Advertisement

ಉಗ್ರ ಸಂಘಟನೆಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ ಸರಕಾರ

11:59 PM Sep 28, 2022 | Team Udayavani |

ದೇಶದ ಹಲವೆಡೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವ ಮೂಲಕ ದೇಶದ ಸಮಗ್ರತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಹಾನಿ ಉಂಟು ಮಾಡುತ್ತಿದ್ದ ಆರೋಪಕ್ಕೆ ಗುರಿಯಾಗಿದ್ದ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಇದರ ಜತೆಯಲ್ಲಿ ಇದರ ಅಂಗಗಳಂತೆ ಕಾರ್ಯನಿರ್ವಹಿಸುತ್ತಿದ್ದ ಇತರ 8 ಸಂಘಟನೆಗಳನ್ನೂ ಮುಂದಿನ ಐದು ವರ್ಷಗಳ ಕಾಲ ನಿಷೇಧಿಸಿ ಮಂಗಳವಾರ ತಡರಾತ್ರಿ ಕೇಂದ್ರ ಗೃಹ ಸಚಿವಾಲಯ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.

Advertisement

ದೇಶದ ಹಲವೆಡೆ ಅದರಲ್ಲೂ ಮುಖ್ಯವಾಗಿ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪಿಎಫ್ಐ ಸಂಘಟನೆ ಹೆಚ್ಚು ಸಕ್ರಿಯವಾಗಿತ್ತು. ಸಿಮಿಗೆ ನಿಷೇಧ ಹೇರಿದ ಬಳಿಕ 2006ರಲ್ಲಿ ಪಿಐಫ್ಐ ಹೆಸರಿನಲ್ಲಿ ಕೇರಳದಲ್ಲಿ ರಚನೆಯಾಗಿತ್ತು. ಪಿಎಫ್ಐ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಲವಾರು ಹಿಂದೂ ಮುಖಂಡರನ್ನು ಹತ್ಯೆಗೈದಿತ್ತು. ರಾಜ್ಯದಲ್ಲಿ ಈ ಹಿಂದೆ ನಡೆದಿದ್ದ ಹಿಂದೂ ಮುಖಂಡರಾದ ಶರತ್‌ ಮಡಿವಾಳ, ರುದ್ರೇಶ್‌, ಪ್ರವೀಣ್‌ ಪೂಜಾರಿ ಹತ್ಯೆ ಪ್ರಕರಣಗಳಲ್ಲೂ ಪಿಎಫ್ಐ ಮತ್ತದರ ಅಂಗ ಸಂಘಟನೆಗಳ ಕೈವಾಡವಿರುವ ಬಗೆಗೆ ಆರೋಪಗಳು ಕೇಳಿಬಂದಿದ್ದವು. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಬಿಜೆಪಿ ಯುವ ನಾಯಕ, ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರ ಹತ್ಯೆ ಪ್ರಕರಣದಲ್ಲಿ ಪಿಎಫ್ಐ ಕೈವಾಡ ಬೆಳ ಕಿಗೆ ಬಂದ ಬಳಿ ಕ ಪಿಎಫ್ಐ ನಿಷೇಧಕ್ಕೆ ಒಕ್ಕೊರಲ ಆಗ್ರಹ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪಿಎಫ್ಐ ಸಂಘಟನೆಯನ್ನು ನಿಷೇಧಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿತ್ತು. ಇದಲ್ಲದೆ ಉತ್ತರ ಪ್ರದೇಶ ಮತ್ತು ಗುಜರಾತ್‌ ಸರಕಾರ ಕೂಡ ಇಂಥದ್ದೇ ನಿರ್ಣಯವನ್ನು ಕೈಗೊಂಡು ಕೇಂದ್ರಕ್ಕೆ ರವಾನಿಸಿತ್ತು.

ಇತ್ತೀಚಿನ ವರ್ಷಗಳಲ್ಲಿ ಪಿಎಫ್ಐ ಮತ್ತದರ ಅಂಗ ಸಂಘಟನೆಗಳು ದೇಶಾದ್ಯಂತ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿ ರುವುದು ತನಿಖೆಯ ವೇಳೆ ಬಹಿರಂಗಗೊಂಡಿತ್ತು. ಎನ್‌ಐಎ ದೇಶದ ವಿವಿಧೆಡೆಗಳಲ್ಲಿ ಕಾರ್ಯಾಚರಣೆ ನಡೆಸಿ ಪಿಎಫ್ಐ ಮತ್ತದರ ಅಂಗಸಂಘಟನೆಗಳ ಕಚೇರಿಗಳು, ಪದಾಧಿಕಾರಿಗಳು ಮತ್ತು ಸದಸ್ಯರ ನಿವಾಸ, ಕಟ್ಟಡಗಳ ಮೇಲೆ ದಾಳಿ ನಡೆಸಿ ಮಹತ್ತರ ದಾಖಲೆ ಪತ್ರಗಳು, ಶಸ್ತ್ರಾಸ್ತ್ರ, ವಿದೇಶಿ ನಂಟು, ಹಣಕಾಸು ನೆರವು, ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಕಲೆ ಹಾಕಿತ್ತು.

ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ಪಿಎಫ್ಐ ಮತ್ತು ಇತರ 8 ಸಂಘಟನೆಗಳನ್ನು ನಿಷೇಧಿಸಿದೆ. ನ್ಯಾಯಾಲಯ ಪ್ರಕ್ರಿಯೆಯಲ್ಲಿ ಹಿನ್ನಡೆಯಾಗದಂತೆ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಕೇಂದ್ರೀಯ ತನಿಖಾ ಸಂಸ್ಥೆ ಈ ಸಂಘಟನೆಗಳ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆಹಾಕಿದೆ. ಅಷ್ಟು ಮಾತ್ರವಲ್ಲದೆ ಈ ಸಂಘಟನೆಗಳ ಕಾರ್ಯಕರ್ತರ ಮೇಲೆ ದೇಶಾದ್ಯಂತ ದಾಖಲಾಗಿರುವ ಎಲ್ಲ ಕ್ರಿಮಿನಲ್‌ ಪ್ರಕರಣಗಳ ದಾಖಲೆ ಸಂಗ್ರಹಿಸಿದೆ.

ಈ ಹಿಂದೆ ಸಿಮಿ ನಿಷೇಧಿಸಲ್ಪಟ್ಟಾಗ ಪಿಎಫ್ಐ ರೂಪದಲ್ಲಿ ಹೊಸ ಉಗ್ರಗಾಮಿ ಸಂಘಟನೆ ಚಿಗಿತುಕೊಂಡಂತೆ ಮತ್ತು ನಿಷೇಧಿತ ಸಂಘಟನೆಯ ಕಾರ್ಯಕರ್ತರು ಇನ್ಯಾವುದೋ ಸಂಘಟನೆಯಲ್ಲಿ ಗುರುತಿಸಿಕೊಳ್ಳುವ ಮೂಲಕ ತಮ್ಮ ದೇಶದ್ರೋಹಿ, ಕಾನೂನುಬಾಹಿರ ಮತ್ತು ಉಗ್ರ ಕೃತ್ಯಗಳನ್ನು ಮುಂದುವರಿಸಿದ್ದರು. ಈ ಬಾರಿ ಹಾಗಾಗದಂತೆ ಸರಕಾರ ಮತ್ತು ತನಿಖಾ ಸಂಸ್ಥೆಗಳು ಎಚ್ಚರ ವಹಿಸಬೇಕು. ದೇಶದಿಂದ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡಲು ಸರಕಾರದ ಈ ದಿಟ್ಟ ನಡೆ ನಾಂದಿ ಹಾಡಲಿ ಎಂಬುದು ಶಾಂತಿಪ್ರಿಯ ದೇಶವಾಸಿಗಳ ಆಶಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next