Advertisement
ಜಲ ಸಂರಕ್ಷಣೆಯ ಪಾರಂಪರಿಕ ಜ್ಞಾನದ ಬಗ್ಗೆ ಮಾತಾಡುವಾಗೆಲ್ಲ ಪ್ರಶ್ನೆಗಳ ಬಾಣ ಎಸೆಯಲ್ಪಡುತ್ತದೆ. ಹಿಂದೆ ಸಾಕಷ್ಟು ಕಾಡಿತ್ತು, ನೀರಿನ ಸಮಸ್ಯೆಯಿರಲಿಲ್ಲ, ಜಲ ಸಂರಕ್ಷಣೆಯ ಅಗತ್ಯವಿರಲಿಲ್ಲ. ಹೀಗಾಗಿ ಪಾರಂಪರಿಕ ಜ್ಞಾನದ ಪ್ರಶ್ನೆ ಉದ್ಭವಿಸುವುದಿಲ್ಲವೆಂದು ವಾದಿಸುವವರಿದ್ದಾರೆ. ಅಷ್ಟಕ್ಕೂ ಕಾಡಿಗೂ, ನೀರಿಗೂ ಸಂಬಂಧವಿರುವುದಾದರೆ ಅರಣ್ಯ ದಟ್ಟವಾಗಿದ್ದ ಕಾಲದಲ್ಲಿ ನೀರಿನ ಸಮಸ್ಯೆ ಇರಬಾರದಲ್ಲ? ಮಾರ್ಮಿಕ ಪ್ರಶ್ನೆಗಳು ಎದುರಾಗುತ್ತವೆ. ವಿಶೇಷವೆಂದರೆ, ಕರ್ನಾಟಕದ ಪುರಾತತ್ವ ನೆಲೆಗಳ ಕೆರೆ ದಾಖಲೆ ಹುಡುಕಿದರೆ ಮಧ್ಯ ಕರ್ನಾಟಕ, ಮಲೆನಾಡಿನ ಸೆರಗಿನಲ್ಲಿ ಶಾಸನಾಧಾರ ಇರುವ ಪುರಾತನ ಕೆರೆಗಳು ಪತ್ತೆಯಾಗಿವೆ.
Related Articles
Advertisement
ಕದಂಬರು ಕಟ್ಟಿಸಿದ ಎರಡನೆಯ ಕೆರೆ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ತಾಳಗುಂದದ ಪ್ರಣವೇಶ್ವರ ಗುಡಿಯ ಪಕ್ಕದಲ್ಲಿದೆ. ಇಲ್ಲಿನ ಕಾಕುತ್ಸವರ್ಮನ (ಕ್ರಿ.ಶ. 430-450)ಶಾಸನ ದೇಗುಲ ನಿರ್ಮಿಸಿ ಕೆರೆ ಕಟ್ಟಿದ್ದನ್ನು ಉಲ್ಲೇಖೀಸುತ್ತದೆ. ಈ ದೇಗುಲದಿಂದ ಏಳು ಕಿಲೋಮೀಟರ್ ದೂರದ ಮಳವಳ್ಳಿಯಲ್ಲಿ ಸಿಕ್ಕ ಶಾಸನದ ಪ್ರಕಾರ, ಈ ಪ್ರದೇಶವನ್ನು ಶಾತವಾಹನರು ಒಂದು ಮತ್ತು ಎರಡನೇ ಶತಮಾನದಲ್ಲಿ ಆಳುತ್ತಿದ್ದರು. ರಾಜ್ಯದ ಮೊದಲ ದೇಗುಲವಾದ ಇಲ್ಲಿ, ಆ ಕಾಲದಲ್ಲಿ ಕೆರೆಯೂ ಇತ್ತೆಂದರೆ ಇದು ರಾಜ್ಯದ ಅತ್ಯಂತ ಪ್ರಾಚೀನ ಕೆರೆ ಎನ್ನಬಹುದಾಗಿದೆ.
ಕರ್ನಾಟಕದ ಆಳರಸರ ಚರಿತ್ರೆಯಲ್ಲಿ ಶಾತವಾಹನರ ನಂತರ ದಖನ್ನಿನಲ್ಲಿ (ಉತ್ತರ ಕರ್ನಾಟಕ) ಕದಂಬರು ಬಂದವರು. ದಕ್ಷಿಣ ಕರ್ನಾಟಕದಲ್ಲಿ ಗಂಗರು ಕ್ರಿ.ಶ. ನಾಲ್ಕರಿಂದ ಆರನೇ ಶತಮಾನದವರೆಗೆ ಆಳಿದವರು. ಇದೇ ಕಾಲದಲ್ಲಿ ಬಾದಾಮಿಯ ಚಾಲುಕ್ಯರು ಪ್ರಬಲ ದೊರೆಗಳಾದವರು. ಇವರೆಲ್ಲ ಕೆರೆ ಕಾಯಕ ಮಾಡಿದ್ದು ಗಮನಿಸಬೇಕಾದ ಸಂಗತಿ. ಉತ್ತರಕನ್ನಡದ ಬನವಾಸಿಯ ಮಧುಕೇಶ್ವರ ದೇಗುಲದ ಒಂದು ಶಾಸನ, ಚುಟುರಾಜ ವಿಷ್ಣುಕಡ ಚುಟುಕಾನಂದ ಶಾತಕರ್ಣಿಯದು. ಮಹಾರಾಜನ ಕುಮಾರಿ(ಹೆಸರು ಗೊತ್ತಿಲ್ಲ), ಯುವರಾಜ ಶಿವಸ್ಕಂದ ನಾಗಶ್ರೀಯ ಪೂಜ್ಯಮಾತೆ ಒಂದು ನಾಗವನ್ನು ಕೆತ್ತಿಸಿದಳು, ಒಂದು ಕೆರೆಯನ್ನು ತೋಡಿಸಿದಳು, ಒಂದು ಹಾರವನ್ನು ಕಟ್ಟಸಿದಳು. ಅಮಾತ್ಯ ಸ್ಕಂದಸತಿ ಈ ಕಾಮಗಾರಿಗಳ ಮೇಲ್ವಿಚಾರಕನಾಗಿದ್ದನು. ಆದರೆ ಈ ಕೆರೆ ಎಲ್ಲಿತ್ತೆಂದು ಪತ್ತೆಯಾಗಿಲ್ಲ.
ಕದಂಬರ ಕಾಲದ ಮೂರನೆಯ ಕೆರೆ ಗುಡ್ಡ ತಟಾಕ, ರಾಜಾ ರವಿವರ್ಮನ (ಕ್ರಿ.ಶ. 485-519) ಕಾಲದಲ್ಲಿ ಕಟ್ಟಿಸಿದ್ದು. ಇದು ಬನವಾಸಿ ಸನಿಹದಲ್ಲಿದೆ. ಗುಡ್ಡತಟಾಕದಿಂದಾಗಿ ಅಲ್ಲಿನ ಊರಿಗೆ ಗುಡ್ನಾಪುರ ಹೆಸರು ಬಂದಿದೆ. ಚಿತ್ರದುರ್ಗ, ತಾಳಗುಂದ, ಗುಡ್ನಾಪುರದ ಕದಂಬರ ಕಾಲದ ಮೂರು ಕೆರೆಗಳೂ ಇಂದಿಗೂ ಬಳಕೆಯಲ್ಲಿವೆ. ಕಣಿವೆಯ ನೆಲೆಯಲ್ಲಿ ಹರಿಯುವ ನೀರಿಗೆ ಅಡ್ಡಲಾಗಿ ಮಣ್ಣಿನ ಒಡ್ಡು ಕಟ್ಟಿದ ರಚನೆಗಳಿಗೆ ಈಗ ಕಲ್ಲು ಕಟ್ಟಲಾಗಿದೆ. ಪುರಾತನ ಕೆರೆಗಳು 1500 ವರ್ಷಗಳಿಂದಲೂ ನೀರು ನೀಡಲು ಶಕ್ತವಾಗಿರುವುದು ಕೆರೆಗಳ ಮಹತ್ವಕ್ಕೆ ನಿದರ್ಶನವಾಗಿದೆ.
ನೀರು ಕಟ್ಟಿ ಊರು ಕಟ್ಟಿದರು: ಕ್ರಿ.ಶ. 1853-54ರ ವರದಿಯ ಪ್ರಕಾರ 27,269 ಚದರ ಮೈಲಿ ಕ್ಷೇತ್ರದ ಮೈಸೂರು ರಾಜ್ಯದಲ್ಲಿ 36,265 ಕೆರೆಗಳಿದ್ದವು. ಅಂದರೆ “ಮೈಲಿಗೊಂದು ಕೆರೆ’ ನಿರ್ಮಾಣವಾಗಿತ್ತು. ಇಂದಿಗೂ ರಾಜ್ಯದ ಹಳೆ ಮೈಸೂರು ಸೀಮೆಯಲ್ಲಿದ್ದಷ್ಟು ಕೆರೆಗಳು ಉಳಿದೆಡೆಯಿಲ್ಲ. ಎರೆಮಣ್ಣಿನ ನೆಲೆ ಬಹುತೇಕವಾಗಿ ಮಳೆ ಆಶ್ರಿತವಾಗಿ ಬೆಳೆದು ಬಂದಿದ್ದರಿಂದ ಶತಮಾನಗಳ ಹಿಂದೆಯೂ ಕೆರೆಗಳ ಸಂಖ್ಯೆ ಕಡಿಮೆಯಿದೆ. ಇದಕ್ಕೆ, ಈ ಪ್ರದೇಶವನ್ನಾಳಿದ ರಾಜರ ಆಸಕ್ತಿ, ಮಣ್ಣಿನ ಅನುಕೂಲತೆ ಕಾರಣವಾಗಿದೆ. ನೀರು ಕಟ್ಟಿ ಊರು ಕಟ್ಟುವುದು ಬದುಕಿನ ಕಲೆಯಾಯಿತು.
ಮಳೆ ನೀರನ್ನು ಗುಡ್ಡದ ಕೆರೆಯಲ್ಲಿ ಹಿಡಿಯುವ ಗುಡ್ಡತಟಾಕ, ನದಿ ನೀರನ್ನು ಕೆರೆಗೆ ಜೋಡಿಸುವ ತಟಾಕ ನಿರ್ಮಾಣ ಪರಿಣಿತಿ ಬೆಳೆಯಿತು. ಪ್ರವಾಹ ತಡೆಯುವ ಸೂತ್ರವಾಗಿ, ಕೃಷಿಗೆ ನೆರವಾಗುವ ತಂತ್ರವಾಗಿ ಕೆರೆ ನಿರ್ಮಾಣದಲ್ಲಿ ರಾಜ್ಯವಾಳಿದ ವಿವಿಧ ಅರಸು ಮನೆತನಗಳು ಕಾರ್ಯ ನಿರ್ವಹಿಸಿದವು. ನೀರಿನ ಅನುಕೂಲತೆಯಿಂದ ಕೃಷಿ ಅಭ್ಯುದಯವಾಗಿ ರಾಜ್ಯದ ಆದಾಯ ಹೆಚ್ಚಲು ಸಾಧ್ಯವಾಗಿದ್ದು, ಕೆರೆ ನಿರ್ಮಾಣ ಆಡಳಿತದ ಮುಖ್ಯ ಭಾಗವಾಯಿತು. ಬ್ರಿಟಿಷರ ಆಗಮನಕ್ಕಿಂತ ಪೂರ್ವದಲ್ಲಿ ಸಣ್ಣ ನೀರಾವರಿ ಯೋಜನೆಗಳು, ನಿರ್ವಹಣೆಯ ಅನುಭವ ದೊರಕಿತ್ತು. ಕೆರೆಗೆ ಅಗತ್ಯವಾದ ಎಲ್ಲ ಪರಿಣಿತರು ಸುತ್ತಲಿನ ಸಮುದಾಯದಲ್ಲಿದ್ದರಿಂದ ಸಂರಕ್ಷಣೆ ಸುಸೂತ್ರವಾಯ್ತು. ಹೀಗಾಗಿ ನಮ್ಮ ರಾಜ್ಯದ ಕೆರೆ ನೀರಾವರಿ, ವಿಶ್ವದ ಗಮನ ಸೆಳೆಯುವ ಮಟ್ಟಕ್ಕೇರಿತು.
* ಶಿವಾನಂದ ಕಳವೆ