Advertisement

ಸರ್ಕಾರ ಕೋಮು ವಿಚಾರಕ್ಕೆ ನೀಡಿದಷ್ಟು ಆಸಕ್ತಿ ಕೋವಿಡ್ ಪರಿಹಾರಕ್ಕೆ ನೀಡುತ್ತಿಲ್ಲ: ಕಾಂಗ್ರೆಸ್

03:36 PM Mar 25, 2022 | Team Udayavani |

ಸಾಗರ: ಕೋವಿಡ್-19ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಕೋವಿಡ್ 1, 2 ಮತ್ತು ಮೂರನೇ ಅಲೆ ಸಂದರ್ಭದಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ಕೇಂದ್ರ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಕೇಂದ್ರ ಸರ್ಕಾರ 50 ಸಾವಿರ ರೂ. ರಾಜ್ಯ ಸರ್ಕಾರ 1 ಲಕ್ಷ ರೂ. ಪರಿಹಾರ ಕೊಡಲು ಸಮ್ಮತಿ ಸೂಚಿಸಿತ್ತು. ಆದರೆ ಈತನಕ ಬಹುತೇಕ ಕುಟುಂಬಗಳಿಗೆ ಪರಿಹಾರ ಧನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿಲ್ಲ. ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ. ಸರ್ಕಾರ ಘೋಷಣೆ ಮಾಡಿದ ಪರಿಹಾರಧನ ಪೂರ್ಣ ಪ್ರಮಾಣದಲ್ಲಿ ಪಾವತಿ ಮಾಡಿಲ್ಲ. ಸರ್ಕಾರ ಕೂಡಲೇ ಪರಿಹಾರ ಧನ ನೀಡಿ ಸಾಂತ್ವಾನ ಹೇಳಬೇಕು ಎಂದು ಒತ್ತಾಯಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು ಮಾತನಾಡಿ, ತಾಲೂಕಿನಲ್ಲಿ ಕೋವಿಡ್‌ನಿಂದ 207 ಜನರು ಮೃತಪಟ್ಟಿದ್ದಾರೆ. ಇಲ್ಲಿವರೆಗೆ ಕೇವಲ 96 ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಉಳಿದ ಕುಟುಂಬಗಳು ಪರಿಹಾರಕ್ಕಾಗಿ ಕಚೇರಿ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಕೋಮು ಭಾವನೆ ಕೆರಳಿಸುವ ವಿಚಾರಕ್ಕೆ ನೀಡಿದಷ್ಟು ಆಸಕ್ತಿಯನ್ನು ಇಂತಹ ವಿಷಯಗಳತ್ತ ತೋರಿಸುತ್ತಿಲ್ಲ. ಕೋವಿಡ್‌ನಿಂದ ಮರಣ ಹೊಂದಿರುವವರ ವಿವರ ಆಸ್ಪತ್ರೆ ಮೂಲಕ ಸರ್ಕಾರದ ಬಳಿ ಇರುತ್ತದೆ. ಆದರೂ ಸಾಕಷ್ಟು ಅರ್ಜಿಗಳನ್ನು ವಿಲೇ ಮಾಡಿಲ್ಲ. ದಾಖಲೆಗಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬವನ್ನು ಅಲೆದಾಡಿಸುತ್ತಿರುವುದು ಖಂಡನೀಯ ಎಂದರು.

ಇದನ್ನೂ ಓದಿ:ನಾವು ಕುಂಕುಮ ವ್ಯಾಪಾರ ಮಾಡಿ ನೀಡುವ ಹಣದಿಂದ ಅವರು ಹಜ್ ಯಾತ್ರೆಗೆ ಹೋಗುವುದು ಬೇಡ

ಈಗಾಗಲೇ ಕೋವಿಡ್ ನಾಲ್ಕನೇ ಅಲೆ ವಿದೇಶಗಳಲ್ಲಿ ಪ್ರಾರಂಭವಾಗಿ, ಅನೇಕ ದೇಶಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ. ಆದರೆ ಕರ್ನಾಟಕದಲ್ಲಿ ಕೋವಿಡ್ ನಾಲ್ಕನೇ ಅಲೆ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ಗಮನ ಹರಿಸಿಲ್ಲ. ತಕ್ಷಣ ಎಸಿಯವರು ಕೋವಿಡ್ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕು. ಮುಂದಿನ 15 ದಿನಗಳಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಎಲ್ಲ ಕುಟುಂಬಗಳಿಗೆ ಪರಿಹಾರ ನೀಡದೆ ಹೋದಲ್ಲಿ ಕಾಂಗ್ರೇಸ್ ಪಕ್ಷದಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಹಾಬಲ ಕೌತಿ, ತಾರಾಮೂರ್ತಿ, ಕೆ.ಸಿದ್ದಪ್ಪ, ಗಣಪತಿ ಮಂಡಗಳಲೆ, ಕಬೀರ್ ಚಿಪ್ಳಿ, ಪಾರ್ವತಿ ಬೇಸೂರು, ವೆಂಕಟೇಶ್, ಗಣಾಧೀಶ್, ಜಯರಾಮ್, ಶ್ರೀನಾಥ್, ರಮೇಶ್ ಚಂದ್ರಗುತ್ತಿ, ಅನ್ವರ್ ಭಾಷಾ, ನಾರಾಯಣ ಅರಮನೆಕೇರಿ, ಕೃಷ್ಣಮೂರ್ತಿ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next