ಚಿತ್ರದುರ್ಗ: ಭಾರತ ದೇಶಕ್ಕೆ ರಾಮಮಂದಿರ ಸ್ವಾಭಿಮಾನದ ಪ್ರತೀಕ. ನಾವು ರಾಮಮಂದಿರ ನಿರ್ಮಿಸುವುದು ಶತಃಸಿದ್ಧ ಎಂದು ವಿಶ್ವ ಹಿಂದೂ ಪರಿಷತ್‌ನ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥಸ್ವಾಮಿ ಹೇಳಿದರು.
ಇಲ್ಲಿನ ಸ್ಟೇಡಿಯಂ ರಸ್ತೆಯ ಹಿಂದೂ ಮಹಾಗಣಪತಿ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಮಂದಿರ ನಿರ್ಮಾಣದ ಬಗ್ಗೆ ಅನುಮಾನ ಅನಗತ್ಯ. ರಾಮಮಂದಿರ ನಿರ್ಮಾಣ ನಮಗೆ ಆದ್ಯತೆಯ ವಿಷಯ ಎಂದರು. ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ಗಮನ ಸೆಳೆದಿದೆ. ಇಲ್ಲಿ ಲಕ್ಷೋಪಲಕ್ಷ ಜನರು ಸೇರುವುದು ಸಮಾಧಾನ ಮತ್ತು ನೆಮ್ಮದಿಯ ವಿಷಯ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಅಹಿಂಸೆಯಿಂದ ಅಲ್ಲ, ಸಾವಿರಾರು ಜನರ ಹೋರಾಟ ಮತ್ತು ಸಂಘರ್ಷದ ಬಲದಿಂದ. ಇದಕ್ಕಾಗಿ ಅನೇಕ ಮಹನೀಯರ ಮಾರಣಹೋಮವೇ ನಡೆದಿದೆ. ನಮ್ಮ ಭಾರತ ದೇಶದಲ್ಲಿ ಸಾವಿರಕ್ಕೂ ಹೆಚ್ಚು ವರ್ಷ ಪರಕೀಯರು ಆಳ್ವಿಕೆ ನಡೆಸಿದರೂ ಭಾರತೀಯರ ಮೂಲ ಸಂಸ್ಕೃತಿಯನ್ನು ನಾಶ ಮಾಡಲು
ಯಾರಿಂದಲೂ ಸಾಧ್ಯವಾಗಿಲ್ಲ. ಭಾರತೀಯರ ಇತಿಹಾಸ ಸೋಲಿಲ್ಲದ ಇತಿಹಾಸ ಎಂದು ಬಣ್ಣಿಸಿದರು.
ಭಾರತವನ್ನು ಸುತ್ತಾಡಿದ್ದ ಲಾರ್ಡ್ ಮೆಕಾಲೆ, ಭಾರತೀಯರು ಗೋವನ್ನು ತಾಯಿಗಿಂತ ಹೆಚ್ಚಾಗಿ ಪೂಜಿಸುತ್ತಿದ್ದರು. ಗುಡಿ, ಮಠ, ಮಂದಿರ, ಗುರು-ಹಿರಿಯರ ಬಗ್ಗೆ ಅಪಾರ ಗೌರವ ತೋರುತ್ತಿದ್ದರು. ಹಾಗಾಗಿ ಭಾರತವನ್ನು ಶಾಶ್ವತವಾಗಿ ಆಳ್ವಿಕೆ ನಡೆಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತವನ್ನು ಶಕರು, ಕುಶಾಣರು, ಪಠಾಣರು, ತುರ್ಕರು, ಸೇರಿದಂತೆ ನಾನಾ ರಾಜ ಮನೆತನಗಳು ಆಳ್ವಿಕೆ ನಡೆಸಿದರೂ ಯಾರು ಕೂಡ ಶಾಶ್ವತವಾಗಿ ಆಳ್ವಿಕೆ ನಡೆಸಲಿಲ್ಲ. ದೇಶದ ಜನರು ಅನಾಗರಿಕರಾಗಿದ್ದಾರೆ. ಇವರನ್ನು ಬೌದ್ಧಿಕ ದಾಸ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಭಾವಿಸಿದ್ದರು ಎಂದರು.
ಹಿಂದೂ ಮಹಾಗಣಪತಿ ಮಹೋತ್ಸವ ಸಮಿತಿ ಸದಸ್ಯರಾದ ಎಂ. ರಘು, ರಘುರಾಮ ರೆಡ್ಡಿ, ಗುರುಮೂರ್ತಿ, ಮೋಹನ್, ರಂಗಸ್ವಾಮಿ, ಪ್ರವೀಣ್ ಮತ್ತಿತರರು ಇದ್ದರು.