Advertisement

ಸಂಪೂರ್ಣ ಕನ್ನಡ ಬಳಕೆ ಸರ್ಕಾರದ ಗುರಿ

11:01 AM Nov 01, 2017 | |

ಬೆಂಗಳೂರು: ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಿದ್ಧಪಡಿಸಿರುವ ವರದಿ ಹಾಗೂ ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಅಭಿವೃದ್ಧಿಗಾಗಿ ಹೊರತಂದಿರುವ “ಕಂಪ್ಯೂಟರ್‌ ತಂತ್ರಜ್ಞಾನ ಪದ ವಿವರಣ ಕೋಶ’ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ವರದಿ ಹಾಗೂ ಪುಸ್ತಕ ಬಿಡುಗಡೆಗೊಳಿಸಿದ ಸಿಎಂ, ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಭಾಷೆ ಬಳಕೆ ಮತ್ತು ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಬೆಳವಣಿಗೆಯ ಅವಶ್ಯಕತೆಯನ್ನು ಮನದಟ್ಟು ಮಾಡಿಕೊಟ್ಟರು.

ಇದೇ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ.ಸಿದ್ದರಾಮಯ್ಯ ಅವರಿಂದ ವರದಿಯ ಪ್ರತಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸರ್ಕಾರಿ ಜಾಲತಾಣಗಳಲ್ಲಿ ಮತ್ತು ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಭಾಷೆ ಬಳಕೆಯಾಗಬೇಕು ಎನ್ನುವುದು ಪ್ರಾಧಿಕಾರ ಮಾತ್ರವಲ್ಲದೆ ಸರ್ಕಾರದ ಆಸೆಯೂ ಆಗಿದೆ. ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

ರಾಜ್ಯೋತ್ಸವದ ಒಂದು ದಿನ ಮುಂಚೆ ಇಂತಹದೊಂದು ಮಹತ್ವದ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಸರ್ಕಾರದ ಸಾಮಾಜಿಕ ಜಾಲತಾಣಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಕೆಯಾಗಬೇಕು ಎಂಬುದು ನನ್ನ ಆಶಯ. ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ,’ ಎಂದರು.

ಇದಕ್ಕೂ ಮೊದಲು ಮುಖ್ಯಮಂತ್ರಿಯವರಿಗೆ ವರದಿ ಸಲ್ಲಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ, “ಸರ್ಕಾರದ ಎಲ್ಲ ಜಾಲತಾಣಗಳು ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಇಲಾಖೆಗಳು ತಮ್ಮ ಜಾಲತಾಣಗಳಲ್ಲಿ ಏಕರೂಪ ಶಿಷ್ಟತೆ ಅಳವಡಿಸಿಕೊಳ್ಳಬೇಕು.

Advertisement

ಆ ಮೂಲಕ ಜಾಲತಾಣಗಳು ಬಳಕೆದಾರರ ಸ್ನೇಹಿ ಮತ್ತು ಕನ್ನಡದ ಪರವಾಗಿರಬೇಕು ಅನ್ನುವುದು ಪ್ರಾಧಿಕಾರದ ನಿಲುವು. ಈ ಹಿನ್ನೆಲೆಯಲ್ಲಿ “ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ’ ಎಂಬ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಟಿ.ಬಿ. ಜಯಚಂದ್ರ, ಕೆ.ಜೆ. ಜಾರ್ಜ್‌, ಪ್ರಿಯಾಂಕ್‌ ಖರ್ಗೆ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ಧಪ್ಪ,

-ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ, ಸಾಹಿತಿಗಳಾದ ಪೊ›.ಚಂದ್ರಶೇಖರ ಪಾಟೀಲ, ಡಾ. ಸಿದ್ದಲಿಂಗಯ್ಯ, ಡಾ.ಬಿ.ಟಿ. ಲಲಿತಾನಾಯಕ್‌, ಕನ್ನಡ ಗಣಕ ಪರಿಷತ್‌ ಕಾರ್ಯದರ್ಶಿ ಜಿ.ಎನ್‌. ನರಸಿಂಹಮೂರ್ತಿ, ತಂತ್ರಾಂಶ ತಜ್ಞರಾದ ಬೇಳೂರು ಸುದರ್ಶನ, ಟಿ.ಜಿ.ಶ್ರೀನಿಧಿ, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next