆಯಲ್ಲಿದ್ದು, ಸಂಘಟನೆ, ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಬಹಳ ವಿರಳ. ಯು.ಡಿ.ನರಸಿಂಹಯ್ಯ ಅವರು, ತಮ್ಮ ಪ್ರಾಮಾಣಿಕ ಕಾರ್ಯಗಳಿಂದ ಜನಮನ್ನಣೆ ಗಳಿಸಿರುವುದು ಅಭಿನಂದನಾರ್ಹ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಎನ್.ಆರ್.ವಿಶುಕುಮಾರ್ ಮಾತನಾಡಿ, “ಸರ್ಕಾರಿ ನೌಕರರ ಕುರಿತು ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯಗಳಿಲ್ಲ. ತಮ್ಮ ಪ್ರಾಮಾಣಿಕ ನಿಲುವಿನಿಂದ ಮತ್ತು ಸಂಘಟನಾ ಚತುರತೆಯಿಂದ ಜನಪ್ರಿಯರಾಗಿರುವ ಯು.ಡಿ.ನರಸಿಂಹಯ್ಯ ಅವರು ಇತರರಿಗೆ ಮಾರ್ಗದರ್ಶನೀಯ,’ ಎಂದು ಹೇಳಿದರು.