Advertisement

ಶಿರಾ ತಯಾರಿಸಿದ ಮೊದಲ ದಿನಗಳು

06:10 AM Sep 08, 2017 | |

ಐಷಾರಾಮಿ ಜೀವನಕ್ಕೆ ಹೊಂದಿಕೊಂಡು ಬದುಕುವವರಿಗೆ ಸೊಸೆಯನ್ನು ಕೆಲಸ ಬಿಡಲು ಹೇಳಲು ಧೈರ್ಯವಿರುವುದಿಲ್ಲ. ಕೆಲಸಕ್ಕೆ ಹೋಗುವ ಹುಡುಗಿಯನ್ನೇ ಸೊಸೆಯನ್ನಾಗಿ ಆಯ್ಕೆಮಾಡಿಕೊಂಡವರಿಗೆ ಈಗ ಬದುಕನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಮಕ್ಕಳ ಆಶ್ರಯದಲ್ಲೇ ಬದುಕಬೇಕಾದ ಅನಿವಾರ್ಯತೆಯಿಂದ ಅನ್ನಲೂ ಆಗದೆ ಅನುಭವಿಸಲೂ ಆಗದೆ ಒಳಗೊಳಗೇ ಕೊರಗುತ್ತಿರುತ್ತಾರೆ.

Advertisement

ನನ್ನ ಹರೆಯದ ದಿನಗಳವು. ಹಾಲುಂಡ ತವರಿನಲ್ಲಿದ್ದಾಗ ಮನೆ ಒಪ್ಪ ಓರಣ ಮಾಡುವುದು, ಗಿಡ ನೆಡುವುದು, ಹೊಸ ಹೊಸ ಕಲಿಕೆ- ಚಿತ್ರಕಲೆ, ಹಾಡಿನ ಗುಂಗು… ಇದರಲ್ಲೇ ಹೆಚ್ಚಿನ ಆಸಕ್ತಿ. ಇನ್ನು ಗೆಳತಿಯೊಡನೆ ಹರಟುವ ನೆಚ್ಚಿನ ಕಾಯಕಕ್ಕೆ ಹೊತ್ತೂಗೊತ್ತೂ ಇರಲಿಲ್ಲ. ಇಂತಹುದೇ ವಿಷಯ ಬೇಕೆಂದೂ ಇರಲಿಲ್ಲ. ವಿಷಯವೇ ಇಲ್ಲದಿದ್ದರೂ ತಾಸುಗಟ್ಟಲೆ ಹರಟುವ ದಿವ್ಯ ಕಲೆ ಸಿದ್ಧಿಸಿತ್ತು. ಮುಸಿನಗೆ, ಕೀಟಲೆ, ಒಂದಷ್ಟು ಗಾಸಿಪ್ಪು, ಹಗಲುಗನಸಿನಲ್ಲಿ ವ್ಯಸ್ತರಾದೆವೆಂದರೆ ಕಾಲದ ಪರಿವೆ ಇರುತ್ತಿರಲಿಲ್ಲ. ಆದರೆ ಅಡುಗೆ ಮನೆಯ ಕೆಲಸವೆಂದರೆ ಮಾತ್ರ ವಿಚಿತ್ರ ಅಲರ್ಜಿ. ಉದರದ ಹಸಿವು ನೀಗಿಸಲು, ರುಚಿಕಟ್ಟಾದ ತಿನಿಸು- ಬಾಯಿ ಚಪಲಕ್ಕಷ್ಟೇ ಅಡುಗೆಮನೆ ಬಲು ಇಷ್ಟದ ಸ್ಥಳವಾಗಿತ್ತು. ಪದವಿಯ ಕಲಿಕೆಯಲ್ಲಿದ್ದಾಗ ಅಕ್ಕನ ಮದುವೆಯಾದ್ದರಿಂದ ಲಂಗುಲಗಾಮಿಲ್ಲದ ಕುದುರೆಯಂತಿದ್ದ ನನ್ನ ಸ್ವಾತಂತ್ರ್ಯದ ಅಡಿಪಾಯಕ್ಕೆ ಧಕ್ಕೆಯುಂಟಾಗಿ ಡೋಲಾಯಮಾನಗೊಂಡಿತ್ತು. ದಿನ ಬೆಳಗಾದರೆ ಅಮ್ಮನ ವರಾತ ಶುರು.  “”ಸ್ವಲ್ಪ ಅಡುಗೆಮನೆ ಕೆಲಸಕ್ಕೆ ಕೈ ಹಾಕು, ನಂಗೂ ಸಹಾಯ ಆಗು¤”, “”ನೀನೂ ಕಲ್ತ$Rಂಡ್ರೆ ಒಳ್ಳೇದೇಯ. ಗಂಡನ್‌ ಮನೇಲಿ ನನ್‌ ಹೆಸ್ರು ತೊಳುÕದು ತಪ್ಪು ಮಾರಾಯ್ತಿ…”, “”ಕೇಳಿಸ್ತನ್ರೀ, ನೀವಾದ್ರೂ ಕೂಸೀಗ್‌ ಬಗೇಲಿ ಬುದ್ಧಿ ಹೇಳಿÅ” ಅಪ್ಪ ಮುದ್ದಿನ ಮಗಳಿಗೆ ಏನನ್ನೂ ಹೇಳಲಾರರು ಎಂದು ಗೊತ್ತಿದ್ದರೂ ಅಪ್ಪನ ಸಹಾಯ ಆಗಾಗ ಕೋರುತ್ತ ನನ್ನನ್ನು ಬಗ್ಗಿಸಲು ಯತ್ನಿಸುವ ಅಮ್ಮನದ್ದು ವ್ಯರ್ಥ ಪ್ರಯತ್ನ . 

ಕಲಿಯುವುದು ಮುಗಿಯುವಷ್ಟರಲ್ಲಿ ನನ್ನ ಮದುವೆ ನಿಕ್ಕಿಯಾಗಿತ್ತು. ಇದೀಗ ಅಮ್ಮನ ವರಾತಕ್ಕೆ ಸಿಂಹಬಲ. ನಾನೋ ಜಗಮೊಂಡಿ. ಬಡಪೆಟ್ಟಿಗೆ ಬಗ್ಗುವವಳಲ್ಲ. “”ನೋಡು ಆಯಿ, ಪ್ರತಿಯೊಬ್ಬರ ಮನೆ ಅಡೆ ಬೇರೇನೇ ಇರ್ತು. ಒಂದ್ವೇಳೆ ನಾ ಇಲ್ಲೀದು ಕಲೆ¤ ಹೇಳೇ ಇಟ್ಕೊ. ಗಂಡನ್‌ ಮನೇಲಿ ಈ ಅಡುಗೇನೇ ಮಾಡ್ತೆ- ಅವ್ರಿಗೆ ನಾ ಮಾಡೂ ಅಡೆ ಸೇರೆಗಿದ್ರೆ? ನಂಗೆ ಅಡೆ ಮಾಡುಲೆ ಗೊತ್ತಿರೂದ್ರಿಂದ ನಾ ಅವ್‌ ಮನೆ ಅಡೆ ಎಂತಕ್‌ ಕಲ್ತಳ್ಳಿ ? ಆಗ್‌ ನಿಂಗೇ ಕೆಟ್‌ ಹೆಸ್ರು… ಈಗ ನಾ ಅಡೆ  ಅಂತಂದ್ರೆ ಅವ್ರ ಮನೆ ಅಡೆನೇ ಕಲ್ಯೂಲ್‌ ಆಗು¤. ಆಗ ಯಾವ ಒಣ ಉಸಾಬ್ರಿನೂ ಇರ್ತಿಲ್ಲೆ.. ಹೌದೋ ಅಲೊª ?”

ನನ್ನ ಈ ತರ್ಕಕ್ಕೆ ಅಮ್ಮ ಹಣೆ ಚಚ್ಚಿಕೊಂಡಿದ್ದರು. ಅಂತೂ ಅಡುಗೆ ಕಲಿಯದೇ ಗಂಡನ ಮನೆಯಲ್ಲಿ ಭಂಡಧೈರ್ಯದಿಂದ ಬಲಗಾಲಿರಿಸಿದ್ದೆ. ಕಡಲೇಬೇಳೆ, ಉದ್ದಿನಬೇಳೆ ಮುಂತಾದ ಬೇಳೆ ಕಾಳುಗಳು ಹೇಗಿರುತ್ತವೆ ಎಂಬುದೂ ಗೊತ್ತಿರದ ನಾನು ಗೋಕಾಕಿನಲ್ಲಿ ಅತ್ತೆಯವರೊಟ್ಟಿಗಿದ್ದು ಒಂದು ತಿಂಗಳೆನ್ನುವಷ್ಟರಲ್ಲಿ ದಿನದ ಖರ್ಚಿಗಾಗುವಷ್ಟು ಅಡುಗೆ ಮಾಡಲು ಕಲಿತಿದ್ದೆ.  

ನಂತರ ಹುಬ್ಬಳ್ಳಿಯಲ್ಲಿ ಮನೆ ಮಾಡಿದಾಗ ಉತ್ಸಾಹದಿಂದಲೇ ಸಂಸಾರ ಹೂಡಿ ಇದ್ದ ಬೆರಳೆಣಿಕೆಯಷ್ಟು ಸಾಮಾನುಗಳನ್ನು ನಾವಿಬ್ಬರೇ ಜೋಡಿಸಿದ್ದೆವು. ಮಾರ್ಗದರ್ಶನ ನೀಡಲು ಹಿರಿಯರಾರೂ ಬಂದಿರಲಿಲ್ಲ. ಹೊಸ ಸಂಸಾರ ಸಿಹಿಯಿಂದ ಶುಭಾರಂಭ ಮಾಡಬೇಕೆಂಬುದು ಯಜಮಾನರ ಆಶಯ. “ಶಿರಾ’ ಮಾಡುವಂತೆ ಸೂಚಿಸಿದ್ದರು. ನನಗೋ ಅದನ್ನು ಹಾಯಾಗಿ ಮೆದ್ದು ಗೊತ್ತಿತ್ತೇ ಹೊರತು ಖುದ್ದಾಗಿ ಮಾಡಿ ಗೊತ್ತಿರಲಿಲ್ಲ .

Advertisement

“”ಅದೆಂತಕ್ಕೆ ಹಂಗ್‌ ಹೆದರ್ತೆ ಮಾರಾಯ್ತಿ… ಶಿರಾ ಮಾಡೂದು ರಾಶೀ… ಸಸಾರ. ನಾನು “ಮೆಸ್‌’ನಲ್ಲಿದ್ದಾಗ ಅಮ್ಮನ್ಹತ್ರ ಕೇಳ್ಕಂಡ್‌ ಬಂದು ಗೋಪಾಲ ಭಟ್ಟರ ಹತ್ತಿರ ಹೇಳಿ ಮಾಡಿಸುತ್ತಿದ್ದೆ. ಎಷ್ಟ್ ಫೈನ್‌ ಆಗ್ತಿತ್ತು ಅಂದ್ರೆ ಹೇಳೂಲ್‌ ಸಾಧ್ಯ ಇದ್ದೆ . ಇಲ್ಲಿ ಕಿವಿಮಾತು ಎಂತಾ ಅಂದ್ರೆ ಶಿರಾ ಮಾಡುವಾಗ ಬಿಟ್ಟೂ ಬಿಡದೇ ಕೈಯಾಡಿಸವು ಅಂದ್ರೆ ರುಚಿ ಜಾಸ್ತಿ… ನಾ ನಿಂಗ್‌ ಎಲ್ಲಾ ಹೇಳ್ಕೊಡ್ತೆ… ಕಾಳಜಿ ಮಾಡಡ” ಎಂದು ಆಶ್ವಾಸನೆಯಿತ್ತಿದ್ದರು. ಅವರ ಮಾರ್ಗದರ್ಶನದಡಿ ರವೇ ಹುರಿದು ತುಪ್ಪಸುರಿದು ಹಾಲುಹಾಕಿ ಬೇಯಿಸಿ ಅವರೇ ಹೇಳಿದ ಅಳತೆಯಲ್ಲಿ ಸಕ್ಕರೆ ಬೆರೆಸಿ ಅತಿಯಾಗಿ ಗೊಟಾಯಿಸಿದ್ದರ ಫ‌ಲಶ್ರುತಿ ಅಂತೂ ಇಂತೂ ಘಮಘಮಿಸುವ “ಶಿರಾ’ ತಯಾರಾಗಿತ್ತು. ದೇವರ ಮುಂದಿಟ್ಟು ನಮಸ್ಕರಿಸಿ ತಿನ್ನುವ ತವಕ ಇಬ್ಬರದ್ದೂ. ಹಸ್ತ ಹೊಂಡ ಮಾಡಿ ಪ್ರಸಾದದಂತೆ ಭಯಭಕ್ತಿಯಿಂದ ಸ್ವೀಕರಿಸಿದೆ. ರುಚಿಯೋ… ವಿಪರೀತ ಅಂದರೆ ವಿಪರೀತ ಸಿಹಿ, ಮಿತಿಮೀರಿ ಗೊಟಾಯಿಸಿದ್ದರ ಪರಿಣಾಮವೋ ಏನೋ ಬಣ್ಣ  ಕಂದುಬಣ್ಣಕ್ಕೆ ತಿರುಗಿ ಲೇಹ್ಯದಂತಾಗಿತ್ತು ! ಮೊದಲೇ ಸಿಹಿ ಎಂದರೆ ಮಾರುದೂರ ಹಾರುತ್ತಿದ್ದ ನಾನು ಆ ಅತಿಮಧುರ ಸ್ವಯಂಪಾಕವನ್ನು ಬಿಲ್ಕುಲ್‌ ತಿನ್ನಲೇ ಇಲ್ಲ. ಆದರಿವರು ಹೊಸಹೆಂಡತಿಯನ್ನು ಮೆಚ್ಚಿಸಲೆಂದೇ ಇರಬಹುದು ಮರುಮಾತಿಲ್ಲದೇ ಚಪ್ಪರಿಸಿಕೊಂಡು ಹೊಗಳಿಕೆಯ ಪಕ್ಕವಾದ್ಯದೊಡನೆ ತಿಂದು ಮುಗಿಸಿದ್ದರು. ಇಲ್ಲಿ ತಪ್ಪಾದದ್ದು ಎಲ್ಲೆಂದು ಆನಂತರದಲ್ಲಿ ಹಿರಿಯರಿಗೆ ಫೋನಾಯಿಸಿದಾಗ ತಯಾರಿಸಿದ ವಿಧಾನ, ಅಳತೆ ತಿಳಿದು ಕಿವಿ ತೂತಾಗುವಂತೆ ಅವರೆಲ್ಲಾ ಗಹಗಹಿಸಿ ನಗುತ್ತಿದ್ದರೆ ಹ್ಯಾಪ್‌ಮೋರೆ ಹಾಕಿಕೊಂಡು ನಿಲ್ಲುವ ಸರದಿ ನಮ್ಮದಾಗಿತ್ತು. ಅದವರಿಗೆ ಕಾಣಿಸಲಿಲ್ಲ ಬಿಡಿ. ಇನ್ನು ಕೈಯಾಡಲು ಸಾಧ್ಯವಿಲ್ಲದಷ್ಟು ಗೊಟಾಯಿಸಿದ್ದರ ಜೊತೆಗೆ ಅಳತೆಯಲ್ಲಿ ಉಲ್ಟಾಪುಲ್ಟಾ ಆದದ್ದು ಎಡವಟ್ಟಿಗೆ ಎಡೆಮಾಡಿತ್ತು. ಒಂದಳತೆ ರವೆಗೆ ಒಂದಳತೆ ಸಕ್ಕರೆ, ಎರಡಳತೆ ನೀರು ಅಥವಾ ಹಾಲು, ಅರ್ಧ ಅಳತೆ ತುಪ್ಪ… ಶಿರಾದ ಈ ಅಳತೆಯನ್ನು ಹೇಳಿಕೊಡುವ ಹುಮ್ಮಸ್ಸಿನಲ್ಲಿ ಒಂದಳತೆ ರವೆಗೆ ಎರಡಳತೆ ಸಕ್ಕರೆ ಒಂದಳತೆ ನೀರು ಎಂದು ತಿರುಚಿ ಹೇಳಿದ್ದೇ ಅವಾಂತರಕ್ಕೆ ಕಾರಣವಾಗಿತ್ತು .

ಮದುವೆಗೆ ಕರೆಯೋಲೆ ಕೊಟ್ಟು ಆಮಂತ್ರಿಸಲು ಬಂದವರಿಗೆಲ್ಲ  “ಶಿರಾ’ ಮಾಡಿ ಬಾಯಿ ಸಿಹಿಮಾಡುವುದು ನಮ್ಮ ಸಮುದಾಯವರ ಪದ್ಧತಿ. ಹಾಗಾಗಿ, ನಮ್ಮ ಮನೆಗೆ ಶುಭಸಮಾರಂಭಗಳಿಗೆ ಕರೆಯಲು ಯಾರೇ ಬಂದರೂ ಶಿರಾ ಮಾಡಿ ಉಪಚರಿಸುತ್ತೇವೆ. ಅಂತಹ ಸಂದರ್ಭಗಳಲ್ಲಿ “ಮಿತಿಮೀರಿದ ಸಿಹಿ ಶಿರಾ’ದ ಪ್ರಸಂಗ ಜೀವಂತಗೊಂಡು ನಗೆಯಲೆಯನ್ನು ಉಕ್ಕಿಸುತ್ತದೆ. ಇನ್ನು ಹೊಸ ಮದುಮಕ್ಕಳು ಊಟಕ್ಕೆ ಬಂದಾಗ ಅವರಿಗೂ ನಮ್ಮ ಅಳತೆಗೆಟ್ಟ ಶಿರಾದ ಪ್ರಸಂಗ ಹಾಗೂ ಅಳತೆಯನ್ನು ಸವಿಸ್ತಾರವಾಗಿ ಹೇಳಿ ತಯಾರಿಸಿ ಒಮ್ಮೆಯಾದರೂ ತಿಂದು ನೋಡುವಂತೆ ಹುರಿದುಂಬಿಸುತ್ತೇವೆ. 

– ಲತಾ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next