Advertisement

ಅರಿಶಿಣ, ಕುಂಕುಮದ ಪ್ರತೀಕವೇ ಧ್ವಜವಾಗಿರಲಿ

11:11 AM Jul 21, 2017 | |

ಬೆಂಗಳೂರು: ನಾಡಧ್ವಜ ವಿನ್ಯಾಸ ಮತ್ತು ಅದಕ್ಕೆ ಕಾನೂನು ಚೌಕಟ್ಟು ನೀಡಲು ಸರ್ಕಾರ ರಚಿಸಿರುವ ಸಮಿತಿಯನ್ನು ಕೂಡಲೇ ರದ್ದು ಮಾಡಬೇಕು. ಮ.ರಾಮಮೂರ್ತಿ ಅವರ ನೇತೃತ್ವದಲ್ಲಿ ರಚಿತವಾಗಿರುವ ಹಳದಿ, ಕೆಂಪು ಧ್ವಜವನ್ನೇ ಅಧಿಕೃತವೆಂದು ಘೋಷಿಸಬೇಕು ಎಂದು ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು. 

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಳದಿ, ಕೆಂಪು ಬಾವುಟ ಇರುವಾಗ ಇನ್ನೊಂದು ಬಾವುಟದ ಅವಶ್ಯಕತೆ ಇಲ್ಲ. ನೂತನ ಬಾವುಟ ರಚನೆಗೆ ಈಗ ಯಾಕೆ ಸರ್ಕಾರ ಚಿಂತನೆ ಮಾಡಿದೆಯೋ ಗೊತ್ತಿಲ್ಲ. ನೂತನ ಧ್ವಜ ವಿನ್ಯಾಸ ಸಮಿತಿಯಲ್ಲಿ ಯಾರು ಇದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.

ಸರ್ಕಾರ ಯಾವ ಬಾವುಟವನ್ನು ವಿನ್ಯಾಸ ಮಾಡಲು ಹೊರಟಿದೆ ಎಂದು ಪ್ರಶ್ನಿಸಿದ ಅವರು, ನಿಮ್ಮ ಬಾವುಟದ ಬಣ್ಣ ಏನು, ವಿನ್ಯಾಸ ಏನು, ಇತಿಹಾಸ ಏನು, ಎಂಬುದು ಮೊದಲು ತಿಳಿಸಿ. ಇದಕ್ಕೂ ಮೊದಲು ಆ ಸಮಿತಿ ಅಜೆಂಡಾ ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. 

ಸಮಿತಿಯಲ್ಲಿ ಯಾರ್ಯಾರನ್ನು ನೇಮಕ ಮಾಡಿದ್ದೀರಿ? ಯಾವ ಆಧಾರದ ಮೇಲೆ ಸದಸ್ಯರನ್ನು ನೇಮಕ ಮಾಡಲಾಗಿದೆ? ಸತತವಾಗಿ ಕಳೆದ 52 ವರ್ಷಗಳಿಂದ ಕನ್ನಡ ಪರವಾದ ಹೋರಾಟ ಮಾಡಿಕೊಂಡು ಬಂದಿದ್ದ  ಕನ್ನಡ ಸಂಘಟನೆಗಳನ್ನು ಕಡೆಗಣನೆ ಮಾಡಲಾಗಿದೆ. ಈಗಿರುವ ಧ್ವಜವನ್ನೇ ಉಳಿಸಿಕೊಳ್ಳಬೇಕು. ಅದರಲ್ಲಿ ಒಂದು ಗೆರೆ ಕೂಡ ಬದಲಾವಣೆ ಮಾಡುವ ಅಶ್ಯಕತೆ ಇಲ್ಲ. ಜನಮಾನಸದಲ್ಲಿ ಇರುವ ಹಳದಿ ಮತ್ತು ಕೆಂಪು ಬಾವುಟವನ್ನೇ ಉಳಿಸಿಕೊಳ್ಳಬೇಕು.

ಸರ್ಕಾರ ನೂತನ ಬಾವುಟ ರಚನೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು. ದೇಶವೊಂದೇ ಧ್ವಜವೊಂದೇ ಎಂದು ಚರ್ಚಿಸಿ ನಾಡಧ್ವಜವನ್ನು ವಿರೋಧಿಸಿರುತ್ತಿರುವ ಬಿಜೆಪಿಗೆ ಕನ್ನಡ ಬಾವುಟದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ನಾಡಿನ ಸಮಗ್ರತೆ, ಸೌಹಾರ್ದತೆಗೆ ಯಾರೂ ಕೂಡ ಅಡ್ಡಿ ಮಾಡಬಾರದು ಎಂದು ಎಚ್ಚರಿಸಿದರು. 

Advertisement

ಕನ್ನಡ ಪರ ಸಂಘಟನೆಗಳು ಜು.29ರಂದು ಬೆಳಗ್ಗೆ 11ಕ್ಕೆ ವುಡ್‌ಲ್ಯಾಂಡ್‌ ಹೋಟೆಲ್‌ನಲ್ಲಿ ಕನ್ನಡ ಬಾವುಟ ಉಳಿಸಿ ಸಮ್ಮೇಳನ ಹಮ್ಮಿಕೊಂಡಿವೆ. ಈ ಸಮ್ಮೇಳನದಲ್ಲಿ ಮುಂದಿನ ಹೋರಾಟ ರೂಪುರೇಷೆ ಕುರಿತು ಚರ್ಚೆ ನಡೆಯಲಿದೆ. ಬಳಿಕ ಬೆಂಗಳೂರಿನಲ್ಲಿ ಒಂದು ಲಕ್ಷ ಮಂದಿ ಕನ್ನಡ ಕಾರ್ಯಕರ್ತರು ಬಾವುಟ ಪ್ರದರ್ಶನ ಚಳವಳಿ ನಡೆಸಲಿದ್ದು, ಇಡೀ ರಾಜ್ಯಾದ್ಯಂತ ಧ್ವಜ ಪ್ರದರ್ಶನ ಹೋರಾಟ ಹಮ್ಮಿಕೊಳ್ಳಲಾಗುವುದು.
-ವಾಟಾಳ್‌ ನಾಗರಾಜ್‌, ಅಧ್ಯಕ್ಷ, ಕನ್ನಡ ಸಂಘಟನೆಗಳ ಒಕ್ಕೂಟ. 

Advertisement

Udayavani is now on Telegram. Click here to join our channel and stay updated with the latest news.

Next