Advertisement

ಮೊದಲ ಮಳೆಗೇ ಕುಲಗೆಟ್ಟ ರಸ್ತೆಗಳು,ಅಲ್ಲಲ್ಲಿ ಹೊಂಡ: ತರಾತುರಿಯ ಕಾಮಗಾರಿ ಆರೋಪ

02:29 PM Jun 25, 2020 | mahesh |

ಉಡುಪಿ: ಸುಮಾರು 5 ತಿಂಗಳ ಹಿಂದೆ ನಿರ್ಮಿಸಲಾದ ನಗರದ ರಸ್ತೆಗಳು ಒಂದೆರಡು ಮಳೆಗೆ ನಿಜ ಸ್ವರೂಪವನ್ನು ತೋರಿಸಿದ್ದು, ಅಲ್ಲಲ್ಲಿ ಹೊಂಡಗಳು ಉಂಟಾಗಿವೆ.

Advertisement

40 ಲ.ರೂ. ಒಳಚರಂಡಿ ಕಾಮಗಾರಿ
ನಗರಸಭೆಯು 2019ರಲ್ಲಿ ಸುಮಾರು 40 ಲ. ರೂ. ವೆಚ್ಚದ ಒಳಚರಂಡಿ ದುರಸ್ತಿ ಕಾರ್ಯಕ್ಕೆ ಮುಂದಾಗಿತ್ತು. ವರ್ಷದ ಕೊನೆಯಲ್ಲಿ ಗುತ್ತಿಗೆದಾರನಿಗೆ ವರ್ಕ್‌ ಆರ್ಡರ್‌ ನೀಡಿದ್ದು, ಅವರು ವಿಳಂಬವಾಗಿ ಕಾಮಗಾರಿ ಕೈಗೆತ್ತಿಕೊಂಡರು ಎನ್ನಲಾಗಿದೆ. ಇದರಿಂದಾಗಿ ಜನವರಿಯಲ್ಲಿ ಪರ್ಯಾಯ ಉತ್ಸವ ಸಮೀಪಿಸಿದರೂ ಕಿನ್ನಿಮೂಲ್ಕಿ ಹಾಗೂ ಗುಂಡಿಬೈಲಿನ ರಸ್ತೆಯಲ್ಲಿನ 40 ಲ.ರೂ. ವೆಚ್ಚದ ಒಳಚರಂಡಿ ಕಾಮಗಾರಿ ಮುಗಿದಿರಲಿಲ್ಲ. ಪರ್ಯಾಯ ಸಮೀಪಿಸುತ್ತಿದ್ದಂತೆ ತರಾತುರಿಯಲ್ಲಿ ಪ್ರಾರಂಭವಾಗಿತ್ತು.

2.ಕೋ.ರೂ. ಕಾಮಗಾರಿ
ಪರ್ಯಾಯ ಪ್ರಯುಕ್ತ ಸುಮಾರು 2 ಕೋ.ರೂ. ವೆಚ್ಚದಲ್ಲಿ ನಗರದ ಎಲ್ಲ ರಸ್ತೆಗಳ ಡಾಮರು ಕಾಮಗಾರಿಗೆ ಟೆಂಡರ್‌ ಪಾಸಾಗಿತ್ತು. ಈ ಕಾಮಗಾರಿ ಪರ್ಯಾಯ ಪೂರ್ವದಲ್ಲಿ ಮುಗಿಸಬೇಕಾಗಿತ್ತು. ಇದೇ ಸಂದರ್ಭದಲ್ಲಿ ಕಿನ್ನಿಮೂಲ್ಕಿ ಹಾಗೂ ಗುಂಡಿಬೈಲು ರಸ್ತೆಯ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿತ್ತು. ಡಾಮರು ಕಾಮಗಾರಿ ಜನವರಿ ಮೊದಲ ವಾರದಲ್ಲಿ ಮುಗಿಯಬೇಕಾಗಿರುವುದರಿಂದ ಒಳಚರಂಡಿ ಗುತ್ತಿಗೆದಾರ ಗಡಿಬಿಡಿಯಲ್ಲಿ ಒಳಚರಂಡಿ ಕಾಮಗಾರಿ ಮುಗಿಸಿ ಜ.18ರೊಳಗೆ ಕಾಮಗಾರಿ ಪೂರ್ಣಗೊಳಿಸಿದರು ಎನ್ನಲಾಗಿದೆ. ಇದರಿಂದಾಗಿ ಒಂದೇ ಮಳೆಗೆ ರಸ್ತೆಗಳು ಹಾಳಾಗಿವೆ.

ಕನಿಷ್ಠ ಎರಡು ತಿಂಗಳು ಬೇಕು
ಯಾವುದೇ ಒಳಚರಂಡಿ ಕಾಮಗಾರಿ ಮುಗಿಸಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಇಲ್ಲಿ ತುರ್ತಾಗಿ ಡಾಮರು ಕಾಮಗಾರಿ ಮಾಡಿದ್ದಾರೆ. ಇದರಿಂದಾಗಿ ಕಿನ್ನಿಮೂಲ್ಕಿ ಹಾಗೂ ಗುಂಡಿಬೈಲು ರಸ್ತೆಯ ಒಳಚರಂಡಿ ಕಾಮಗಾರಿ ಭಾಗ ಸಂಪೂರ್ಣ ಬಿರುಕು ಬಿಟ್ಟು ಕುಸಿದಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರೂ ಈ ಬಗ್ಗೆ ದನಿ ಎತ್ತಿದ್ದಾರೆ.

ಅಪಾಯ ಆಹ್ವಾನ
ಕಿನ್ನಿಮೂಲ್ಕಿ ಹಾಗೂ ದೊಡ್ಡಣಗುಡ್ಡೆಯ ಪ್ರಮುಖ ರಸ್ತೆಗಳು ಸಿಂಕ್‌ ಆಗಿವೆ. ಲಘು ವಾಹನಗಳಾದ ಕಾರು, ರಿûಾ ಇದರ ಮೇಲೆ ಚಲಿಸಿದರೆ ಒಂದು ಬದಿಗೆ ವಾಲಿದಂತಾಗುತ್ತದೆ. ವೇಗದಲ್ಲಿರುವ ವಾಹನ ಪಲ್ಟಿಯಾಗುವ ಸಾಧ್ಯತೆ ಇದೆ. ಸದ್ಯ ಸಂಚಾರಕ್ಕೆ ಅಪಾಯ ಆಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿ, ಬ್ಯಾರಿಕೇಡ್‌ ಆಳವಡಿಸಲಾಗಿದೆ.

Advertisement

ಭದ್ರತಾ ಠೇವಣಿ ಇದೆ
ಕಾಮಗಾರಿಯನ್ನು ಗುತ್ತಿಗೆ ವಹಿಸುವವರಿಂದ ಠೇವಣಿಯನ್ನು ಇರಿಸಿಕೊಳ್ಳಲಾಗುತ್ತದೆ. ಅದರಂತೆ 40 ಲ.ರೂ. ಮೊತ್ತದ ಒಳಚರಂಡಿ ಕಾಮಗಾರಿಗೆ 2 ಲ.ರೂ. ಹಾಗೂ 2 ಕೋ.ರೂ. ವೆಚ್ಚದ ಡಾಮರೀಕರಣ ಕಾಮಗಾರಿಗೆ 10 ಲ. ರೂ. ಭದ್ರತಾ ಠೇವಣಿಯು ಈಗಾಗಲೇ ನಗರಸಭೆಯ ಕೈಯಲ್ಲಿದೆ. ಕಾಮಗಾರಿ ಸರಿಮಾಡದೆ ಇದ್ದರೆ ಠೇವಣಿಯನ್ನು ನಗರಸಭೆ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ದುರಸ್ತಿಗೆ ಸೂಚನೆ
ಕಿನ್ನಿಮೂಲ್ಕಿ ಮತ್ತು ಗುಂಡಿಬೈಲು ರಸ್ತೆ ದುರಸ್ತಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಪ್ರಸ್ತುತ ಸಂಚಾರಕ್ಕೆ ಅಪಾಯ ಆಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.
-ಮೋಹನ್‌ ರಾಜ್‌, ಎಇಇ, ನಗರಸಭೆ.

Advertisement

Udayavani is now on Telegram. Click here to join our channel and stay updated with the latest news.

Next