Advertisement

ಬಹುಸಂಖ್ಯಾತರಿಗೆ ಸ್ಪಂದಿಸುತ್ತಿಲ್ಲ ಸರ್ಕಾರ

05:24 PM Aug 27, 2018 | |

ಚಿಕ್ಕಮಗಳೂರು: ಬಹುಸಂಖ್ಯಾತರಾಗಿದ್ದರೂ ಹಿಂದೂಗಳ ರಕ್ಷಣೆಗಾಗಿ ಸಂಘಟನೆ ಮಾಡಿಕೊಂಡು ಹೋರಾಡುವಂತಾಗಿರುವುದು ವಿಷಾದಕರ ಸಂಗತಿ ಎಂದು ಶ್ರೀ ರಾಮಸೇನೆ ರಾಜ್ಯಾ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.

Advertisement

ಭಾನುವಾರ ನಗರದಲ್ಲಿ ನಡೆದ ಜಿಲ್ಲಾ ಶ್ರೀ ರಾಮಸೇನೆಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಮುಸ್ಲಿಮರೆ ಬಹುಸಂಖ್ಯಾತರಾಗಿದ್ದಾರೆ. ಅದೇ ರೀತಿ ಕ್ರಿಶ್ಚಿಯನ್ನರೆ ಬಹುಸಂಖ್ಯಾತರಾಗಿರುವ ದೇಶಗಳಲ್ಲಿ ಎಲ್ಲಿಯೂ ಸಂಘಟನೆಗಳನ್ನು ಮಾಡಿಕೊಂಡಿಲ್ಲ. ಆಯಾ ದೇಶಗಳ ಸರ್ಕಾರಗಳು ಅಲ್ಲಿನ ಬಹುಸಂಖ್ಯಾತರಿಗೆ
ತೊಂದರೆಯಾದಲ್ಲಿ ಕೂಡಲೆ ಸ್ಪಂದಿಸುತ್ತವೆ. ಆದ ಕಾರಣ ಅಲ್ಲಿ ಸಂಘಟನೆಗಳಿಲ್ಲ ಎಂದರು.

ಆದರೆ ನಮ್ಮ ದೇಶದಲ್ಲಿ ಬಹುಸಂಖ್ಯಾತರಿಗೆ ತೊಂದರೆಯಾದರೂ ಈವರೆಗೆ ಆಡಳಿತ ನಡೆಸಿದ ಯಾವುದೇ ಸರ್ಕಾರಗಳು ಸ್ಪಂದಿಸಿಲ್ಲ. ಮತಗಳಿಕೆಗಾಗಿ ಅಲ್ಪಸಂಖ್ಯಾತರ ಪರ ನಿಲ್ಲುತ್ತವೆ. ಇದರಿಂದಾಗಿ ಹಿಂದೂಗಳ ರಕ್ಷಣೆಗಾಗಿ ಸಂಘಟನೆ ಸ್ಥಾಪಿಸುವುದು, ಅದನ್ನು ಬಲಪಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ದೇಶದ ಹೊರಗಿನ ಶತ್ರುಗಳಿಂದ ದೇಶವನ್ನು ರಕ್ಷಿಸಲು ನಮ್ಮ ಹೆಮ್ಮೆಯ ಯೋಧರು ಸಿದ್ದರಿದ್ದಾರೆ. ಆದರೆ ನಮ್ಮ ದೇಶದಲ್ಲಿ ಆಂತರಿಕ ವಿರೋಧಿಗಳು ಹೆಚ್ಚಾಗುತ್ತಿದ್ದಾರೆ. ಇವರಿಂದ ದೇಶವನ್ನು ರಕ್ಷಿಸಲು ನಾವೆಲ್ಲರೂ ಸಜ್ಜಾಗಬೇಕಾಗಿದೆ. ದೇಶದೊಳಗಿನ ಶತ್ರುಗಳಿಂದ ದೇಶಕ್ಕೆ ತೊಂದರೆಯಾಗುವುದನ್ನು ರಕ್ಷಿಸಲು ಪಣ ತೊಡಬೇಕಾಗಿದೆ ಎಂದರು.

ಭಗವಾನ್‌ ಅಂತಹವರು ಶ್ರೀರಾಮ, ಶ್ರೀಕೃಷ್ಣನ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಆ ರೀತಿ ಮಾತನಾಡುವುದಲ್ಲದೆ, ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುತ್ತಾರೆ. ಮತ್ತೂಬ್ಬರ ಭಾವನೆಗಳಿಗೆ ಧಕ್ಕೆಯುಂಟು ಮಾಡುವುದು ಯಾವ ರೀತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಪ್ರಶ್ನಿಸಿದರು. ಅಸ್ಸಾಂ ರಾಜ್ಯವೊಂದರಲ್ಲಿಯೇ 40 ಲಕ್ಷ ಅಕ್ರಮ ಬಾಂಗ್ಲಾ ನುಸುಳುಕೋರರು ಇದ್ದಾರೆ ಎಂದು ನ್ಯಾಯಾಲಯವೇ ರಚಿಸಿದ್ದ ಸಮಿತಿ ವರದಿ ನೀಡಿದೆ. 

Advertisement

ದೇಶದೊಳಗೆ ಕೋಟ್ಯಂತರ ಜನ ಅಕ್ರಮ ನುಸುಳುಕೋರರು ಇದ್ದಾರೆ ಎನ್ನಲಾಗುತ್ತಿದೆ. ಇವರಿಂದ ದೇಶಕ್ಕೆ ಅಪಾಯ ತಪ್ಪಿದ್ದಲ್ಲ. ಇಂತಹ ನುಸುಳುಕೋರರ ಪರವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡುತ್ತಾರೆ. ಇವರಿಗೆ ದೇಶಕ್ಕಿಂತ ತಮ್ಮ ಮತಬ್ಯಾಂಕ್‌ ಮುಖ್ಯ ಎಂದು ದೂರಿದರು.

ಶ್ರೀರಾಮಸೇನೆ ಸಂಘಟನೆಯನ್ನು ಹತ್ತಿಕ್ಕುವ ಯತ್ನವನ್ನು ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳೂ ಮಾಡಿದವು. ಕಾರ್ಯಕರ್ತರ ವಿರುದ್ಧ ಹಲವು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅಪಪ್ರಚಾರ ಮಾಡಿದರು. ಅವರು ಮಾಡಿದ ಅಪಪ್ರಚಾರವೇ ಶ್ರೀ ರಾಮಸೇನೆಗೆ ಪ್ರಚಾರವಾಗಿ ಬದಲಾಯಿತು. ಸಂಘಟನೆಗೆ ಲಕ್ಷಾಂತರ ಕಾರ್ಯಕರ್ತರು ಸೇರುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿದರು ಎಂದು ತಿಳಿಸಿದರು.

ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್‌ ಅದ್ಯಾರ್‌ ಮಾತನಾಡಿ, ಯಾವುದೇ ಸಂಘಟನೆ ಇರಲಿ. ಆ ಸಂಘಟನೆಯ ಬಗ್ಗೆ ಪ್ರೀತಿ, ಗೌರವ ಇರಬೇಕು. ನಾನು, ನನ್ನದು ಎಂಬ ಅಹಂ ಇರಬಾರದು. ಅಹಂಕಾರವನ್ನು ಬಿಟ್ಟು ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಎಂದು ಹೇಳಿದರು.

ಶ್ರೀರಾಮ ಸೇನೆ ಇಲ್ಲದಿದ್ದರೆ ನಾನೇನೂ ಅಲ್ಲ. ಶ್ರೀರಾಮಸೇನೆಯಿಂದ ಹೊರ ಬಂದ ಕೂಡಲೆ ನಾನು ನಗಣ್ಯನಾಗುತ್ತೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುಥಾಲಿಕ್‌ ಹೇಳುತ್ತಾರೆ. ಅವರ ಮಾತು ಸತ್ಯವಾದುದು. ಶ್ರೀರಾಮಸೇನೆಯ ಕಾರ್ಯಕರ್ತರು ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕು. ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದರು. ಶ್ರೀರಾಮಸೇನೆ ವಿಭಾಗ ಕಾರ್ಯದರ್ಶಿ ಅನಿಲ್‌ ನಾಯಕ್‌, ಜಿಲ್ಲಾಧ್ಯಕ್ಷ ರಂಜಿತ್‌ ಶೆಟ್ಟಿ,
ದುರ್ಗಾಸೇನೆ ಜಿಲ್ಲಾಧ್ಯಕ್ಷೆ ಶಾರದಮ್ಮ, ಪ್ರೀತೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next