ಮಲ್ಪೆ: ಸುವರ್ಣ ತ್ರಿಭುಜ ಬೋಟು ಅವಘಡಕ್ಕೀಡಾಗಿ ಅವಶೇಷ ಪತ್ತೆಯಾದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಮುಳುಗಿದೆ ಎನ್ನಲಾದ ಬೋಟನ್ನು ಮೇಲಕ್ಕೆತ್ತುವ ಕೆಲಸವಾಗಬೇಕು ಎಂದು ನಾಪತ್ತೆಯಾಗಿರುವ ಮೀನುಗಾರರ ಕುಟುಂಬದವರು ಆಗ್ರಹಿಸುತ್ತಿದ್ದಾರೆ.
ನಾಪತ್ತೆಯಾಗಿರುವ ಭಟ್ಕಳದ ರಮೇಶ್ ಮೊಗೇರ ಅವರ ತಮ್ಮ ನಾಗರಾಜ್ ಅವರು
“ಉದಯವಾಣಿ’ ಜತೆ ಮಾತನಾಡಿ, ಬೋಟಿನ ಅವಶೇಷ ಪತ್ತೆಯಾಗಿದೆ ಎನ್ನುತ್ತಾರೆ; ಹಾಗಿದ್ದರೆ ಅದರಲ್ಲಿದ್ದವರು ಏನಾಗಿದ್ದಾರೆ ಎಂದು ಗೊತ್ತಾಗಬೇಕಲ್ವ?. ಹೆಚ್ಚಾಗಿ ಮೀನುಗಾರರು ಬೋಟಿನ ಕ್ಯಾಬಿನ್‌ನಲ್ಲಿ ಮಲಗುವಾಗ ಬಾಗಿಲು ಹಾಕಿರುತ್ತಾರೆ. ಒಂದು ವೇಳೆ ಅವರು ಮೃತಪಟ್ಟಿದ್ದರೂ ಬೋಟ್‌ನ ಕ್ಯಾಬಿನ್ ಒಳಗೆ ಶವಗಳು ಇರುವ ಸಾಧ್ಯತೆ ಇದೆ ಎಂದರು.
7 ಮಂದಿ ಮಕ್ಕಳಲ್ಲಿ ರಮೇಶ್ 4ನೆಯವರು. ಇಬ್ಬರು ಅಕ್ಕಂದಿರು, ಒಬ್ಬ ಅಣ್ಣ, ಮೂವರು ತಮ್ಮಂದಿರು. ಈ ಮಧ್ಯೆ, ವೃದ್ಧ ತಂದೆ-ತಾಯಿ ಬಳಿ ಬೋಟ್ ಅವಶೇಷ ಪತ್ತೆಯಾಗಿದೆ, ಅದರಲ್ಲಿ ಇದ್ದವರ ಹುಡಕಾಟ ನಡೆಯುತ್ತಿದೆ ಎಂದು ಹೇಳಲಾಗಿದೆಯಷ್ಟೆ ಎನ್ನುತ್ತಾರೆ ನಾಗರಾಜ್. ರಮೇಶ್ ಅವರಿಗೆ ಮನೆಯಲ್ಲಿ ಮದುವೆ ಮಾಡಲು ಕೆಲವೆಡೆ ಹೆಣ್ಣು ನೋಡುತ್ತಿದ್ದರು. ಕಳೆದ 5 ವರ್ಷದಿಂದ ಬಡಾನಿಡಿಯೂರಿನ ಚಂದ್ರಶೇಖರ್ ಕೋಟ್ಯಾನ್ ಅವರ ಜತೆ ಕೆಲಸ ಮಾಡಿಕೊಂಡಿದ್ದರು.
ಎಲ್ಲವನ್ನೂ ಮುಚ್ಚಿಟ್ಟರು: ನಾಪತ್ತೆಯಾದವರು ಜೀವಂತವಾಗಿದ್ದಾರೆ ಎಂಬ ನಂಬಿಕೆಯಲ್ಲೇ ಕುಟುಂಬದವರು ದಿನ ಕಳೆಯುತ್ತಿದ್ದಾರೆ. ಮೂರು ತಿಂಗಳ ಹಿಂದೆಯೇ ಉ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನೌಕಾಪಡೆ ಅಧಿಕಾರಿಗಳು, ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ವಾರದೊಳಗೆ ಪ್ರಕರಣದ ವಿವರ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಬಳಿಕ ಏನನ್ನೂ ನೀಡಿಲ್ಲ, ಚುನಾವಣೆ ಹತ್ತಿರ ಬರುತಿದ್ದಂತೆ ಎಲ್ಲವನ್ನೂ ಮುಚ್ಚಿಟ್ಟು ಬಿಟ್ಟರು ಎಂದು ಉ.ಕ. ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷ ಗಣಪತಿ ಮಾಂಗ್ರೆ ಆರೋಪಿಸಿದ್ದಾರೆ.
ತಲಾ 1 ಕೋಟಿ ರೂ.ಪರಿಹಾರ ನೀಡಬೇಕು: ನೌಕಾಪಡೆಯ ಹಡಗಿನಿಂದಲೇ ಬೋಟು ಅವಘಡಕ್ಕೀಡಾಗಿರುವುದು ಖಚಿತಪಟ್ಟಿದೆ. ಮೀನುಗಾರಿಗೆ ಸಣ್ಣ ಪ್ರಮಾಣದಲ್ಲಿ ಪರಿಹಾರ ನೀಡಿ ಕೈ ತೊಳೆದುಕೊಳ್ಳುವುದು ಸರಿಯಲ್ಲ. ಕೇಂದ್ರ ಸರಕಾರ ಮೀನುಗಾರರ ಕುಟುಂಬದ ಸದಸ್ಯರಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಮಾಂಗ್ರೆ ಆಗ್ರಹಿಸಿದ್ದಾರೆ.