Advertisement

ಕಾಡು ಹಾಗಲ ಬಂತು ನಾಡಿಗೆ, ಬಂತು ಬೀಡಿಗೆ… 

04:00 AM Oct 29, 2018 | |

ಕಾಡಿನಲ್ಲಿ ಬೆಳೆಯುವ ಹಾಗಲವನ್ನು ನಾಡಿಗೆ ತಂದರೆ ಹೇಗೆ? ಇಂಥದೊಂದು ಆಲೋಚನೆ ಮನಸ್ಸಿನ ಮೂಲೆಯಲ್ಲಿ ಇಣುಕಿದಾಗ ಕಾನಿನೆಡೆ ಮುಖ ಮಾಡಿದರು ನಿಂಗಯ್ಯ. ಈಗ ಕಾಡು ಹಾಗಲ ಬಳ್ಳಿ ಇವರ ತೋಟವನ್ನೇ ಕಾಡೆಂದು ತಿಳಿದುಕೊಂಡಂತಿದೆ. ಕಾಲ ಕಾಲಕ್ಕೆ ಹಬ್ಬಿ, ಭರ್ತಿ ಫ‌ಸಲು ನೀಡಿ, ಜೇಬಿಗೊಂದಿಷ್ಟು ಕಾಸು ತಂದುಕೊಡುತ್ತಿದೆ.

Advertisement

ಈ ನಿಂಗಯ್ಯ ಗುರುವಯ್ಯ ಹಿರೇಮಠ, ಕಲಘಟಗಿ ತಾಲೂಕಿನ ಸೂರಶೆಟ್ಟಿ ಕೊಪ್ಪದವರು. ಇವರಿಗೆ, ಒಂದೂವರೆ ಎಕರೆ ಜಮೀನು ಇದೆ. ಕೃಷಿ ವೈವಿಧ್ಯತೆಗೆ ಆದ್ಯತೆ ನೀಡುವ ಮನಸ್ಸು ಇವರದು. ಹಾಗಾಗಿ, ಇವರ ತೋಟ ಕಾಡಿನಂತೆ ಗೋಚರಿಸುತ್ತಿದೆ. ಮೂವತ್ತು ಅಡಿ ಅಂತರದಲ್ಲಿ ನಾಟಿ ಮಾಡಿರುವ ಚಿಕ್ಕು ಗಿಡಗಳು, ಅಷ್ಟೇ ಅಂತರ ಕಾಯ್ದುಕೊಂಡು ಪೋಷಿಸಿದ ನಲವತ್ತು ಆಪೂಸ್‌ ತಳಿಯ ಮಾವಿನ ಗಿಡಗಳು, ಇವರು ನಂಬಿಕೊಂಡ ಮುಖ್ಯ ಬೆಳೆ.

ಮಳೆಯಾಶ್ರಿತ ಕೃಷಿ ಇವರದು. ಮಳೆಗಾಲ ಕಳೆಯುತ್ತಿದ್ದಂತೆ ಗಿಡಗಳಿಗೆ ನೀರಿನ ಅಗತ್ಯ ಪೂರೈಸಿಕೊಳ್ಳಲು ಕಸರತ್ತು ಮಾಡಬೇಕಾಯಿತು. ಅರ್ಧ ಕಿಲೋಮೀಟರ್‌ ದೂರದಲ್ಲಿರುವ ಬೋರ್‌ವೆಲ್‌ನಿಂದ ನೀರು ಹೊತ್ತು ಹಾಕುವುದು ಅನಿವಾರ್ಯವಾಯ್ತು. ನೀರಿನ ಮಿತವ್ಯಯ ಮಾರ್ಗಗಳ ಬಗ್ಗೆ ಆಲೋಚಿಸಿದರು. ಪ್ಲಾಸ್ಟಿಕ್‌ ತೊಟ್ಟೆಗಳನ್ನು ತೆಗೆದುಕೊಂಡು ಅದರಲ್ಲಿ ನೀರು ತುಂಬಿ ದಾರದಿಂದ ಬಿಗಿಯಾಗಿ ತೊಟ್ಟೆಯ ಬಾಯಿಗೆ ಕಟ್ಟಿ ಗಿಡಗಳ ಬುಡಕ್ಕಿಟ್ಟರು.

ನೀರು ತುಂಬಿದ ತೊಟ್ಟೆಗೆ ಚಿಕ್ಕ ರಂದ್ರ ಮಾಡಿದರು. ಹನಿ ಹನಿಯಾಗಿ ಗಿಡದ ಬುಡಕ್ಕೆ ನೀರು ಸೇರಿಸಲಾರಂಭಿಸಿತು. ಗಿಡಗಳ ಬುಡಕ್ಕೆ ಹಾಸಿರುವ ಹಸಿ ಸೊಪ್ಪುಗಳಿಂದಾಗಿ ನೀರಿನ ಪಸೆ ಕೂಡ ಬಿಸಿಲಿನ ಹೊಡೆತಕ್ಕೆ ಸುಲಭವಾಗಿ ಆರಿ ಹೋಗಲಿಲ್ಲ. ಈಗ ಚಿಕ್ಕು ಗಿಡಗಳಿಗೆ ಇಪ್ಪತ್ತು ವರ್ಷಗಳ ಪ್ರಾಯ. ಎರಡು ವರ್ಷಗಳೀಚೆಗೆ ಕೊಳವೆಬಾವಿ ತೆಗೆಸಿದ್ದಾರೆ. ನಿಂಗಯ್ಯರದು ಚಿಕ್ಕು ಹಾಗೂ ಮಾವಿನ ಮರಗಳನ್ನು ಒಳಗೊಂಡ ತೋಟ.

ಅಲ್ಲಲ್ಲಿ ನುಗ್ಗೆ, ಬಾಳೆ, ನಿಂಬೆ ಗಿಡಗಳಿವೆ. ವರ್ಷಪೂರ್ತಿ ಬೆಳೆಯಿರುವಂತೆ ನೋಡಿಕೊಳ್ಳುವುದು ಇವರ ವಿಶೇಷತೆ. ಮುಂಗಾರಿನಲ್ಲಿ ಶೇಂಗಾ, ಸೋಯಾಬಿನ್‌, ಉದ್ದು, ಅಲಸಂದೆ ಮತ್ತಿತರ ಬೆಳೆ ಬೆಳೆಯುತ್ತಾರೆ. ಕಟಾವಾಗುತ್ತಿದ್ದಂತೆ ತರಕಾರಿ ಬೆಳೆಗಳಿಗೆ ಆದ್ಯತೆ ನೀಡುತ್ತಾರೆ. ಬಸಳೆ, ಟೊಮೆಟೊ, ಹೀರೆ, ಬದನೆ, ಮೂಲಂಗಿ ಮತ್ತಿತರ ಕಾಯಿಪಲ್ಲೆಗಳು ತೋಟವನ್ನಾವರಿಸಿರುತ್ತವೆ. ಚಿಕ್ಕು ಎರಡು ಬಾರಿ ಕೊಯ್ಲಿಗೆ ಸಿಗುತ್ತಿದೆ. ಸೆಪ್ಟೆಂಬರ್‌ ತಿಂಗಳ ಕೊಯ್ಲಿನಲ್ಲಿ ಇಪ್ಪತ್ತು ಸಾವಿರ ರೂಪಾಯಿ ಗಳಿಕೆಯಾಗಿದೆ.

Advertisement

ಕಾಡು ಹಾಗಲ ತೋಟಕ್ಕೆ: ದಶಕದ ಹಿಂದೆ ತೋಟದ ಬದುವಲ್ಲಿರುವ ಸಪೋಟ ಮರಕ್ಕೊಂದು ಬಳ್ಳಿ ಹಬ್ಬಿತ್ತು. ನೈಸರ್ಗಿಕವಾಗಿಯೇ ಗಿಡವನ್ನಪ್ಪಿಕೊಂಡಿದ್ದ ಬಳ್ಳಿಯನ್ನು ನಿಂಗಯ್ಯ ನಿರ್ಲಕ್ಷಿಸಿದ್ದರು. ಮಳೆಗಾಲ ಮುಗಿಯುತ್ತಿದ್ದಂತೆ ಅದು ಒಣಗಿ ಮರೆಯಾಗಿತ್ತು. ಮಾರನೆಯ ವರ್ಷ ಅದೇ ಬಳ್ಳಿ, ಮಳೆ ಹನಿಸುತ್ತಿದ್ದಂತೆ ಪುನಃ ಮರವನ್ನಂಟಿ ಕುಳಿತಿತ್ತು. ಈ ಬಾರಿ ಬಿರುಸಾದ ಎಲೆಗಳು ಮರಪೂರ್ತಿ ಹಬ್ಬಿದ್ದವು. ಬೇಸಿಗೆಯಲ್ಲಿ ಒಣಗಿ ಬಳ್ಳಿಯ ಕುರುಹಷ್ಟೇ ಉಳಿದಿತ್ತು.

ಮಾರನೆಯ ವರ್ಷ ಮುಂಗಾರಿನಲ್ಲಿ ಪುನಃ ಚಿಗುರಿನ ಪುನರಾವರ್ತನೆ. ಈ ಬಾರಿ ಬಳ್ಳಿಯಲ್ಲಿ ಕಾಯಿಗಳಿದ್ದವು. ಬಳ್ಳಿಯೊಂದರಲ್ಲಿ ಹತ್ತಾರು ಕಾಯಿಗಳು ಹಿಡಿದಿರುವುದು ಇವರ ಕುತೂಹಲವನ್ನು ಇಮ್ಮಡಿಗೊಳಿಸಿತ್ತು.  ಗಿಡದ ಮಹತ್ವ ತಿಳಿಯುತ್ತಿದ್ದಂತೆ ನಿಂಗಯ್ಯ ಬಳ್ಳಿಯನ್ನು ಜತನದಿಂದ ಕಾಯ್ದುಕೊಂಡರು. ಬಳ್ಳಿಗಳಿಗೆ ಜೋತು ಬಿದ್ದಿರುವ ಕಾಯಿರಾಶಿಗಳನ್ನು ಹಾಳುಗೆಡುವ ಬಾರದೆಂದು ಜಾಗ್ರತೆಯಿಂದ ಕೊಯ್ಲು ಮಾಡಿ ಹುಬ್ಬಳ್ಳಿಗೆ ಕೊಂಡೊಯ್ಯಲು ನಿರ್ಧರಿಸಿದರು.

ತೂಕಕ್ಕಿಟ್ಟರೆ ಎರಡು ಕೆಜಿಯಷ್ಟು ತೂಗುವಷ್ಟು ಕಾಯಿಗಳಿದ್ದವು. ವ್ಯಾಪಾರಸ್ಥರೊಬ್ಬರಿಗೆ ಕಾಯಿಗಳನ್ನು ತೋರಿಸಿದರು. ತೂಕಕ್ಕಿಟ್ಟು ಎರಡು ಕೆಜಿ ತೂಗಿದ ಕಾಯಿಗೆ ವ್ಯಾಪಾರಸ್ಥ ಮರು ಮಾತನಾಡದೇ ನೂರಿಪ್ಪತ್ತು ರೂಪಾಯಿಗಳನ್ನು ನಿಂಗಯ್ಯರ ಕೈ ಯಲ್ಲಿಟ್ಟಿದ್ದ. ಈಗ ಅಚ್ಚರಿಗೊಳಗಾಗುವ ಸರದಿ ನಿಂಗಯ್ಯರದು.ಆಗಲೇ ಹುಟ್ಟಿಕೊಂಡಿದ್ದು ‘ಕಾಡಿನ ಹಾಗಲವನ್ನು ನಾಡಿಗೆ ತಂದರೆ ಹೇಗೆ?’ ಎನ್ನುವ ಆಲೋಚನೆ. ಊರ ಪಕ್ಕದಲ್ಲಿರುವ ಕಾಡಿನೊಳಗೇ ಮೊದಲ ಪ್ರಯತ್ನದಲ್ಲಿಯೇ ನಾಲ್ಕಾರು ಬಳ್ಳಿಗಳು ದೊರೆತವು.

ಜತನದಿಂದ ತಮ್ಮ ತೋಟದಲ್ಲಿನ ಚಿಕ್ಕು ಗಿಡಗಳ ಬುಡಗಳಲ್ಲಿ ಮಣ್ಣಿಗೆ ಸೇರಿಸಿದರು. ಮುಂಡಗೋಡು ಸಮೀಪದ ಕಾಡುಗಳಿಗೆ ತೆರಳಿ ದನಗಾಹಿಗಳನ್ನು ಪರಿಚಯಿಸಿಕೊಂಡರು. ನಾಲ್ಕಾರು ದನಗಾಹಿಗಳ ಮೂಲಕ ಗುಡ್ಡಗಳಲ್ಲಿ ಹಬ್ಬಿರುವ ಬಳ್ಳಿಗಳು ನಿಂಗಯ್ಯರ ತೋಟ ಸೇರಿದವು. ನಲವತ್ತು ಸಪೋಟ ಗಿಡಗಳ ಬುಡಗಳಲ್ಲಿ ಭದ್ರವಾದವು. ನಂತರ ಎದುರಾದ ಮುಂಗಾರಿನಲ್ಲಿ ನಲವತ್ತು ಗಿಡಗಳು ಹಬ್ಬಿ ನಿಂತಿತ್ತು. ಹಾಗಲ ಕಾುಗಳ ಇಳುವರಿ ತುಂಬಿಕೊಂಡು ನಿಂಗಯ್ಯರ ಮುಖದಲ್ಲಿ ಮಂದಹಾಸ ಮೂಡಿಸಿತ್ತು.

ನೂರು ಹಾಗಲ ಬಳ್ಳಿಗಳು: ಇವರ ತೋಟದಲ್ಲೀಗ ಒಂದು ನೂರು ಹಾಗಲ ಬಳ್ಳಿಗಳಿವೆ. ಸಪೋಟ ಮರವಲ್ಲದೇ ನುಗ್ಗೆ, ಹಲಸು, ಪೇರಲೆ, ನಿಂಬೆ ಮತ್ತಿತರ ಗಿಡಗಳಿಗೂ ಹಬ್ಬಿಸಿದ್ದಾರೆ. ಪ್ರತೀ ವರ್ಷ ಮುಂಗಾರಿನ ಆರಂಭವಾಗುತ್ತಿದ್ದಂತೆ ಚಿಗಿತುಕೊಳ್ಳುತ್ತದೆ. ಜುಲೈ ಮೊದಲನೆಯ ವಾರ ಕಾಯಿಗಳು ಕೊಯ್ಲಿಗೆ ಸಿಗುತ್ತದೆ. ಸಪ್ಟೆಂಬರ್‌ ಕೊನೆಯ ವರೆಗೆ ಕಾಯಿಗಳನ್ನು ಹರಿಯಬಹುದು.

ವರ್ಷಕ್ಕೊಂದು ಬಾರಿ ಪ್ರತೀ ಗಿಡದಿಂದ 4-5 ಕೆಜಿ ಕಾುಗಳು ಲಭ್ಯವಾಗುತ್ತದೆ. ಇಪ್ಪತ್ತು ಕಾಯಿಗಳನ್ನು ಸೇರಿಸಿದರೆ ಒಂದು ಕಿಲೋಗ್ರಾಂ ತೂಗುತ್ತದೆ. ಒಂದು ಕೆ.ಜಿಗೆ ಇನ್ನೂರು ರೂಪಾಯಿ ದರವಿದೆ. ವ್ಯಾಪಾರಸ್ಥರಿಗೆ ನೀಡುವುದಾದರೆ 150 ರೂಪಾಯಿ ದರ ಸಿಗುತ್ತದೆ. ಹೊಲದಲ್ಲಿ  ತಾವು ಬೆಳೆದ ಇತರ ತರಕಾರಿಗಳಿದ್ದಲ್ಲಿ ಹುಬ್ಬಳ್ಳಿಯ ಗಾಂಧೀ ಮಾರುಕಟ್ಟೆಯಲ್ಲಿ ತಾವೇ ಸ್ವತಃ ಕುಳಿತು ಮಾರಾಟ ಮಾಡುತ್ತಾರೆ.

ಕಾಡು ಹಾಗಲ ಬಳ್ಳಿಗೆ ಗಿಡಗಳ ಆಶ್ರಯ ಬೇಕೇ ಬೇಕು.ಬಳ್ಳಿಯಂತೆ ನೆಲದಲ್ಲಿ ಹಬ್ಬುವುದಿಲ್ಲ. ಗಿಡದ ಬುಡದಲ್ಲಿ ಮಣ್ಣಿನೊಳಗೆ ಗಡ್ಡೆ ಬೆಳೆದಿರುತ್ತದೆ. ನಾಲ್ಕಾರು ವರ್ಷ ಪ್ರಾಯದ ಬಳ್ಳಿಯ ಬುಡದಲ್ಲಿ ಒಂದು ಅಡಿ ಅಗಲ ಅರ್ಧ ಅಡಿ ಎತ್ತರದ ಗಡ್ಡೆಗಳಿರುತ್ತವೆ. ಹತ್ತು ವರ್ಷ ಪ್ರಾಯವಾದ ಗಡ್ಡೆಗಳಿಂದ ಹುಟ್ಟಿದ ಬಳ್ಳಿಯಿಂದ ಸಿಗುವ ಇಳುವರಿ ಪ್ರಮಾಣ ಕಡಿಮೆ. ಗಡ್ಡೆ ಬದಲಿಸುವುದು ಒಳಿತು ಎನ್ನುತ್ತಾರೆ.

ನಿರ್ವಹಣೆ ಸುಲಭ: ಮುಂಗಾರು ಆರಂಭಿಸುತ್ತಿದ್ದಂತೆಯೇ ಕುರ್ಚಿಯ ಸಹಾಯದಿಂದ ಗಡ್ಡೆಯ ಬುಡದಲ್ಲಿರುವ ಮಣ್ಣನ್ನು ಸಡಿಲಿಸಿ ಪುಡಿಯಾದ ಕಾಂಪೋಸ್ಟ್‌ ಗೊಬ್ಬರ ಹಾಕುತ್ತಾರೆ. ಗಡ್ಡೆಗೆ ಪೆಟ್ಟು ತಗಲದಂತೆ ಅರ್ದ ಬುಟ್ಟಿಯಂತೆ ಗೊಬ್ಬರ ಚೆಲ್ಲಿದರೆ ವರ್ಷದ ನಿರ್ವಹಣೆ ಮುಗಿದಂತೆ. ರೋಗ ಕೀಟದ ಭವಣೆಯಲ್ಲ. 

ಕೊಯ್ಲು ಮಾಡುವುದೊಂದೆ ಕೆಲಸ. ಕಾಡು ಹಾಗಲ ಬಳ್ಳಿ ಸಪೋಟ ಮರಗಳಿಗೆ ಪೂರ್ತಿಯಾಗಿ ಹಬ್ಬಿಕೊಳ್ಳುವುದರಿಂದ ನೆರಳಿನಿಂದಾಗಿ ಇಳುವರಿ ಕುಂಠಿತಗೊಂಡಿರುವುದು ಇವರ ಗಮನಕ್ಕೆ ಬಂದಿದೆ. ಆದರೆ ಅದು ತಲೆ ನೋವೆನ್ನುವಷ್ಟು ಇವರನ್ನು ಭಾದಿಸಿಲ್ಲ. ಕಾರಣಷ್ಟೇ. ಕಡಿತಗೊಂಡ ಇಳುವರಿಗಿಂತ ಜಾಸ್ತಿ ಗಳಿಕೆ ಹಾಗಲದಿಂದ ದೊರೆಯುತ್ತಿದೆ.

ಸಂಪರ್ಕಿಸಲು: 9481876468

* ಕೋಡಕಣಿ ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next