Advertisement

ರೈತರ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ದ

02:15 PM Dec 17, 2020 | Adarsha |

ಹಿರೇಕೆರೂರು: ಶಿಕಾರಿಪುರ ನೀರಾವರಿ ಯೋಜನೆ ವಿರೋಧಿಸಿ ಕೈಗೊಂಡಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬುಧವಾರ ರಾತ್ರಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ರೈತರ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

Advertisement

ಯೋಜನೆ ವಿರೋಧಿಸಿ ಪಟ್ಟಣದಲ್ಲಿ ಕಳೆದ 14 ದಿನಗಳಿಂದ ಹೋರಾಟ ನಡೆಸುತ್ತಿರುವ ಹಿರೇಮಠ ಅವರೊಂದಿಗೆ ಯೋಜನೆಯ ಅಗತ್ಯತೆ ಹಾಗೂ ರೈತರ ಸಮಸ್ಯೆಗಳ ಕುರಿತು ಸಚಿವ ಬೊಮ್ಮಾಯಿ ಚರ್ಚಿಸಿ ಬಳಿಕ ಮಾತನಾಡಿದರು.

ವಕೀಲರಾದ ಬಿ.ಡಿ. ಹಿರೇಮಠ ಅವರು ಪ್ರಾಮಾಣಿಕ ಹೋರಾಟಗಾರರಾಗಿದ್ದು, ಅವರು ಅನೇಕ ಹೋರಾಟಗಳಿಗೆ ಯಶಸ್ಸು ತಂದುಕೊಟ್ಟಿದ್ದಾರೆ. ಅವರ ಹೋರಾಟದಲ್ಲಿ ನಾನೂ ಭಾಗಿಯಾಗಿ ಸ್ಫೂರ್ತಿ ಪಡೆದಿದ್ದೇನೆ. ಶಿಕಾರಿಪುರ ನೀರಾವರಿ ಯೋಜನೆಯ ಸಮಸ್ಯೆಗಳನ್ನು ಬಗೆಹರಿಸಲು ಹೋರಾಟ ಆರಂಭಿಸಿದ್ದಾರೆ. ಹಿರೇಮಠ ಅವರ ಆರೋಗ್ಯ ಕ್ಷೀಣಿಸುತ್ತಿದ್ದು, ತಕ್ಷಣ ಉಪವಾಸ ಬಿಡಿ ರೈತರ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಮನವಿ ಮಾಡಿದರು.

ಶಿಕಾರಿಪುರ ನೀರಾವರಿ ಯೋಜನೆಗೆ ರೈತರ ಭೂಸ್ವಾಧೀನ ಕೈಬಿಡಬೇಕು ಹಾಗೂ ಯುಟಿಪಿ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ಈ ಎರಡು ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ನಾನು ಒಂದು ಹಂತದ ಮಾತುಕತೆ ಮಾಡಿದ್ದೇನೆ. ರೈತರಿಗೆ ಪೈಪ್‌ಲೈನ್‌ಗಾಗಿ 10 ಮೀಟರ್‌ ಅಗಲ ಭೂಸ್ವಾಧೀನ ಮಾಡಿಕೊಳ್ಳಾರೆ ಎಂಬ ಆತಂಕವಿತ್ತು. ಆ ರೀತಿ ಯಾವುದು ಇಲ್ಲ. ಇದೀಗ ಕೇವಲ 4 ಮೀ. ಗೆ ಸೀಮಿತವಾದ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಒಂದು ಆತಂಕ ದೂರವಾದಂತಾಗಿದೆ ಎಂದರು.

ಇದನ್ನೂ ಓದಿ:ಮಂಗಳೂರು: ಬೈಕ್ ನಲ್ಲಿ ಬಂದ ದುಷ್ಕರ್ಮಿಯಿಂದ ಹೆಡ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ !

Advertisement

ರೈತರು ಪರ್ಯಾಯ ವ್ಯವಸ್ಥೆ ಮೂಲಕ ಪೈಪ್‌ಲೈನ್‌ ಅಳವಡಿಸುವ ಸಾಧ್ಯತೆ ಪರಿಶೀಲಿಸಿ ಎನ್ನುತ್ತಿದ್ದಾರೆ. ಈ ಬಗ್ಗೆ ತಾಂತ್ರಿಕವಾಗಿ ನೋಡಬೇಕಾಗುತ್ತದೆ. ಅದನ್ನು ಇಂಜಿನೀಯರ್ ಜೊತೆ ಚರ್ಚಿಸಬೇಕಾಗುತ್ತದೆ. ಈ ಬಗ್ಗೆ ಎರಡು ಮೂರು ದಿನದಲ್ಲಿ ವರದಿ ನೀಡಲು ಸೂಚಿಸಿದ್ದೇನೆ. ಭೂಸ್ವಾಧೀನದ ಬಗ್ಗೆ ಕಾನೂನಾತ್ಮಕವಾಗಿ ಪರಿಶೀಲನೆಯಾಗಬೇಕಾಗುತ್ತೆ. ನಂತರ ಏನು ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ. ಇದಕ್ಕೆ ಹಿರೇಮಠ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದರು.

ಜಿಲ್ಲೆಯಲ್ಲಿ ಯುಟಿಪಿ ಯೋಜನೆ ಜಾರಿಗೊಳಿಸುವಂತೆ ಸುಮಾರು 20 ವರ್ಷಗಳ ಕಾಲ ಹೋರಾಟ ನಡೆದಿದೆ. ಹಲವಾರು ಹೋರಾಟಗಾರರು ಭಾಗವಹಿಸಿದ್ದಾರೆ. ಹಲವಾರು ಸರ್ಕಾರಗಳು ಕೆಲಸ ಮಾಡಿವೆ. ಇದು ಬಹಳ ದೊಡ್ಡ ಸವಾಲಾಗಿತ್ತು. ನಮ್ಮ ಸರ್ಕಾರ ಸಾವಿರ ಕೋಟಿ ರೂ. ಖರ್ಚು ಮಾಡಿ ಯೋಜನೆ ಮಾಡಿದೆ ಎಂದರು. ಸಂಸದ ಶಿವಕುಮಾರ ಉದಾಸಿ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಇದ್ದರು.

ಉಪವಾಸ ಸತ್ಯಾಗ್ರಹ ಕೈ ಬಿಟ್ಟಬಿ.ಡಿ. ಹಿರೇಮಠ

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ರಟ್ಟೀಹಳ್ಳಿಗೆ ಭೇಟಿ ನೀಡಿ 14 ದಿನದಿಂದ ಅಮರಣಾಂತ ಉಪವಾಸ ನಡೆಸುತ್ತಿದ್ದ ವಕೀಲ ಬಿ.ಡಿ. ಹಿರೇಮಠ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರಂಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ಚರ್ಚಿಸಿದ ಸಚಿವರು, ಪ್ರವಾಸಿ ಮಂದಿರಕ್ಕೆ ತೆರಳಿ ಸಿಎಂ ಯಡಿಯೂರಪ್ಪನವರೊಂದಿಗೆ ದೂರವಾಣಿ ಕರೆಮಾಡಿ ಚರ್ಚಿಸಿದರು.ಬಳಿಕ ಮತ್ತೆ  ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಹೋರಾಟಗಾರ ಬಿ.ಡಿ. ಹಿರೇಮಠ ಅವರೊಂದಿಗೆ ಪೋನ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರೊಂದಿಗೆ ಮತನಾಡಿದರು.
ಆಗ ಸಿಎಂ ಅವರು, ನಾನು ಗೃಹ ಸಚಿವರೊಂದಿಗೆಮಾತಾಡಿದ್ದೇನೆ. ಅವರು ಸಮಸ್ಯೆಗಳ  ಬಗ್ಗೆ ಹೇಳಿದ್ದಾರೆ. ನೀವು ಉಪವಾಸ ಕೈಬಿಡಿ. ನಿಮಗೆ ಅನುಕೂಲ ಆಗುವ ರೀತಿ ಯೋಜನೆ ರೂಪಿಸುತ್ತೇವೆ. ಇದರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ನಂತರ ಉಪವಾಸ ಕೈ ಬಿಡುವುದಾಗಿ ಘೋಷಣೆ ಮಾಡಿದ ಹಿರೇಮಠ ಅವರು, ಹೊರಾಟ ಮುಂದುವರೆಸುತ್ತೇನೆ ಆದರೆ ಉಪವಾಸ ಕೈ ಬಿಟ್ಟು ಚಿಕಿತ್ಸೆ ಪಡೆದುಕೊಳ್ಳುತ್ತೇನೆ ಎಂದರು. ಡಿ. 30ರೊಳಗಾಗಿ ಸ್ಪಷ್ಟ ಆದೇಶ ಸರ್ಕಾರ ನೀಡಬೇಕು. ಒಂದು ವೇಳೆ ನೀಡದಿದ್ದರೆ ನಾನು ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಸಚಿವ ಬೊಮ್ಮಾಯಿ ಮಾತನಾಡಿ, ಡಿ. 21ಕ್ಕೆ ಬೆಂಗಳೂರಿನಲ್ಲಿ ಸಭೆ ಮೊದಲ ಹಂತದಲ್ಲಿ ಅಧಿಕಾರಗಳೊಂದಿಗೆ ಚರ್ಚೆ ಸಮಸ್ಯೆ ಬಗೆಹರಿಸುತ್ತೇನೆ. ಆ ಸಭೆಗೆ ಹಿರೇಮಠರಿಗೂ ಆಹ್ವಾನ ನೀಡುತ್ತೇವೆ. ನಮ್ಮ ಮನವಿಗೆ ಸ್ಪಂದಿಸಿ ಉಪವಾಸ ಕೈಬಿಟ್ಟ ಹಿರೇಮಠ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next