2012ರಲ್ಲಿ ಬಿಡುಗಡೆಯಾಗಿದ್ದ ಗ್ಯಾಂಗ್ಸ್ ಆಫ್ ವಾಸೈಪುರ್ ಸಿನಿಮಾ ಗ್ಯಾಂಗ್ ಸ್ಟರ್ ಆಕ್ಷನ್ ಕ್ರೈಮ್ ಚಲನಚಿತ್ರವಾಗಿದ್ದು, ಇದು ಜಾರ್ಖಂಡ್ ನ ಧನ್ ಬಾದ್ ನ ಕಲ್ಲಿದ್ದಲು ಮಾಫಿಯಾ ಮತ್ತು ಗ್ಯಾಂಗ್ ವಾರ್ ಕಥಾಹಂದರವನ್ನು ಒಳಗೊಂಡಿದೆ. ಆದರೆ ಇದು ರೀಲ್ ನ ಕಥಾನಕವಾಗಿದೆ. ರಿಯಲ್ ಗ್ಯಾಂಗ್ಸ್ ಆಫ್ ವಾಸೈಪುರ್ ಅಸಲಿಯತ್ತು ಏನು, ಗ್ಯಾಂಗ್ ನ ಪಾತಕಿ ಈಗ ಎಲ್ಲಿದ್ದಾನೆ ಎಂಬುದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ಇಂಟರ್ ಪೋಲ್ ಹೊರಡಿಸಿರುವ ರೆಡ್ and ಬ್ಲೂ ಕಾರ್ನರ್ ನೋಟಿಸ್!
ಇದನ್ನೂ ಓದಿ:ನೀವು ಗಂಡಸಾಗಿದ್ರೆ ʼʼಮಣಿಪುರ್ ಫೈಲ್ಸ್” ಸಿನಿಮಾ ಮಾಡಿ.. ವಿವೇಕ್ ಅಗ್ನಿಹೋತ್ರಿಗೆ ಸವಾಲು
ವಾಸೈಪುರ್ ರಿಯಲ್ ಗ್ಯಾಂಗ್ ಸ್ಟರ್ ಪ್ರಿನ್ಸ್ ಖಾನ್:
ಪಾತಕಿ, ಕುಖ್ಯಾತ ಗ್ಯಾಂಗ್ ಸ್ಟರ್ ಪ್ರಿನ್ಸ್ ಖಾನ್ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ತಲೆಮರೆಸಿಕೊಂಡಿರುವ ಪಾತಕಿ ಖಾನ್ ದುಬೈ ಅಥವಾ ಶಾರ್ಜಾದಲ್ಲಿ ಕಾರ್ಯಾಚರಿಸುತ್ತಿದ್ದಾನೆ ಎಂದು ವರದಿ ತಿಳಿಸಿದೆ.
ಯಾರೀತ ಪ್ರಿನ್ಸ್ ಖಾನ್?
ಪ್ರಿನ್ಸ್ ಫಾಹೀಮ್ ಖಾನ್ ನ ಸೋದರಳಿಯನಾಗಿದ್ದು, ಫಾಹೀಮ್ ನನ್ನು ವಾಸೇಪುರದ ನಟೋರಿಯಸ್ ಹಾಗೂ ಕುಖ್ಯಾತ ಗ್ಯಾಂಗ್ ಸ್ಟರ್ ಎಂದು ಪರಿಗಣಿಸಲಾಗಿದೆ. ಪ್ರಿನ್ಸ್ ಮೊದಲು ಫಾಹೀಮ್ ಗ್ಯಾಂಗ್ ನಲ್ಲಿದ್ದು, ಭಿನ್ನಾಭಿಪ್ರಾಯದ ನಂತರ ಪ್ರಿನ್ಸ್ ಪ್ರತ್ಯೇಕಗೊಂಡಿದ್ದ.
ಬಾಲಿವುಡ್ ನ ವಾಸೈಪುರ್ ಸಿನಿಮಾದಲ್ಲಿಯೂ ಫಾಹೀಮ್ ಖಾನ್ ಕ್ಯಾರೆಕ್ಟರನ್ನು ನವಾಜುದ್ದೀನ್ ಸಿದ್ದಿಕಿ (ಫೈಜಲ್ ಖಾನ್) ಮಾಡಿದ್ದು, ಖಾನ್ ಪಾತಕ ಜೀವನದ ಸುತ್ತ ಹೆಣೆದ ಕಥೆ ಇದಾಗಿತ್ತು. ಗ್ಯಾಂಗ್ ಸ್ಟರ್ ಫಾಹೀಮ್ ಜೈಲುಪಾಲಾದ ಬಳಿಕ ಪ್ರಿನ್ಸ್ ಖಾನ್ ಧನ್ ಬಾದ್ ನಲ್ಲಿ ತನ್ನನ್ನು ತಾನೇ ಚೋಟೆ ಸರ್ಕಾರ್ ಎಂದು ಬಿಂಬಿಸಿಕೊಳ್ಳುತ್ತಾ…ಗ್ಯಾಂಗ್ ಲೀಡರ್ ಆಗಿ ಬೆಳೆದುಬಿಟ್ಟಿದ್ದ.
ಧನ್ ಬಾದ್ ನಲ್ಲಿ ಪಾತಕ ಕೃತ್ಯಗಳನ್ನು ನಡೆಸುತ್ತಿದ್ದ ಪ್ರಿನ್ಸ್ ಖಾನ್ 2021ರಲ್ಲಿ ಫಾಹೀಮ್ ಗೆ ನಿಕಟವರ್ತಿಯಾಗಿದ್ದ ಪ್ರಾಪರ್ಟಿ ಡೀಲರ್ ಮಹತಾಬ್ ಅಲಾಮ್ ಅಲಿಯಾಸ್ ನಾಹ್ನೆ ಖಾನ್ ಎಂಬಾತನ ಕೊಲೆಯ ಹೊಣೆಗಾರಿಕೆ ಹೊತ್ತು ವಿಡಿಯೋ ಬಿಡುಗಡೆ ಮಾಡುವ ಮೂಲಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ.
ಜೈಲಿನಲ್ಲಿದ್ದ ಫಾಹೀಮ್ ಖಾನ್ ಸೂಚನೆ ಮೇರೆಗೆ ನಡೆಸಿದ ಸಹಚರ ಅಶ್ರಫುಲ್ ಹಸನ್ ಅಲಿಯಾಸ್ ಲಾಲಾ ಖಾನ್ ಹತ್ಯೆಗೆ ಪ್ರತೀಕಾರವಾಗಿ ಅಲಾಮ್ ಖಾನ್ ನನ್ನು ಕೊಲೆ ಮಾಡಲಾಗಿದೆ ಎಂದು ಪಾತಕಿ ಪ್ರಿನ್ಸ್ ವಿಡಿಯೋ ಹೇಳಿಕೆ ನೀಡಿದ್ದ.
ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಬೆದರಿಕೆ ಹಾಕಿರುವ ಆರೋಪ ಪ್ರಿನ್ ಖಾನ್ ಮೇಲಿದೆ. ಮೇ ತಿಂಗಳಿನಲ್ಲಿ ಪ್ರಿನ್ಸ್ ಖಾನ್ ಸಹಚರರು ಫಾಹೀಮ್ ಖಾನ್ ಪುತ್ರ ಇಕ್ಬಾಲ್ ಖಾನ್ ಮತ್ತು ಆತನ ಸಹಚರ ಧೋಲು ಮೇಲೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಧೋಲು ಸಾವನ್ನಪ್ಪಿದ್ದು, ಇಕ್ಬಾಲ್ ಗಂಭೀರವಾಗಿ ಗಾಯಗೊಂಡಿದ್ದು, ನಂತರ ಚಿಕಿತ್ಸೆ ಪಡೆದು ಬದುಕುಳಿದಿದ್ದ ಎಂದು ವರದಿ ಹೇಳಿದೆ.
ಪ್ರಿನ್ಸ್ ಭಾರತದಿಂದ ಪರಾರಿಯಾಗಿದ್ದು ಹೇಗೆ?
ಕೆಲವು ತಿಂಗಳ ಹಿಂದಷ್ಟೇ ಪಾತಕಿ ಪ್ರಿನ್ಸ್ ಖಾನ್ ಹೈದರ್ ಅಲಿ ಎಂಬ ಹೆಸರಿನಲ್ಲಿ ನಕಲಿ ಪಾಸ್ ಪೋರ್ಟ್ ಬಳಸಿಕೊಂಡು ಭಾರತದಿಂದ ಪರಾರಿಯಾಗಿದ್ದ. ನಂತರ ಪ್ರಿನ್ಸ್ ಖಾನ್ ಯುಎಇಯಿಂದಲೂ ಹಲವಾರು ಬೆದರಿಕೆಯ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದ. ಅಷ್ಟೇ ಅಲ್ಲ ಧನ್ ಬಾದ್ ನಲ್ಲಿ ಪ್ರಿನ್ಸ್ ಗ್ಯಾಂಗ್ ಸದಸ್ಯರು ಉದ್ಯಮಿಗಳನ್ನು ಹಾಗೂ ರಾಜಕಾರಣಿಗಳನ್ನು ಬೆದರಿಸುವ ಕೆಲಸ ಮುಂದುವರಿಸಿದ್ದರು ಎಂದು ವರದಿ ತಿಳಿಸಿದೆ. ಹೀಗೆ ಹಲವಾರು ಪಾತಕ ಕೃತ್ಯದಲ್ಲಿ ತೊಡಗಿರುವ ಪ್ರಿನ್ಸ್ ಖಾನ್ ಬಂಧನಕ್ಕಾಗಿ ಸಿಬಿಐ ಇಂಟರ್ ಪೋಲ್ ನೆರವು ಕೋರಿರುವುದಾಗಿ ವರದಿ ಹೇಳಿದೆ.