ಧಾರವಾಡ: ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಫೆ.19ರಿಂದ 23ರವರೆಗೆ ರಾಜ್ಯಮಟ್ಟದ ಪ್ರಥಮ ಹವ್ಯಾಸಿ ರಂಗಭೂಮಿ ಸಮಾವೇಶವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಸದಸ್ಯ ಕೆ. ಜಗುಚಂದ್ರ ಹೇಳಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಫೆ.19ರಂದು ಸಂಜೆ 5 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಸಮಾವೇಶ ಉದ್ಘಾಟಿಸಲಿದ್ದು, ಹಿರಿಯ ರಂಗಕರ್ಮಿ ಪ್ರಸನ್ನ ಸಮಾವೇಶದ ಸರ್ವಾಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ನಾಟಕ ಅಕಾಡೆಮಿ ಅಧ್ಯಕ್ಷ ಶೇಖ್ ಮಾಸ್ತರ್ ಪ್ರಾಸ್ತಾವಿಕ ನುಡಿ ಆಡಲಿದ್ದಾರೆ.
ರಂಗ ಸಂಪನ್ನರು ಮಾಲಿಕೆ ಪುಸ್ತಕವನ್ನು ನಟ ಮುಖ್ಯಮಂತ್ರಿ ಚಂದ್ರು ಬಿಡುಗಡೆ ಮಾಡಲಿದ್ದು, ಜಿಲ್ಲಾ ರಂಗ ಮಾಹಿತಿ ಮಾಲಿಕೆಯನ್ನು ವಿನಯ ಕುಲಕರ್ಣಿ ಬಿಡುಗಡೆ ಮಾಡಲಿದ್ದಾರೆ ಎಂದರು. ಮೇಯರ್ ಮಂಜುಳಾ ಅಕ್ಕೂರ ಏಳು ನಾಟಕಗಳು ಬಿಡುಗಡೆಗೊಳಿಸಲಿದ್ದು, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಸೇರಿದಂತೆ ವಿವಿಧ ನಿಗಮ ಮಂಡಳಿ ಅಧ್ಯಕ್ಷರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಹಿರಿಯ ಸಾಹಿತಿಗಳಾದ ಡಾ|ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ|ಎ. ಮುರಿಗೆಪ್ಪ, ಟಿ.ಎಸ್. ನಾಗಾಭರಣ, ಮಂಡ್ಯ ರಮೇಶ, ಸತೀಶ ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ ಎಂದರು. ಐದು ದಿನಗಳ ಕಾಲ ನಡೆಯಲಿರುವ ಸಮಾವೇಶದಲ್ಲಿ ರಂಗಭೂಮಿ: ಹೆಜ್ಜೆ ಗುರುತು, ಮುನ್ನೋಟ, ಅನುಭವ ಕಥನ ಗೋಷ್ಠಿಗಳು ಜರುಗಲಿವೆ.
ರಾಜ್ಯದ ಪ್ರತಿ ತಾಲೂಕಿನಿಂದ ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿರುವ ಪ್ರತಿನಿಧಿಯೊಬ್ಬರು ಭಾಗವಹಿಸಲಿದ್ದು, ಒಟ್ಟು ಅಂದಾಜು 300 ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮುಕ್ತ ಸಂವಾದ ನಡೆಯಲಿದ್ದು,ವಿಷಯ ತಜ್ಞರು ರಂಗಭೂಮಿ ಕುರಿತಂತೆ ವಿಷಯ ಮಂಡಿಸಲಿದ್ದಾರೆ. ಈ ಐದು ದಿನಗಳ ಕಾಲ ಐದು ನಾಟಕಗಳು ಪ್ರದರ್ಶನಗೊಳ್ಳಲಿವೆ. ಫೆ.23ರಂದು ಸಮಾವೇಶಕ್ಕೆ ತೆರೆ ಬೀಳಲಿದೆ ಎಂದರು.