Advertisement
ಹೊಸ ವೈದ್ಯಕೀಯ ಕಾಲೇಜಿಗೆ ತಲಾ 200 ಕೋಟಿ ರೂ. ಅಗತ್ಯವಿದ್ದು ಒಟ್ಟು 1200 ಕೋಟಿ ರೂ. ಬೇಕಾಗಿದೆ. ಹಣಕಾಸು ಇಲಾಖೆ ಇನ್ನೂ ಒಪ್ಪಿಗೆ ಕೊಟ್ಟಿಲ್ಲ ಎಂದು ಖುದ್ದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸದಾಗಿ ಪ್ರಾರಂಭಿಸಲು
ಘೋಷಿಸಲಾಗಿದ್ದ 6 ವೈದ್ಯಕೀಯ ಕಾಲೇಜುಗಳಿಗೆ ಹಣಕಾಸು ಬಿಡುಗಡೆ ವಿಳಂಬವಾಗುತ್ತಿದೆ. ಸದ್ಯವೇ ಆ ಕುರಿತು ಸಭೆ ಸಹ ಕರೆಯಲಾಗಿದ್ದು ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.
ಕಲಬುರಗಿ ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜು ಈಗಾಗಲೇ ಆರಂಭವಾಗಿದೆ. ಬೌರಿಂಗ್ ಆಸ್ಪತ್ರೆ ವೈದ್ಯಕೀಯ ಕಾಲೇಜು ಮುಂದಿನ ವರ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದ್ದು ಎಂಸಿಐ ಅನುಮತಿಗೆ ಕಾಯಲಾಗುತ್ತಿದೆ. ಇದರಿಂದ 150 ಹೊಸದಾಗಿ ಸೀಟು ದೊರೆಯಲಿದೆ ಎಂದರು. ಸರ್ಕಾರದ ಮತ್ತೂಂದು ಮಹತ್ವಾಕಾಂಕ್ಷಿ ಯೋಜನೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ ತೀರ್ಮಾನದಂತೆ
ಪ್ರಮುಖ ನಗರಗಳಾದ ಮೈಸೂರು, ಕಲಬುರಗಿ, ಬೆಳಗಾವಿಯಲ್ಲಿ ಇನ್ನೊಂದು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಲಿದೆ.
ಕಲಬುರಗಿ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಗೆ 110 ಕೋಟಿ ರೂ., ಮೈಸೂರಿಗೆ 140 ಕೋಟಿ ರೂ., ಬೆಳಗಾವಿಗೆ 150 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದಡಿ ಉನ್ನತೀಕರಣ ಮಾಡುತ್ತಿರುವ ಬಳ್ಳಾರಿ ಮತ್ತು ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮಾರ್ಚ್ ವೇಳೆಗೆ ಕಾರ್ಯಾರಂಭವಾಗಲಿವೆ ಎಂದರು. ಇದರ ಜತೆಗೆ
ಮೈಸೂರು ಮತ್ತು ಕಲಬುರಗಿಯಲ್ಲಿ ಅಪಘಾತ ಗಾಯಾಳುಗಳಿಗೆ ವಿಶೇಷ ಚಿಕಿತ್ಸೆ ನೀಡುವ ಟ್ರಾಮಾ ಸೆಂಟರ್ ಪ್ರಾರಂಭವಾಗಲಿವೆ ಎಂದು ತಿಳಿಸಿದರು.