ಬೆಂಗಳೂರು: ಆತ್ಮ ನಿರ್ಭರ್ ಭಾರತ ನಿರ್ಮಾಣದ ಹಾದಿಯಲ್ಲಿ ಇಂದು ಘೋಷಿಸಿದ ಹಲವಾರು ಯೋಜನೆಗಳು, ಮತ್ತು ಹಣಕಾಸು ಸಹಾಯ ರಾಜ್ಯಕ್ಕೆ ಹೆಚ್ಚು ಲಾಭವಾಗಲಿದ್ದು, ಉದ್ಯೋಗ ಅವಕಾಶಗಳನ್ನು ವೃದ್ಧಿಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಖನಿಜ ವಲಯದಲ್ಲಿ ತರುತ್ತಿರುವ ಅಮೂಲಾಗ್ರ ಬದಲಾವಣೆ ರಾಜ್ಯದ ಖನಿಜ ನೀತಿಗೆ ಪೂರಕವಾಗಲಿದೆ.ನಮ್ಮ ರಾಜ್ಯದಲ್ಲಿ ಹಲವಾರು ಖನಿಜಗಳ ನಿಕ್ಷೇಪಗಳಿದ್ದು, ಈಗ ಅವುಗಳ ಗಣಿಗಾರಿಕೆ ಮಾಡಲು ಅವಕಾಶ ಕಲ್ಪಿಸಿಕೊಡಲಿದೆ. ಅದರಲ್ಲೂ ಈಗಿರುವ ಖನಿಜ ಸಂಬಂಧಪಟ್ಟ ಕಾಯಿದೆಗಳು ನಮಗೆ ಹೆಚ್ಚಿನ ಅವಕಾಶ ಕಲ್ಪಿಸಲು ಮತ್ತು ಗಣಿಗಾರಿಕೆ ಮಾಡುವಲ್ಲಿ ಸ್ವಲ್ಪ ಅಡಚಣೆಗಳಿದ್ದವು.
ಈಗ, ನಾವು ಮುಕ್ತ ವಾತಾವರಣದಲ್ಲಿ ಕೆಲಸ ಮಾಡಬಹುದು. ಇವೆಲ್ಲವುಗಳ ಜೊತೆಗೆ ರಾಜ್ಯದಲ್ಲಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವಲ್ಲಿ ಸಹಾಯವಾಗಲಿದೆ.
ರಾಜ್ಯದಲ್ಲಿ ಯಥೇಚ್ಚ ಖನಿಜ ಸಂಪತ್ತು ಇದ್ದು (ಕಬ್ಬಿಣ, ತಾಮ್ರ, ಬಂಗಾರ, ಕ್ವಾರ್ಜ್ ಮತ್ತು ಯುರೇನಿಯಂ) ಇವುಗಳನ್ನು ನಾವು ಗಣಿಗಾರಿಕೆ ಮಾಡಿ ರಾಜ್ಯದ ಆರ್ಥಿಕ ಬೆಳವಣಿಗೆಗೆ ಕಾರಣವಾಗಬಹುದು. ಖಾಸಗಿ ಸಹಬಾಗಿತ್ವದ ಗಣಿಗಾರಿಕೆ ರಾಜ್ಯಕ್ಕೆ ಹೆಚ್ಚು ಲಾಭವಾಗಲಿದೆ.
ದೇಶದ ರಕ್ಷಣಾ ವಲಯ, ಬಾಹ್ಯಾಕಾಶ, ನಾಗರಿಕ ವಿಮಾನಯಾನ, ಅಂತರಿಕ್ಷ ಯಾನ, ಮತ್ತು ಅಂತರಿಕ್ಷ ವಲಯಗಳಲ್ಲಿ ಹೂಡಿಕೆ ಹೆಚ್ಚಾಗಿ ರಾಜ್ಯಕ್ಕೆ ಲಾಭವಾಗಲಿದೆ. ಏಕೆಂದರೆ, ಈ ವಲಯದಲ್ಲಿ ಸಾಕಷ್ಟು ಉತ್ಪಾದನಾ ಘಟಕಗಳು ನಮ್ಮ ರಾಜ್ಯದಲ್ಲಿದ್ದು, ಅವುಗಳಿಗೆ ಪೂರಕವಾಗಿ ಇತರೆ ಸಂಬಂಧಪಟ್ಟ ಘಟಕಗಳು ಸ್ಥಾಪನೆ ಆಗುತ್ತವೆ. ಎಲ್ಲಕ್ಕೂ ಮಿಗಿಲಾಗಿ ಇಂದು ಪ್ರಕಟಿಸಿದ ಆರ್ಥಿಕ ಯೋಜನೆಗಳು ದೇಶದ ವಿದೇಶ ವಿನಿಮಯವನ್ನು ಉಳಿತಾಯ ಮಾಡಲಿದೆ. ಅಣು ವಿಜ್ಞಾನದಲ್ಲಿ ಖಾಸಗಿ ಸಹಭಾಗಿತ್ವ ಕೂಡ ನಮ್ಮ ರಾಜ್ಯಕ್ಕೆ ಹೆಚ್ಚಿನ ಲಾಭವಾಗಲಿದೆ.
ದಾವೋಸ್ ಪ್ರವಾಸದಲ್ಲಿ ಹಲವಾರು ಬಾಹ್ಯಾಕಾಶ ಮತ್ತು ರಕ್ಷಣಾ ವಲಯ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ತಮ್ಮ ಇಚ್ಚೆ ವ್ಯಕ್ತಪಡಿಸಿದ್ದು, ಈಗ ಈ ಕಂಪನಿಗಳ ಯೋಜನೆಗಳು ಸಾಕಾರಗೊಳ್ಳಲಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.