ಸುಳ್ಯ: ನಗರಕ್ಕೆ ನೀರೊದಗಿಸುವ ನಾಗಪಟ್ಟಣ ಸೇತುವೆ ಬಳಿ ತಾತ್ಕಾಲಿಕ ಮರಳು ಕಟ್ಟದ ಮೊದಲ ಹಂತ ಪೂರ್ಣಗೊಂಡು, ನೀರು ಸಂಗ್ರಹಗೊಂಡಿದೆ.
ಸುಳ್ಯ ನಗರ ಪಂಚಾಯತ್ ನಾಲ್ಕು ಲಕ್ಷ ರೂ.ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಂಡಿದೆ. 50 ಕೆ.ಜಿ ಪ್ಲಾಸ್ಟಿಕ್ ಚೀಲದಲ್ಲಿ ಮರಳು ತುಂಬಿಸಿ ನದಿಯಲ್ಲಿ ಒಂದುವರೆ ಅಡಿಯಷ್ಟು ಎತ್ತರದಲ್ಲಿ ಜೋಡಿಸಲಾಗುತ್ತದೆ. ಮೊದಲ ಹಂತದ ಮರಳು ಚೀಲ ಇರಿಸಿದ್ದು, ಹೆಚ್ಚುವರಿ ನೀರು ಹೊರಭಾಗಕ್ಕೆ ಹರಿಯ ಬಿಡಲಾಗಿದೆ.
ಬೇಸಗೆಯ ಬಿಸಿ ಏರುತ್ತಿದ್ದಂತೆ ಮರಳಿನ ಕಟ್ಟದ ನೀರು ಇಳಿಮುಖ ಆಗುತ್ತದೆ. ಆಗ ಇನ್ನೊಂದು ಹಂತದ ಮರಳು ಚೀಲ ಇರಿಸಿ, ನೀರು ಸಂಗ್ರಹಿಸಲಾಗುತ್ತದೆ. ಕಟ್ಟದಿಂದ ಕೆಳಭಾಗಕ್ಕೆ ನೀರು ಹರಿಯುವುದನ್ನು ತಡೆ ಹಿಡಿಯಲಾಗುತ್ತದೆ. ಕೃಷಿ ಪಂಪ್‌ಸೆಟ್ ಬಳಕೆಗೂ ಕಡಿವಾಣ ಹಾಕಲಾಗುತ್ತದೆ.
ನಗರಕ್ಕೆ ನೀರು
ವರ್ಷದ 365 ದಿನವೂ 24 ತಾಸು ಇಲ್ಲಿಂದ ನಗರಕ್ಕೆ ನೀರು ಪೂರೈಸಲಾಗುತ್ತದೆ. ಆದರೆ ಬೇಸಗೆ ಕಾಲದಲ್ಲಿ ಇದರ ಪ್ರಮಾಣ ಹೆಚ್ಚು. ಕಲ್ಲುಮಟ್ಲು ಪಂಪ್‌ಹೌಸ್ ಬಳಿಯಲ್ಲಿ 50 ಎಚ್‌ಪಿಯ 1 ಮತ್ತು 45 ಎಚ್‌ಪಿಯ 2 ಪಂಪ್‌ಗ್ಳಿದ್ದು, ಆ ಮೂಲಕ ನೀರನ್ನು ಸಂಗ್ರಹಿಸಿ ಪಂಪ್‌ಹೌಸ್‌ನಲ್ಲಿರುವ ಬಾವಿಗೆ, ಅಲ್ಲಿಂದ ಅಣತಿ ದೂರದಲ್ಲಿರುವ ಶುದ್ಧಿಕರಣ ಘಟಕಕ್ಕೆ ಪೂರೈಕೆಯಾಗುತ್ತದೆ.
ಅನಂತರ ಕಲ್ಲುಮಟ್ಲು ನೀರು ಶುದ್ಧೀಕರಣ ಘಟಕದ ಬಳಿ ಇರುವ 1 ಲಕ್ಷ ಗ್ಯಾಲನ್ ಮತ್ತು 50 ಸಾವಿರ ಗ್ಯಾಲನ್ ಟ್ಯಾಂಕಿ ಮೂಲಕ ನಗರಕ್ಕೆ ನೀರು ಹರಿದರೆ, ಇನ್ನೊಂದು ಪೈಪು ಮೂಲಕ ಕುರುಂಜಿಗುಡ್ಡೆಯ ಟ್ಯಾಂಕಿಗೆ ನೀರು ಹರಿಸಲಾಗುತ್ತದೆ. ಅಲ್ಲಿಂದ ನಗರದ ಮನೆ ಹಾಗೂ ಗೃಹೇತರ ಕಟ್ಟಡಗಳಿಗೆ ನಳ್ಳಿ ಸಂಪರ್ಕದ ಮುಖಾಂತರ ನೀರು ಹರಿಸಲಾಗುತ್ತದೆ. ಈಗ 3,940 ನಳ್ಳಿ ಸಂಪರ್ಕ ಇದ್ದು, ನದಿ ನೀರಿನ ಜತೆಗೆ 37 ಕೊಳವೆಬಾವಿಯನ್ನು ಬಳಸಲಾಗುತ್ತಿದೆ. ಮರಳು ಕಟ್ಟದಲ್ಲಿ ನೀರು ಸಂಗ್ರಹಗೊಂಡಿರುವುದು.