ಮೈಸೂರು: ಇಡೀ ರಾಜ್ಯ ಭೀಕರ ಬರಗಾಲದಿಂದ ತತ್ತರಿಸಿಹೋಗಿದ್ದು, ಈ ಹಿನ್ನೆಲೆಯಲ್ಲಿ ರೈತರ ಸಾಲಮನ್ನಾ ಮಾಡುವ ನಿರೀಕ್ಷೆ ಹೊಂದಲಾಗಿತ್ತಾದರೂ, ಇದು ಹುಸಿಯಾಗಿದೆ ಎಂದು ಶ್ರೀನಿವಾಸ ಪ್ರಸಾದ್ ಗುಡುಗಿದ್ದಾರೆ. ಉಪ ಚುನಾವಣೆಯಲ್ಲಿ ಗೆಲ್ಲಲು ಸರ್ಕಾರ ಮಾಡುತ್ತಿರುವ ಎಲ್ಲಾ ಕಸರತ್ತುಗಳನ್ನು ನಂಜನಗೂಡಿನ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಈಗಾಗಲೇ ವಿವಿಧ ನಿಗಮಗಳ ಮೂಲಕ ಸಾಲ ಮಂಜೂರು ಮಾಡಿ ಮತದಾರರಿಗೆ ಆಮಿಷವೊಡ್ಡಲಾಗಿದ್ದು, ಈ ಹಿಂದೆ ತಾವು ಮಂತ್ರಿಯಾಗಿದ್ದಾಗ ಮಂಜೂರಾಗಿದ್ದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಈಗ ತರಾತುರಿಯಲ್ಲಿ ಮುಂದಾಗಿದ್ದಾರೆ. ಇದೆಲ್ಲವೂ ಚುನಾವಣಾ ಗಿಮಿಕ್ ಎಂದು ಕಿಡಿಕಾರಿದ ಅವರು, ಉಪ ಚುನಾವಣೆಯಲ್ಲಿ ಗೆಲ್ಲಲು 15 ಸಚಿವರೇಕೆ ಇಡೀ ಸಚಿವ ಸಂಪುಟವನ್ನೇ ಕರೆ ತರಲಿ ಎಂದು ತಿರುಗೇಟು ನೀಡಿದರು.
ಬಜೆಟ್ ಜನಪರವಲ್ಲ: ಆಡಿದ್ದೇ ಆಡೋ ಕಿಸುಬಾಯಿ ದಾಸ ಎಂಬಂತೆ ಈ ಬಾರಿಯ ಬಜೆಟ್‌ನಲ್ಲಿ ಹಿಂದಿನ ಯೋಜನೆಗಳನ್ನು ಪ್ರಸ್ತಾಪಿಸಲಾಗಿದ್ದು, ಬಜೆಟ್‌ನಲ್ಲಿ ಗ್ರಾಮೀಣ ಪ್ರದೇಶವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇಡೀ ರಾಜ್ಯ ಭೀಕರ ಬರಗಾಲದಿಂದ ತತ್ತರಿಸಿಹೋಗಿದ್ದು, ಈ ಹಿನ್ನೆಲೆಯಲ್ಲಿ ರೈತರ ಸಾಲಮನ್ನಾ ಮಾಡುವ ನಿರೀಕ್ಷೆ ಹೊಂದಲಾಗಿತ್ತಾದರೂ, ಇದು ಹುಸಿಯಾಗಿದೆ.
ಇಂತಹ ಸ್ಥಿತಿಯಲ್ಲಿ ಬೆಂಗಳೂರು ನಗರಕ್ಕೆ 198 ನಮ್ಮ ಕ್ಯಾಂಟೀನ್ ತೆರೆಯುವ ಅಗತ್ಯವೇನಿತ್ತು? ಬೆಂಗಳೂರಿಗೇನು ಬರ ಬಂದಿದೆಯಾ?, ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು 2ಕೆಜಿ ಹೆಚ್ಚಿಸಿರುವುದು, ಕ್ಷೀರ ಬಾಗ್ಯ ಯೋಜನೆಯನ್ನು ಐದು ದಿನಗಳಿಗೆ ವಿಸ್ತರಿಸಿರುವುದು,
ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಚೂಡಿದಾರ್ ವಿತರಣೆ ಮಾಡುವುದು ಜನಪರ ಬಜೆಟ್ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಮೊದಲು ರೈತರ ಸಾಲಮನ್ನಾ ಮಾಡಬೇಕಿದ್ದು, ಆ ನಂತರ ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನಾಗೆ ಆಗ್ರಹಿಸಲಿ ಎಂದು ಹೇಳಿದರು.