ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರ ಕಲ್ಲುಬಂಡೆಯಂತಿದ್ದು, ಯಾವುದಕ್ಕೂ ಅಲುಗಾಡುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಪತ್ರಿಕರ್ತರ ಜತೆ ಮಾತನಾಡಿದ ಅವರು, ಬಿಜೆಪಿ ನಾಯಕರು ಅನಗತ್ಯವಾಗಿ ಸರ್ಕಾರ ಉರುಳಿಸುವ ಪ್ರಯತ್ನ ನಡೆಸಿದ್ದಾರೆ. ಇನ್ನಾರು ತಿಂಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಬುಡವೂ ಅಲುಗಾಡಲಿದ್ದು, ತಲೆಯೂ ಮುರಿದು ಬೀಳಲಿದೆ ಎಂದು ಹೇಳಿದರು.
ಶಾಸಕರು ತಮ್ಮ ಸ್ವಂತ ಕೆಲಸಗಳು ಹಾಗೂ ಕುಟುಂಬ ಸಮೇತ ಹೊರ ರಾಜ್ಯ ಹಾಗೂ ದೇಶಗಳಿಗೆ ಹೋಗುವುದರಲ್ಲಿ ತಪ್ಪೇನಿಲ್ಲ. ನಾನು ಪ್ರತಿ ದಿನವೂ ಶಾಸಕರ ಜೊತೆ ಸಂಪರ್ಕದಲ್ಲಿದ್ದೇನೆ. ಸಂಪುಟ ವಿಸ್ತರಣೆ ಮುಂದೆ ಹೋಗಿರುವುದಕ್ಕೆ ಕೆಲವರಿಗೆ ಬೇಸರ ಇದೆ. ಹಾಗಂತ ಅವರು ಪಕ್ಷ ಬಿಟ್ಟು ಬೇರೆ ಕಡೆಗೆ ಹೋಗುವ ನಿರ್ಧಾರ ಮಾಡಿಲ್ಲ. ಶಾಸಕರ ಸಣ್ಣ ಪುಟ್ಟ ಅಸಮಾಧಾನಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಲಾಗುವುದು ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಸಮಸ್ಯೆಯನ್ನು ಎರಡು ಗಂಟೆಯಲ್ಲಿಯೇ ಇತ್ಯರ್ಥ ಮಾಡಲಾಗಿದೆ. ಬಳ್ಳಾರಿ ವಿಚಾರದಲ್ಲಿಯೂ ಯಾವುದೇ ಸಮಸ್ಯೆ ಇಲ್ಲ. ಮಂತ್ರಿ ಸ್ಥಾನ ಕೇಳಲು ಎಲ್ಲ ಶಾಸಕರಿಗೂ ಹಕ್ಕಿದೆ. ಶಾಸಕರು ತಮ್ಮ ಹಕ್ಕು ಕೇಳುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಯವರು ಮಿಲಿಟರಿಯವರನ್ನು ಕರೆತಂದು ಕಾಂಗ್ರೆಸ್ ಶಾಸಕರನ್ನು ಎತ್ತಿಕೊಂಡು ಹೋಗಲು ಸಾಧ್ಯವಿಲ್ಲ. ಬಿಜೆಪಿ ನಾಯಕರು ಯಾವುದೇ ರೀತಿಯ ಆಮಿಷ ಒಡ್ಡಿದರೂ ಕಾಂಗ್ರೆಸ್‌ನ ಯಾವೊಬ್ಬ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಕಳೆದ ಒಂದು ತಿಂಗಳಿಂದ ಸರ್ಕಾರವನ್ನು ಅಭದ್ರಗೊಳಿಸುವ ಹುನ್ನಾರ ನಡೆಯುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಆಡಳಿತದಲ್ಲಿ ಏರುಪೇರಾದರೆ ಜನಪರ ಕೆಲಸಗಳು ನಡೆಯುವುದಿಲ್ಲ. ಹೀಗಾಗಿ ಸುಗಮ ಆಡಳಿತ ನಡೆಯದಂತೆ ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದು ದೂರಿದರು.
ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಶಾಸಕರ ಕ್ಷೇತ್ರಗಳಲ್ಲಿ ಕೆಲಸಗಳು ಆಗುತ್ತಿಲ್ಲ ಎನ್ನುವುದು ಸರಿಯಲ್ಲ. ಹಿಂದಿನ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿದರು.