Advertisement

ಕಾಡಿನ ಚಿರತೆಗೆ ಮೃಗಾಲಯದಲ್ಲಿ ಸಿಬ್ಬಂದಿ ರಾಜಾತಿಥ್ಯ

12:43 PM Sep 19, 2018 | |

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನವನ ಒಂದಲ್ಲ ಒಂದು ಘಟನೆಗಳಿಂದ ಸದಾ ಸುದ್ದಿಯಾಗುತ್ತದೆ. ಅಂತೆಯೇ ಸೋಮವಾರ ರಾತ್ರಿ ಒಂದಿಡೀ ದಿನ ಅತಿಥಿಯೊಂದು ಉದ್ಯಾನದ ಔತಣ ಸ್ವೀಕರಿಸಿ ರಾತ್ರಿ ಬೀಳ್ಕೊàಡುಗೆ ಪಡೆದಿದೆ.

Advertisement

ಆ ಅತಿಥಿಯೇ ಕಾಡಿನ ಚಿರತೆ. ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ ಪುನರ್ವಸತಿ ಕೇಂದ್ರದ ಎಡ ಭಾಗದ ಗಂಗಾ ಹೆಸರಿನ ಅನಿಮಲ್‌ಹೌಸ್‌ನಲ್ಲೇ 30 ಗಂಟೆಗಳ ಕಾಲ ಆಶ್ರಯ ಪಡೆದಿತ್ತು. ಇಲ್ಲಿನ ಸಿಬ್ಬಂದಿ ಅನಿರೀಕ್ಷಿತ ಅತಿಥಿಗೆ ಆಹಾರ ಕೊಟ್ಟು ಅದ್ಧೂರಿ ಔತಣ ನೀಡಿದ್ದಾರೆ. 24 ಗಂಟೆಗಳ ಬಳಿಕ ಅತಿಥಿಯನ್ನು ತಮ್ಮ ಮೂಲ ಸ್ಥಾನಕ್ಕೆ ಬಿಡಲು ತಯಾರಿ ಮಾಡಿ 17ರ ರಾತ್ರಿ ಹತ್ತು ಗಂಟೆ ಸುಮಾರಿನಲ್ಲಿ ರಾಷ್ಟ್ರೀಯ ಉದ್ಯಾನವನದ ಉದುಗೆ ಬಂಡೆ ಬಳಿ ಬೀಳ್ಕೊಟ್ಟಿದ್ದಾರೆ. 

ಏನಿದು ಘಟನೆ?: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪ್ರಾಣಿ ಪುನರ್ವಸತಿ ಕೇಂದ್ರ ( ಸರ್ಕಸ್‌ಗಳಿಂದ ವಶ ಪಡೆದ ಹುಲಿ, ಸಿಂಹಗಳಿಗೆ ಆಶ್ರಯ ನೀಡಿರುವ ಜಾಗ) 16ರ ರಾತ್ರಿ ಸುಮಾರು 7.30ರಲ್ಲಿ ಗಂಗಾ ಹೆಸರಿನ ಅನಿಮಲ್‌ ಹೌಸ್‌ ಸುಮಾರು 20 ಅಡಿ ಎತ್ತರದ ಕಂಬಿ ಬೇಲಿ ಹತ್ತಿ ಇಳಿದು ಕೇಜ್‌ ಬಳಿ ಬಂದಿದೆ. ಅಲ್ಲಿ ಒಂದು ಕೇಜ್‌ನ ಬಾಗಿಲು ತೆರೆದಿರುವುದು ಕಂಡು ಅದರೊಳಗೆ ಸೇರಿಕೊಂಡಿದೆ. ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿ ಕೇಜ್‌ ಬಾಗಿಲು ಮುಚ್ಚಿದ್ದಾರೆ.

ಸೋಮವಾರ ಮುಂಜಾನೆ ಉದ್ಯಾನದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಕಾಡಿನ ಚಿರತೆ ಆಕಸ್ಮಿಕವಾಗಿ ಬಂದಿದೆ. ಹಗಲಿನಲ್ಲಿ ಹೊರಗೆ ಕಳುಹಿಸಲು ಕಷ್ಟವಾಗುತ್ತದೆ ಎಂದು ಯೋಚಿಸಿ ರಾತ್ರಿ ಬಿಡಲು ನಿರ್ಧರಿಸಿದ್ದಾರೆ. ಇಡೀ ದಿನ ಅದಕ್ಕೆ ಮಾಂಸ , ನೀಡಿ ತೊಂದರೆಯಾಗದಂತೆ ನೋಡಿ ಕೊಂಡಿದ್ದಾರೆ. 

17 ರಾತ್ರಿ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ (ವನ್ಯಜೀವಿ) ಇವರ ಗಮನಕ್ಕೆ ತಂದು ಅರಿವಳಿಕೆ ಚುಚ್ಚುಮದ್ದು ನೀಡಿ ನಂತರ ಕಾಡಿನಲ್ಲಿ ಬಿಟ್ಟು ಬಂದಿದ್ದಾರೆ. ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿಯವರ ಮೇಲೆ ಬೆಂಗಳೂರಿನ ವಿಬ್‌ಗಯಾರ್‌ ಶಾಲೆಯಲ್ಲಿ ದಾಳಿ ಮಾಡಿದ್ದ ಚಿರತೆಯನ್ನು ಬಂಧಿಸಿ ಉದ್ಯಾನವನದ ಇದೇ ಕೇಜ್‌ನಲ್ಲಿ ಬಿಡಲಾಗಿತ್ತು.

Advertisement

ಆದರೆ ಆಕಸ್ಮಿಕವಾಗಿ ಅದು ತಪ್ಪಿಸಿಕೊಂಡಿತ್ತು. ಸದ್ಯ ಅದೇ ಕೇಜ್‌ ನಲ್ಲಿ ಕಾಡಿನ ಚಿರತೆ ಬಂಧಿಯಾಗಿದ್ದರಿಂದ ಎಲ್ಲರೂ ಅದೇ ಚಿರತೆ ಇರಬಹುದು ಎಂದು ಊಹಿಸುತ್ತಿದ್ದರು. ಆದರೆ, ಇದು ಆ ಚಿರತೆ ಅಲ್ಲ. ಅಂದಿನ ಚಿರತೆ ಸೆರೆ ಹಿಡಿಯುವ ಕಾರ್ಯಚರಣೆಯಲ್ಲಿ ನಾನೂ ಇದ್ದೆ. ಆ ಚಿರತೆಗೆ ಒಂದು ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಆದರೆ, ಈ ಚಿರತೆಗೆ ಎರಡು ಕಣ್ಣುಗಳು ಚೆನ್ನಾಗಿದ್ದವು ಎಂದು ಅರಣ್ಯಾಧಿಕಾರಿ ಗಣೇಶ್‌ ಹೇಳಿದರು.

ಕೇಜ್‌ ಒಳಗೆ ಚಿರತೆ ಸೇರಿದ್ದೇ ಅನುಮಾನ: ಒಂದು ಮೂಲಗಳ ಪ್ರಕಾರ ಗಂಗಾ ಹೆಸರಿನ ಅನಿಮಲ್‌ ಹೌಸ್‌ನಲ್ಲಿ ಹೆಣ್ಣು ಚಿರತೆಗಳಿವೆ. ಅದರ ಆಕರ್ಷಣೆಗೆ ಕಾಡಿನ ಚಿರತೆ ರಾತ್ರಿ ವೇಳೆ ಓಡಾಡುತ್ತಿದೆ ಎಂಬ ಮಾಹಿತಿ ಇಲ್ಲಿನ ಸಿಬ್ಬಂದಿಗೆ ತಿಳಿದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬಂದಿದ್ದ ಚಿರತೆಯೂ ಗಂಡಾಗಿತ್ತು. ಕಾಕತಾಳಿಯವೋ ಎಂಬಂತೆ 2017 ಫೆ.14 ರಂದು ಇದೇ ಗಂಗಾಹೌಸ್‌ ನಿಂದ ಚಿರತೆಯೊಂದು ತಪ್ಪಿಸಿಕೊಂಡು ನಾಪತ್ತೆಯಾಗಿತ್ತು.ಈ ವಿಷಯ ತಿಳಿದಿದ್ದ ಸಿಬ್ಬಂದಿ ಅದೇ ಚಿರತೆ ಓಡಾಡುತ್ತಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಸುಮಾರು 4 ವರ್ಷ ವಯಸ್ಸಿನ ಗಂಡು ಚಿರತೆ ಆರೋಗ್ಯವಾಗಿತ್ತು. ಆಕಸ್ಮಿಕವಾಗಿ ಉದ್ಯಾನವನದ ಕೇಜ್‌ನಲ್ಲಿ ಬಂಧಿಯಾಗಿತ್ತು. ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಮಂಗಳವಾರ ರಾತ್ರಿ ಉದ್ಯಾನವನದ ವೈದ್ಯಾಧಿಕಾರಿ ಉಮಾಶಂಕರ್‌ ನೇತೃತ್ವದಲ್ಲಿ ಅರಿವಳಿಕೆ ಚುಚ್ಚು ಮದ್ದು ನೀಡಿ ಕಾಡಿಗೆ ಬಿಡಲಾಗಿದೆ.
-ಗಣೇಶ್‌, ಬನ್ನೇರುಘಟ್ಟ ವಲಯ ಅರಣ್ಯಾಧಿಕಾರಿ 

* ಮಂಜುನಾಥ ಎನ್‌.ಬನ್ನೇರುಘಟ್ಟ

Advertisement

Udayavani is now on Telegram. Click here to join our channel and stay updated with the latest news.

Next