Advertisement

ಸರ್ಕಾರಕ್ಕೆ ಕೇಳೀತೆ ಮೌನಿಗಳ ಕೂಗು?

12:37 AM Feb 25, 2020 | Lakshmi GovindaRaj |

ಬೆಂಗಳೂರು: ಕಿವಿಯೂ ಕೇಳದ.. ಮಾತನೂ ಆಡದ ನೂರಾರು ಮಂದಿ ಶ್ರವಣಮಾಂದ್ಯರು.. ಕೈ ಸನ್ನೆ ಮೂಲಕವೇ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಸ್ವಾತಂತ್ರ್ಯ ಉದ್ಯಾನವನದ ಮುಂಭಾಗದ ರಸ್ತೆಯಲ್ಲಿ ಸೋಮವಾರ ನಡೆದ ಈ ಮೌನ ಪ್ರತಿಭಟನೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

Advertisement

ರಸ್ತೆಯ ಒಂದು ಬದಿಯಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಸಾರ್ವಜನಿಕರು ಒಮ್ಮೆ ನಿಂತು “ಸರ್ಕಾರ ಇವರ ನೋವು ಕೇಳಬಹುದಲ್ಲವೇ’ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಇವುಗಳ ಪರಿವೆಯೇ ಇಲ್ಲದೆ ತಮಗೆ ಗೊತ್ತಿರುವ ಅಂಗಿಕ ಭಾಷೆಯ ಮೂಲಕವೇ ಸರ್ಕಾರಕ್ಕೆ ಮೊರೆಯಿಡುತ್ತಿದ್ದ ಚಿತ್ರಣ ಕಂಡು ಬಂದಿತು.

ವೇದಿಕೆಯ ಮೇಲಿದ್ದ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರು ತಮ್ಮ ಬೇಡಿಕೆಗಳನ್ನು ಸನ್ನೆಗಳ ಮೂಲಕವೇ ಹೇಳಿ ಈಡೇರಿಸುವಂತೆ ಒತ್ತಾಯಿಸಿದರು. ಪ್ರತಿಭಟನಾ ಸ್ಥಳದ ಸುತ್ತಮುತ್ತಲು ಬೇಡಿಕೆಗಳ ಪಟ್ಟಿಯಿರುವ ಬ್ಯಾನರ್‌ಗಳನ್ನು ಕಟ್ಟಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತಿದ್ದರು.

ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಆಗಮಿಸಿ ಪ್ರತಿಭಟಕಾರರಿಂದ ಮನವಿ ಪತ್ರ ಸ್ವೀಕರಿಸಿ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿ ತೆರಳಿದರು. ಸುಮಾರು ಮೂರು ಗಂಟೆಗೂ ಅಧಿಕ ಕಾಲ ಕೈ ಸನ್ನೆಗಳ ಮೂಲಕವೇ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಬಳಿಕ ಗೊಂದಲವಿಲ್ಲದೆ ಪ್ರತಿಭಟನೆ ಮುಗಿಸಿದರು. ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೂಮ್ಮೆ ಒಗ್ಗಟ್ಟಾಗಿ ಪ್ರತಿಭಟಿಸೋಣ ಎಂದು ಕೈ ಎತ್ತಿ ಒಗ್ಗಟ್ಟು ಪ್ರದರ್ಶಿಸಿದರು.

ಬೇಡಿಕೆಗಳು ಏನು?
-ಶೇ.70 ಕಿವುಡತನ ಇರುವವರಿಗೆ ಮಾತ್ರ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು

Advertisement

-ಕಿವುಡ-ಮೂಗರ ಶಾಲೆಗಳ ಶಿಕ್ಷಕರಿಗೆ ಸಂಕೇತ (ಸಂಜ್ಞೆ) ಶಿಕ್ಷಣ ತರಬೇತಿ ನೀಡಬೇಕು

-ದಿವ್ಯಾಂಗ ದಂಪತಿಯ ಪ್ರೋತ್ಸಾಹ ಧನವನ್ನು ಒಂದು ಲಕ್ಷ ರೂ.ಗೆ ಏರಿಸಬೇಕು

-ಶ್ರವಣ ಮಾಂದ್ಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ

-ಜಿಲ್ಲೆಗೊಂದು ಕಿವುಡುತನ ಅಳೆಯುವ ಬೇರಾ ಯಂತ್ರ ನೀಡಬೇಕು

-ಪಿಂಚಣಿ ಮೊತ್ತವನ್ನು 10 ಸಾವಿರ ರೂ.ಗೆ ಹೆಚ್ಚಿಸಬೇಕು

-ಅಂಗವಿಕಲರ ನಿರ್ದೇಶನಾಲಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬೇರ್ಪಡಿಸಬೇಕು

Advertisement

Udayavani is now on Telegram. Click here to join our channel and stay updated with the latest news.

Next